ADVERTISEMENT

ದಾವಣಗೆರೆಗೆ ವಿಮಾನ: ಗರಿಗೆದರಿದ ಕನಸು

ದಶಕಗಳ ಕಾಲ ಮಾತಲ್ಲೇ ಹಾರಿಸಿದ್ದ ವಿಮಾನ ನಿಜವಾಗಿ ಹಾರಲಿ ಎಂಬುದು ಸ್ಥಳೀಯರ ಕನಸು

ಬಾಲಕೃಷ್ಣ ಪಿ.ಎಚ್‌
Published 21 ಫೆಬ್ರುವರಿ 2022, 5:42 IST
Last Updated 21 ಫೆಬ್ರುವರಿ 2022, 5:42 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ದಾವಣಗೆರೆ: ಜಿಲ್ಲೆಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ಆಗಬೇಕು ಎಂಬ ಕೂಗಿಗೆ ಈಚೆಗೆ ಮತ್ತೆ ರೆಕ್ಕೆಪುಕ್ಕಗಳು ಸೇರಿವೆ. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಂಗಳ ಹಿಂದೆ ಬಂದು ತಾಲ್ಲೂಕಿನ ಕೆಲವೆಡೆ ಭೂಮಿ ಪರಿವೀಕ್ಷಣೆ ಮಾಡಿಕೊಂಡು ಹೋಗಿರುವುದು ಇದಕ್ಕೆ ಕಾರಣವಾಗಿದೆ. ಇಲ್ಲಿವರೆಗೆ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗಿದ್ದ ವಿಮಾನ ನಿಲ್ದಾಣ, ಈ ಬಾರಿಯಾದರೂ ಸಾಕಾರ ಗೊಳ್ಳಲಿದೆಯೇ ಎಂಬ ಪ್ರಶ್ನೆ ಹುಟ್ಟಿ ಹಾಕಿದೆ.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲುಕೇಂದ್ರ ವಿಮಾನಯಾನ ಸಚಿವಾಲಯವು ಜಿಲ್ಲಾಡಳಿತಕ್ಕೆ ಪತ್ರ ಬರೆದು ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿವೀಕ್ಷಣೆಗೆ ಅಧಿಕಾರಿಗಳ ತಂಡ ಬಂದಿತ್ತು. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ, ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್, ತಾಂತ್ರಿಕ ಪರಿಣಿತರಾದ ಪೂರ್ವಿಮಠ, ಪೈಲೆಟ್ ಶಮನ್ ಅವರು ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಹಿತ ಅಧಿಕಾರಿಗಳೊಂದು ವಿವಿಧ ಕಡೆಗೆ ತೆರಳಿ ಜಮೀನುಗಳನ್ನು ವೀಕ್ಷಣೆ ಮಾಡಿದ್ದರು.

ಈ ಭಾಗದಲ್ಲಿ ರೈತರ ಉತ್ಪಾದನೆಗಳು ಹೆಚ್ಚಿದೆ. ಕಾರ್ಗೊ ನಿಲ್ದಾಣ ಮಾಡಿದರೆ ರೈತರಿಗೆ ಅನುಕೂಲ ಆಗಲಿದೆ. ಕಾರ್ಗೊ ನಿಲ್ದಾಣ ಮಾಡುವುದಾದರೆ 600 ಎಕರೆ ಭೂಮಿ ಸಾಕಾಗುತ್ತದೆ. ಏರ್‌ಬಸ್ ನಿಲ್ದಾಣ ಮಾಡುವುದಾದರೆ 500 ಎಕರೆ ಜಾಗ ಬೇಕಾಗುತ್ತದೆ. ಎಟಿಆರ್ 72 ಮಾದರಿ ವಿಮಾನ ನಿಲ್ದಾಣ ನಿರ್ಮಿಸಲು 340 ಎಕರೆ ಭೂಮಿ ಸಾಕಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಮಣ್ಣಿನ ರಚನೆ, ವಾತಾವರಣ ಮುಂತಾದವುಗಳನ್ನು ಅಧ್ಯಯನ ಮಾಡಿ ವರದಿ ನೀಡಲಾಗುವುದು. ಅಷ್ಟರ ಒಳಗೆ ಯಾವ ಮಾದರಿಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ನಿರ್ಧರಿಸಿ ಎಂದು ಸೂಚಿಸಿ ತೆರಳಿದ್ದಾರೆ.

ADVERTISEMENT

ವಿಮಾನ ನಿಲ್ದಾಣ ನಿರ್ಮಿಸಲು ಅಧಿಕಾರಿಗಳ ತಂಡ ವೀಕ್ಷಿಸಿದ ಜಮೀನು ಸೂಕ್ತವಾಗಿವೆ. ಆದರೆ, ಅದು ಅಂತಿಮಗೊಂಡಿಲ್ಲ. ಅಂತಿಮಗೊಂಡರೂ ಎಲ್ಲ ಪ್ರಕ್ರಿಯೆಗಳು ಮುಗಿಯುವವರೆಗೆ ಬಹಿರಂಗ ಪಡಿಸುವಂತಿಲ್ಲ. ಬಹಿರಂಗ ಪಡಿಸಿದರೆ ಆ ಜಮೀನಿನ ಸುತ್ತಮುತ್ತಲಲ್ಲಿ ರಿಯಲ್‌ ಎಸ್ಟೇಟ್‌ನವರು ಭೂಮಿ ಖರೀದಿಸಿ ಬಿಡುತ್ತಾರೆ. ಈಗ ಇರುವ ಭೂಮಿಯ ಬೆಲೆ ಒಮ್ಮೆಲೆ ಗಗನಕ್ಕೇರುವಂತೆ ಮಾಡುತ್ತಾರೆ. ಇದೆಲ್ಲ ಸಮಸ್ಯೆಗಳು ರೈಲು ಹಳಿ ದ್ವಿಪಥ ಮಾಡುವಾಗಲೂ ಎದುರಾಗಿತ್ತು. ಇನ್ನೂ ಪರಿಹಾರವಾಗಿಲ್ಲ. ಹಾಗಾಗಿ ಈ ಬಾರಿ ಎಚ್ಚರಿಕೆಯಿಂದ ಕೆಲಸ ಮಾಡಲಾಗುತ್ತಿದೆ. ಅಂತಿಮಗೊಳ್ಳದೇ ಜಮೀನು ಯಾವುದು ಎಂಬುದನ್ನು ಬಹಿರಂಗಪಡಿಸದಿರಲು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಮಾಹಿತಿ ನೀಡಿದ್ದಾರೆ.

ಎರಡು ತಿಂಗಳುಗಳಿಂದ ವಿಮಾನ ನಿಲ್ದಾಣದ ಚರ್ಚೆಗಳು ಮುಂದಕ್ಕೆ ಬಂದಿದೆ. ಚುನಾವಣೆ ಹತ್ತಿರ ಬಂದಾಗ ಇಂಥ ಚರ್ಚೆಗಳು ಪ್ರತಿಬಾರಿ ನಡೆಯುತ್ತದೆ ಎಂದು ಕೆಲವರು ಟೀಕಿಸಿದ್ದಾರೆ. ಈ ಬಾರಿ ವಿಮಾನ ನಿಲ್ದಾಣ ಆಗೇ ಆಗುತ್ತದೆ ಎಂದು ಕೆಲವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಯಾವುದು ನಿಜವಾಗಲಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.

‘ಬಂಜರು ಭೂಮಿ ಗುರುತಿಸಿ’

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂದು ತುಂಬಾ ವರ್ಷಗಳಿಂದ ಹೇಳಲಾಗುತ್ತಿತ್ತು. ಈಗ ಎಟಿಆರ್ 72 ಮಾದರಿಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದೆ. ಜಮೀನು ಗುರುತಿಸಿದ ಕೆಲವು ಸ್ಥಳಗಳ ಪೈಕಿ ಆನಗೋಡು ಹೋಬಳಿಯ ಹಾಲುವರ್ತಿ ಗ್ರಾಮ ಕೂಡ ಒಂದಾಗಿದೆ. ಈ ಗ್ರಾಮದ ಸುತ್ತಮುತ್ತ ಅಧಿಕಾರಿಗಳು ಬಂದು ಹೋದ ಬಳಿಕ ಜನರು ನಿದ್ರೆ ಕಳೆದುಕೊಂಡಿದ್ದಾರೆ.

‘ವಿಮಾನ ನಿಲ್ದಾಣ ನಿರ್ಮಾಣ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕತೆ ಇದ್ದರೂ ರೈತರಿಗೆ ತೊಂದರೆ ನೀಡಬಾರದು. ಜಿಲ್ಲೆಯಲ್ಲಿ ಹಲವಾರು ಕಡೆ ಬಂಜರು ಭೂಮಿ ಇದೆ. ಅಲ್ಲಿಯ ಭೂಮಿಗಳನ್ನು ಗುರುತಿಸಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಅಲ್ಲಿಯ ಯುವಕರಿಗೆ ಉದ್ಯೋಗ ನೀಡಿದರೆ ಒಳ್ಳೆಯದು’ ಎನ್ನುತ್ತಾರೆ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಅಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ.

‘ಬದ್ಧತೆಯ ಪ್ರಯತ್ನವಾಗಿಲ್ಲ’

ರಾಜ್ಯ ಉದಯವಾದಾಗ ಮಧ್ಯದಲ್ಲಿ ಇರುವ ದಾವಣಗೆರೆಯನ್ನು ರಾಜಧಾನಿ ಮಾಡುವ ಪ್ರಯತ್ನಗಳು ನಡೆದಿದ್ದವು. ಪ್ರಬಲ ಜಾತಿಗಳ ಪೈಪೋಟಿಯ ಲೆಕ್ಕಾಚಾರದಲ್ಲಿ ಬೆಂಗಳೂರನ್ನೇ ರಾಜಧಾನಿ ಮಾಡಲು ಕೆಂಗಲ್‌ ಹನುಮಂತಪ್ಪ ನಿರ್ಧರಿಸಿದ್ದರು. ಆ ಕಾಲದಲ್ಲಿಯೇ ಇಲ್ಲೊಂದು ವಿಮಾನ ನಿಲ್ದಾಣ ಆಗಬೇಕು ಎಂದು ಗಾಂಜೀವೀರಪ್ಪ, ಸಿದ್ಧವೀರಪ್ಪ ಮುಂತಾದವರು ಹೋರಾಟ ಮಾಡಿದ್ದರು.

ಸರ್‌ ಎಂ. ವಿಶ್ವೇಶ್ವರಯ್ಯ ಮತ್ತು ರಾಜನಹಳ್ಳಿ ಹನುಮಂತಪ್ಪ ಒಳ್ಳೆಯ ಸ್ನೇಹಿತರಾಗಿದ್ದರು. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಹನುಮಂತಪ್ಪ ಅವರು ಕಾಟನ್‌ ಮಿಲ್‌, ಚಂದ್ರೋದಯ ಮಿಲ್‌, ರವಿ ಮಿಲ್‌ ಆರಂಭಿಸಿದ್ದರು. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನ ಬಿಟ್ಟ ಬಳಿಕ ಅವರು ಪೂಣೆಗೆ ತೆರಳುವಾಗಲೆಲ್ಲ ಹನುಮಂತಪ್ಪರ ಜತೆಗೇ ತೆರಳುತ್ತಿದ್ದರು. ಆಗಲೇ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಆರಂಭಿಸಬೇಕು ಎಂಬ ಚರ್ಚೆಗಳನ್ನು ವಿಶ್ವೇಶ್ವರಯ್ಯ ಮತ್ತು ರಾಜನಹಳ್ಳಿ ಹನುಮಂತಪ್ಪ ನಡೆಸಿದ್ದರಂತೆ.

ಕೆಲವೇ ಕುಟುಂಬಗಳು ಶ್ರೀಮಂತರಾಗಿದ್ದರಿಂದ ವಿಮಾನ ನಿಲ್ದಾಣದ ಬಗ್ಗೆ ಈ ರೀತಿಯ ಪ್ರಸ್ತಾವಗಳು ಅಲ್ಲಲ್ಲಿ ಆಗುತ್ತಿದ್ದರೂ ದೊಡ್ಡ ಮಟ್ಟದ ಒತ್ತಾಯಗಳು ಇರಲಿಲ್ಲ. ಜನಸಾಮಾನ್ಯರಿಗೆ ಅದು ಅಗತ್ಯವೂ ಆಗಿರಲಿಲ್ಲ. ಬಳಿಕ ಬಂದ ರಾಜಕಾರಣಿಗಳೆಲ್ಲ ಶ್ರೀಮಂತರಾಗತೊಡಗಿದ್ದರಿಂದ, ಸಣ್ಣ–ಸಣ್ಣ ಪುಡಾರಿಗಳೂ ವಿಮಾನದಲ್ಲಿ ಸಾಗುವಷ್ಟು ಆರ್ಥಿಕವಾಗಿ ಬೆಳೆದಿದ್ದರಿಂದ, ವಾಣಿಜ್ಯ ಕೇಂದ್ರವಾಗಿ, ಶೈಕ್ಷಣಿಕ ಕೇಂದ್ರವಾಗಿ ಗಟ್ಟಿಯಾಗಿದ್ದರಿಂದ ದಾವಣಗೆರೆಗೆ ವಿಮಾನ ನಿಲ್ದಾಣ ಅಗತ್ಯವಿದೆ ಎಂಬ ಕೂಗಿಗೆ ಬಲ ಬಂತು. ಆದರೆ, ವಿಮಾನ ನಿಲ್ದಾಣ ತರುವ ಬದ್ಧತೆಯನ್ನು ಯಾರೂ ತೋರಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಚಿದಾನಂದ ವಿವರಿಸಿದರು.

‘3 ಜಿಲ್ಲೆಯ ಸಂಸದರು ಸೇರಿಯೇ ಮನವಿ’

‘ದಾವಣಗೆರೆಯ ಸಂಸದನಾದ ನಾನು, ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಹಾವೇರಿಯ ಸಂಸದ ಶಿವಕುಮಾರ ಸಿ.ಉದಾಸಿ ಮೂವರು ಸೇರಿಯೇ ಮೂರು ಜಿಲ್ಲೆಗಳಿಗೆ ಉಪಯೋಗ ವಾಗುವಂತೆ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ವಿಮಾನಯಾನ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೇವೆ. ಹಾಗಾಗಿ ಈ ಮೂರು ಜಿಲ್ಲೆಗಳ ಮಧ್ಯೆ ವಿಮಾನ ನಿಲ್ದಾಣಕ್ಕೆ ಸ್ಪರ್ಧೆ ಇಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಅಗತ್ಯ ಇರುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಪತ್ರವ್ಯವಹಾರಗಳು ನಡೆದಿವೆ. ಭೂಮಿ ಎಲ್ಲಿ ಎಂಬುದು ಅಂತಿಮಗೊಂಡಿಲ್ಲ.ವಿಮಾನ ನಿಲ್ದಾಣ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸಂಸದರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ವಿಮಾನ ನಿಲ್ದಾಣಕ್ಕೆ ಇಟ್ಟ ಜಾಗ ವಿಮಾನ್‌ಮಟ್ಟಿ ಅಲ್ಲ’

ಟಿ.ವಿ. ಸ್ಟೇಷನ್‌ ಕೆರೆ ಮುಂಭಾಗದ ಪ್ರದೇಶಕ್ಕೆ ‘ವಿಮಾನ್‌ಮಟ್ಟಿ’ ಎಂದು ಕರೆಯಲಾಗುತ್ತದೆ. ಆದರೆ, ಅದು ವಿಮಾನ ನಿಲ್ದಾಣ ಮಾಡಲು ಮೀಸಲಿಟ್ಟ ಜಮೀನು ಅಲ್ಲ ಎಂದು ಹಿರಿಯ ಪತ್ರಕರ್ತ ಎಚ್‌.ಬಿ. ಮಂಜುನಾಥ
ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮೊದಲ ಗೃಹಸಚಿವರಾಗಿದ್ದ ಎಚ್‌. ಸಿದ್ದವೀರಪ್ಪ ಅವರು ದಾವಣಗೆರೆಯ ಜನರಿಗಾಗಿ ನಗರ ಸುತ್ತಾಟಕ್ಕಾಗಿ ಒಂದು ಡಕೋಟ ವಿಮಾನದ ಹಾರಾಟದ ವ್ಯವಸ್ಥೆ ಮಾಡಿದ್ದರು. ಈಗಿನ ವಿಮಾನ್‌ಮಟ್ಟಿಯು ಆಗ ವಿಶಾಲವಾದ ಖಾಲಿ ಸ್ಥಳವಾಗಿತ್ತು. ಆ ಸಣ್ಣ ವಿಮಾನ ಇಳಿಯಲು ಮತ್ತು ಏರಲು ಈ ಸ್ಥಳವನ್ನು ಬಳಸಿಕೊಳ್ಳಲಾಗಿತ್ತು. ವಿಮಾನದಲ್ಲಿ ಹೋಗಬೇಕು ಎಂದು ಆಸೆ ಇದ್ದವರು ಅಲ್ಲಿ ಹಣ ಕಟ್ಟಿ ನಗರದಲ್ಲಿ ಒಂದು ಸುತ್ತು ಹಾಕುತ್ತಿದ್ದರು. ಹಾಗಾಗಿ ಅಲ್ಲಿಗೆ ವಿಮಾನ್‌ಮಟ್ಟಿ ಎಂಬ ಹೆಸರು ಬಂತು. ಅಲ್ಲಿಯೇ ಮುಂದೆ ವಿಮಾನ ನಿಲ್ದಾಣ ಆಗಬೇಕು ಎಂಬ ಕಾರಣಕ್ಕೆ ಅದೇನು ಮೀಸಲಿಟ್ಟ ಸ್ಥಳವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಬಹುತೇಕ ಕೈಗಾರಿಕೆಗಳು ಹೋದವು. ಆದರೂ ಇಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದಿವೆ. ಸಂಪನ್ಮೂಲ ವ್ಯಕ್ತಿಗಳು ದೆಹಲಿ, ಕೋಲ್ಕತ್ತ ಸಹಿತ ವಿವಿಧ ಕಡೆಗಳಿಂದ ಬರುತ್ತಾರೆ. ಮೂರೇ ಗಂಟೆಯಲ್ಲಿ ಬೆಂಗಳೂರಿಗೆ ತಲುಪುವ ಅವರು, ಅಲ್ಲಿಂದ ದಾವಣಗೆರೆಗೆ ಬರಲು
ನಾಲ್ಕೈದು ಗಂಟೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೇರವಾಗಿ ಇಲ್ಲಿಗೆ ಬರಲು ಸಾಧ್ಯವಾಗಬೇಕಿದ್ದರೆ ವಿಮಾನ ನಿಲ್ದಾಣ ಆಗಬೇಕು. ಆದರೆ, ಇಲ್ಲಿ ಹೇಳಿಕೆಗಳಿಗೆ ಸೀಮಿತವಾಗಿದ್ದೇ ಹೆಚ್ಚು, ಹೊರತು ಒತ್ತಡ ಹಾಕಿದ್ದು ಕಡಿಮೆ ಎಂಬುದು ಅವರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.