
ದಾವಣಗೆರೆ: ಮಹಿಳಾ ಸ್ವಾವಲಂಬಿನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಎಂಎಲ್) ಅಡಿ ದಾವಣಗೆರೆ ಹಾಗೂ ಹರಿಹರದಲ್ಲಿ ಸ್ಥಾಪಿಸಿರುವ ‘ಅಕ್ಕ ಕೆಫೆ’ಗೆ ನಿರೀಕ್ಷೆ ಮೀರಿದ ಸ್ಪಂದನೆ ದೊರಕಿದ್ದು, ಜಿಲ್ಲೆಯಲ್ಲಿ ಮತ್ತೆ ಐದು ‘ಅಕ್ಕ ಕೆಫೆ’ಗಳಿಗೆ ಮಂಜೂರಾತಿ ಸಿಕ್ಕಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಎನ್‌ಆರ್‌ಎಂಎಲ್ ಜೊತೆಗೂಡಿ ‘ಅಕ್ಕ ಕೆಫೆ’ಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ನೂತನ ಕೆಫೆಗಳಿಗೆ ಸ್ಥಳ ಗುರುತಿಸಿ, ಆರ್ಥಿಕ ಮಂಜೂರಾತಿಗೆ ಕೋರಿ ಪ್ರಸ್ತಾವ ಸಲ್ಲಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ‘ಅಕ್ಕ ಕೆಫೆ’ಗಳ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ.
ದಾವಣಗೆರೆಯ ಪಿ.ಬಿ. ರಸ್ತೆಯ ಅರುಣಾ ಚಿತ್ರಮಂದಿರ ವೃತ್ತದ ಸಮೀಪದಲ್ಲಿರುವ ‘ಅಕ್ಕ ಕೆಫೆ’ ಜ.20ರಂದು ಉದ್ಘಾಟನೆಯಾಗಿತ್ತು. ಕಾಡಜ್ಜಿಯ ‘ಕಾವೇರಿ ಸ್ವ-ಸಹಾಯ ಸಂಘ’ವು ಇದನ್ನು ನಿರ್ವಹಿಸುತ್ತಿದೆ. ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೀಪದ ‘ಅಕ್ಕ ಕೆಫೆ’ಯನ್ನು ಐವರು ಮಹಿಳೆಯರ ಗುಂಪು ನಿರ್ವಹಿಸುತ್ತಿದೆ. ಇದೇ ಮಾದರಿಯ ಕೆಫೆಗಳು ಜಿಲ್ಲೆಯ ಹಲವೆಡೆ ಕಾರ್ಯಾರಂಭವಾಗಲಿವೆ.
ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮ ಪಂಚಾಯಿತಿ, ಜಗಳೂರು ತಾಲ್ಲೂಕು ಪಂಚಾಯಿತಿ, ದಾವಣಗೆರೆ ಜಿಲ್ಲಾ ಪಂಚಾಯಿತಿ, ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಚೇರಿಗಳ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. ಅಗತ್ಯ ಕಟ್ಟಡ ಒದಗಿಸುವಂತೆ ಚನ್ನಗಿರಿ ಪುರಸಭೆಗೂ ಮನವಿ ಸಲ್ಲಿಸಲಾಗಿದೆ. ಆರ್ಥಿಕ ಅನುಮೋದನೆ ದೊರಕಿದ ಬಳಿಕ ಕೆಫೆ ಆರಂಭದ ಕಾರ್ಯ ಶುರುವಾಗಲಿದೆ. ಈ ಕೆಫೆಗಳಲ್ಲಿ ರಿಯಾಯಿತಿ ದರದಲ್ಲಿ ತಿಂಡಿ, ಊಟ ಲಭ್ಯವಾಗಲಿವೆ.
‘ಅಕ್ಕ ಕೆಫೆ’ಗೆ ಸರ್ಕಾರ ₹ 15 ಲಕ್ಷ ನೆರವು ನೀಡಲಿದೆ. ಸರ್ಕಾರಿ ಕಟ್ಟಡದಲ್ಲಿಯೇ ಕೆಫೆಯನ್ನು ಸ್ಥಾಪಿಸಲಾಗುತ್ತದೆ. ಕೇರಳದ ‘ಕುಟುಂಬಶ್ರೀ’ ಸಂಸ್ಥೆಯ ಮಾರ್ಗದರ್ಶನದಲ್ಲಿ ಕೆಫೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅಗತ್ಯ ಪೀಠೋಪಕರಣ, ಒಲೆ, ವಿದ್ಯುತ್ ಸಂಪರ್ಕ, ಸಿ.ಸಿ. ಟಿವಿ ಕ್ಯಾಮೆರಾ ಸೇರಿ ಇತರ ಪರಿಕರಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುತ್ತದೆ. ಪಾತ್ರೆ, ಅಡುಗೆ ಅನಿಲ, ಫ್ರಿಜ್ ಸೇರಿದಂತೆ ಇತರ ಸಾಮಗ್ರಿಗಳನ್ನು ಸ್ವ–ಸಹಾಯ ಸಂಘ ಖರೀದಿಸಬೇಕು.
‘ಕುಟುಂಬಶ್ರೀ’ ಸಂಸ್ಥೆ ಕೆಫೆಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಿದೆ. ಸ್ಥಳ ಪರಿಶೀಲಿಸಿ, ಸಮೀಕ್ಷೆ ನಡೆಸಿ ಊಟ, ತಿಂಡಿಗೆ ದರ ನಿಗದಿ ಮಾಡುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಕೆಫೆಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಸ್ವಚ್ಛತೆ, ವಹಿವಾಟು, ರುಚಿ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಶ್ರೇಯಾಂಕ ನೀಡುತ್ತದೆ. ‘ಸಿ’ ಶ್ರೇಯಾಂಕ ಪಡೆದ ಕೆಫೆಯ ಸ್ವ–ಸಹಾಯ ಸಂಘದ ಹೊಣೆಯನ್ನು ಬದಲಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಿ. ರೇಷ್ಮಾ ಕೌಸರ್ ವಿವರಿಸಿದರು.
‘ಅಕ್ಕ ಕೆಫೆ’ ಯಶಸ್ಸು ಮಹಿಳಾ ಸ್ವಸಹಾಯ ಸಂಘಗಳನ್ನು ಆಕರ್ಷಿಸಿದೆ. ಹೊಸ ಕೆಫೆಗಳಿಗೆ ಅವಕಾಶ ಕಲ್ಪಿಸುವಂತೆ ಕೋರಿ ತಾಲ್ಲೂಕು ಪಂಚಾಯಿತಿ ಇ.ಒ.ಗೆ ಹಲವು ಸ್ವ–ಸಹಾಯ ಸಂಘಗಳು ಅರ್ಜಿ ಸಲ್ಲಿಸುತ್ತಿವೆ. ₹ 2 ಲಕ್ಷ ಬಂಡವಾಳ ಹೂಡುವ ಸಾಮರ್ಥ್ಯ ಹೊಂದಿದ, ಅಡುಗೆ ಹಾಗೂ ಹೋಟೆಲ್ ಉದ್ಯಮ ನಿರ್ವಹಣೆಯ ಕೌಶಲ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.

- ಸ್ವ–ಸಹಾಯ ಸಂಘದ ಮಹಿಳೆಯರ ಸ್ವಾವಲಂಬನೆಗೆ ‘ಅಕ್ಕ ಕೆಫೆ’ ಸಹಕಾರಿಯಾಗಿದೆ. ಹೋಟೆಲ್ ಉದ್ಯಮಕ್ಕೆ ಪ್ರೇರಣೆ ನೀಡಲು ಅನುಕೂಲವಾಗುತ್ತಿದೆ. ಹಲವು ಸಂಘಗಳು ಉತ್ಸುಕತೆ ತೋರಿವೆಜಿ. ರೇಷ್ಮಾ ಕೌಸರ್ ಯೋಜನಾ ನಿರ್ದೇಶಕಿ ಜಿಲ್ಲಾ ಪಂಚಾಯಿತಿ
ಯಶಸ್ಸಿನ ಹಾದಿಯಲ್ಲಿ ಕೆಫೆ
ಜಿಲ್ಲೆಯಲ್ಲಿರುವ ಎರಡು ಅಕ್ಕ ಕೆಫೆಗಳು ಆರಂಭದಲ್ಲಿ ಎದುರಾದ ತೊಡಕುಗಳನ್ನು ಮೀರಿ ಯಶಸ್ಸಿನ ಹಾದಿಗೆ ಹೊರಳಿವೆ. ಸಭೆ ಸಮಾರಂಭಗಳಿಗೆ ಊಟ ತಿಂಡಿಯನ್ನು ಒದಗಿಸುವ ಕ್ಯಾಟರಿಂಗ್ ಸೇವೆಯನ್ನು ಒದಗಿಸಲಾರಂಭಿಸಿವೆ. ಸರ್ಕಾರಿ ಕಚೇರಿ ಸಭೆ ಹಾಗೂ ಸಮಾರಂಭಗಳಿಗೆ ಅಗತ್ಯವಿರುವ ತಿಂಡಿ ಊಟವನ್ನು ‘ಅಕ್ಕ ಕೆಫೆ’ಯಿಂದ ಪಡೆಯುವಂತೆ ಎನ್‌ಆರ್‌ಎಲ್‌ಎಂ ಎಲ್ಲ ಇಲಾಖೆಗೆ ಕೋರಿಕೆ ಸಲ್ಲಿಸಿದೆ. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಈ ಕೆಫೆಗಳಿಗೆ ಆಸರೆಯಾಗಿವೆ. ದಾವಣಗೆರೆಯ ಕೆಫೆ ಮದುವೆ ಸಮಾರಂಭಕ್ಕೂ ಆಹಾರ ಪೂರೈಕೆ ಮಾಡತೊಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.