ADVERTISEMENT

1.75 ಎಕರೆಯಲ್ಲಿವೆ ಎಷ್ಟೊಂದು ಬೆಳೆ: ರೈತ ಮೋತಿ ನಾಯ್ಕ್‌ರ ಕೃಷಿ ಕಾಯಕ

ಎನ್.ವಿ.ರಮೇಶ್
Published 18 ಮೇ 2022, 3:55 IST
Last Updated 18 ಮೇ 2022, 3:55 IST
ಬಸವಾಪಟ್ಟಣ ಸಮೀಪದ ಕವಳಿ ತಾಂಡಾದ ರೈತ ಮೋತಿ ನಾಯ್ಕ್ ಕಾಫಿ ಬೆಳೆಯೊಂದಿಗೆ
ಬಸವಾಪಟ್ಟಣ ಸಮೀಪದ ಕವಳಿ ತಾಂಡಾದ ರೈತ ಮೋತಿ ನಾಯ್ಕ್ ಕಾಫಿ ಬೆಳೆಯೊಂದಿಗೆ   

ಬಸವಾಪಟ್ಟಣ: ಸಮೀಪದ ಕವಳಿ ತಾಂಡಾದ ರೈತ ಮೋತಿ ನಾಯ್ಕ್‌ ತಮ್ಮ ಎರಡು ಎಕರೆ ಭೂಮಿಯಲ್ಲಿ ಅಡಿಕೆ, ಮೆಣಸು ಹಾಗೂ ವಿವಿಧ ಬೆಳೆ ಬೆಳೆದು ಯಶಸ್ಸು ಸಾಧಿಸಿದ್ದಾರೆ.

ಓದಲು ಬರೆಯಲು ಬಾರದ ಮೋತಿ ನಾಯ್ಕ ಅವರಿಗೆ ಕೃಷಿಯಲ್ಲಿ ಸದಾ ಏನಾದರೂ ಸಾಧಿಸಬೇಕು ಎಂಬ ತುಡಿತ. ಚನ್ನಗಿರಿ ತಾಲ್ಲೂಕು ಈಗ ಅಡಿಕೆ ಸೀಮೆಯಾಗುತ್ತಿರವುದು ಸಹಜವಾದ ಮಾತು. ಮೋತಿ ನಾಯ್ಕ ಅವರು 1.75 ಎಕರೆಯಲ್ಲಿ ಎಂಟು ವರ್ಷಗಳ ಹಿಂದೆ 700 ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸತೊಡಗಿದರು. ಈ ಗಿಡಗಳು ದೊಡ್ಡವಾಗುತ್ತಿದ್ದಂತೆ ಅವುಗಳಿಗೆ 700 ಕಾಳುಮೆಣಸಿನ ಬಳ್ಳಿಗಳನ್ನು ತಂದು ಹಬ್ಬಿಸಿದರು. ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಬಳಸಿ ಅಡಿಕೆ ಮತ್ತು ಮೆಣಸು ಬೆಳೆಯಲಾರಂಭಿಸಿದ ಮೇಲೆ ತಮ್ಮ ಉಳಿದ ಜಮೀನಿನಲ್ಲಿ ತೆಂಗು, ಕಾಫಿ, ದ್ರಾಕ್ಷಿ, ಸಪೋಟ, ಕಿತ್ತಳೆ, ಸೇಬು, ಹಲಸು, ಪೇರಲೆ, ನಿಂಬೆ, ಪಪ್ಪಾಯಿ, ಬಾಳೆ ಅಲ್ಲದೇ ಅರಿಸಿಣವನ್ನೂ ಬೆಳೆದಿದ್ದಾರೆ. ಅಣಬೆ ಕೃಷಿಯೂ ಇದೆ. ಇದರೊಂದಿಗೆ ಹೆಚ್ಚು ಬೇಡಿಕೆ ಇರುವ ಫೈಟರ್‌ ಕೋಳಿಗಳನ್ನೂ ಬೆಳೆಸಿ ಮಾರುತ್ತಿದ್ದಾರೆ.

‘ಅಡಿಕೆ ಮೊದಲು ಎಕರೆಗೆ 10 ಕ್ವಿಂಟಲ್‌ ಇಳುವರಿ ಬಂದಿದ್ದು, ಈಗ ಅದರ ಪ್ರಮಾಣ ಹೆಚ್ಚಾಗಿದೆ. ಇದರಂತೆ ಮೆಣಸು ಮೊದಲು ಎಕರೆಗೆ ಆರು ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಈಗ 11 ಕ್ವಿಂಟಲ್‌ ಬರುತ್ತಿದೆ. ಮೆಣಸು ಸಹ ಅಡಿಕೆಯಂತೆ ಕ್ವಿಂಟಲಿಗೆ ₹ 50 ಸಾವಿರದಂತೆ ಮಾರಾಟವಾಗುತ್ತಿದೆ. ನಮ್ಮ ಪ್ರದೇಶದಲ್ಲಿ ಕಾಫಿ, ದ್ರಾಕ್ಷಿ ಸೇಬು ಬೆಳೆಯುವುದು ಅಸಾಧ್ಯ ಎನಿಸಿದರೂ ನಮ್ಮ ಜಮೀನಿನಲ್ಲಿ ಸಾಧ್ಯವಾಗಿದೆ. ಇದಲ್ಲದೇ ನಾನು ಉತ್ತಮವಾದ ಅಡಿಕೆ ಗೋಟುಗಳನ್ನು ತಂದು ವರ್ಷಕ್ಕೆ 15,000 ಸಸಿಗಳನ್ನು ತಲಾ ₹ 25 ರಂತೆ ಮಾರುತ್ತಿದ್ದೇನೆ. ಕೃಷಿ ಮೇಳಗಳು ಎಲ್ಲಿ ನಡೆದರೂ ಅಲ್ಲಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ಇದರಿಂದ ನನಗೆ ತುಂಬಾ ಅನುಕೂಲವಾಗಿದೆ. ನಾನು ತೋಟದಲ್ಲಿಯೇ ಚಿಕ್ಕ ಮನೆ ಮಾಡಿಕೊಂಡಿದ್ದು, ಭದ್ರಾ ನಾಲಾ ನೀರನ್ನು ಬಳಸಿ ಈ ಎಲ್ಲ ಬೆಳೆಗಳನ್ನೂ ಬೆಳೆಯುತ್ತಿದ್ದೇನೆ’ ಎಂದು ಮೋತಿ ನಾಯ್ಕ ತಿಳಿಸಿದರು.

ADVERTISEMENT

‘ನಾಡಿನ ಸಮಗ್ರ ನೀರಾವರಿ ಯೋಜನೆಯ ರೂವಾರಿ ಸರ್‌.ಎಂ.ವಿಶ್ವೇಶ್ವರಯ್ಯ ನನಗೆ ಆರಾಧ್ಯ ದೈವ. ಆದ್ದರಿಂದ ನಮ್ಮ ಮನೆಯ ಸಮೀಪದಲ್ಲಿ ಸುಂದರವಾದ ಮಂಟಪ ನಿರ್ಮಿಸಿ ಅದರಲ್ಲಿ ವಿಶ್ವೇಶ್ವರಯ್ಯನವರ ಮೂರ್ತಿಯನ್ನು ಸ್ಥಾಪಿಸಿದ್ದೇನೆ. ಪ್ರತಿ ದಿನ ಆ ಮೂರ್ತಿಗೆ ನಮಸ್ಕರಿಸಿ ನನ್ನ ಕೃಷಿ ಕಾರ್ಯ ಆರಂಭಿಸುತ್ತೇನೆ. ರೈತ ಕೇವಲ ಸಾಂಪ್ರದಾಯಿಕ ಬೆಳೆಗಳನ್ನು ನಂಬಿ ಕೊಳ್ಳದೇ ವಿವಿಧ ಬೆಳೆಗಳ ಬಗ್ಗೆ ಚಿಂತಿಸಿದಾಗ ನಷ್ಟ ದೂರವಾಗಿ ಯಾವುದಾದರೂ ಬೆಳೆ ಕೈಹಿಡಿಯುತ್ತದೆ’ ಎನ್ನುವುದು ಅವರ ಅನುಭವದ ಮಾತು.

*
ಮೋತಿ ನಾಯ್ಕ ಒಬ್ಬ ಕನಸುಗಾರ. ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲ ಅವರಿಗಿದೆ. ನಮ್ಮಂತಹ ಕೃಷಿ ತಜ್ಞರನ್ನು ಅವರ ತೋಟಕ್ಕೆ ಬರ ಮಾಡಿಕೊಂಡು ಸಲಹೆ–ಸಹಕಾರ ಕೇಳುತ್ತಾರೆ. ನಮ್ಮ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಬಂದಿದೆ. ಕೃಷಿ ಇಲಾಖೆ ಅವರಿಗೆ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಬೇಕು.
– ಡಾ.ನಾಗರಾಜ ಕುಸಗೂರ್‌, ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.