ADVERTISEMENT

ಸೇವಾಲಾಲ್ ಜಯಂತಿಗೆ ಸಕಲ ಸಿದ್ಧತೆ: 14ರಂದು ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:32 IST
Last Updated 12 ಫೆಬ್ರುವರಿ 2020, 14:32 IST
ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ನಡೆಯಲಿರುವ ಸೇವಾಲಾಲ್ ಮತ್ತು ಮರಿಯಮ್ಮದೇವಿ ಜಯಂತ್ಯುತ್ಸವಕ್ಕೆ ಬಳ್ಳಾರಿ, ರಾಯಚೂರು ವಿವಿಧ ಜಿಲ್ಲೆಗಳಿಂದ ಸೇವಾಲಾಲ್ ಮಾಲಾಧಾರಿಗಳು ಬುಧವಾರ ಪಾದಯಾತ್ರೆ ಹೊರಟರು
ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ನಡೆಯಲಿರುವ ಸೇವಾಲಾಲ್ ಮತ್ತು ಮರಿಯಮ್ಮದೇವಿ ಜಯಂತ್ಯುತ್ಸವಕ್ಕೆ ಬಳ್ಳಾರಿ, ರಾಯಚೂರು ವಿವಿಧ ಜಿಲ್ಲೆಗಳಿಂದ ಸೇವಾಲಾಲ್ ಮಾಲಾಧಾರಿಗಳು ಬುಧವಾರ ಪಾದಯಾತ್ರೆ ಹೊರಟರು   

ನ್ಯಾಮತಿ:ಬಂಜಾರ ಸಮುದಾಯದ ಜಗದ್ಗುರು ಸಂತ ಸೇವಾಲಾಲ್ ಅವರ 281ನೇ ಜಯಂತ್ಯುತ್ಸವ ಫೆ. 13ರಿಂದ 15ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ದೇಶದ ನಾನಾ ಭಾಗಗಳಿಂದ ಸೇವಾಲಾಲ್ ಭಕ್ತರು ಇಲ್ಲಿಗೆ ಬರುತ್ತಾರೆ. ಮಾಲಾಧಾರಿಗಳು ಪಾದಯಾತ್ರೆ ಮೂಲಕ ಬರುತ್ತಾರೆ. ಮೂಲಸೌಲಭ್ಯ, ಸಾರಿಗೆ, ವಸತಿ, ಊಟ, ಶೌಚಾಲಯ, ಬೆಳಕಿನ ವ್ಯವಸ್ಥೆ ಒದಗಿಸಿ ಜಯಂತಿಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಭಾಯಗಡ್ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಗಳು ಮುಂದಾಗಿವೆ.

ಸುಂದರ ಪರಿಸರದಲ್ಲಿರುವ ಸೇವಾಲಾಲ್‌ ಜನ್ಮಸ್ಥಾನ ಸೂರಗೊಂಡನಕೊಪ್ಪದಲ್ಲಿ ಈಗಾಗಲೇ ಅಭಿವೃದ್ದಿ ಕಾರ್ಯಗಳು ನಡೆದಿವೆ. ಕಲ್ಯಾಣ ಮಂಟಪ, ದಾಸೋಹ ಭವನ, ಸಭಾ ಭವನ, ಬಂಜಾರ ಸಂಸ್ಕೃತಿ ಬಿಂಬಿಸುವ ಮತ್ತು ಸೇವಾಲಾಲ್ ಅವರ ಪವಾಡ ಬಿಂಬಿಸುವ ಕಲಾಕೃತಿಗಳು, ವಸತಿಗೃಹಗಳು, ಪ್ರವೇಶದ್ವಾರ ನಿರ್ಮಾಣ ಕಾರ್ಯಗಳು ನಡೆದಿವೆ. ಇದು ಈಗ ಪ್ರವಾಸಿಗರ ಸ್ಥಳವಾಗಿದೆ.

ADVERTISEMENT

ಫೆ. 13ರಿಂದ ವಿವಿಧ ಧಾರ್ಮಿಕ, ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. 14ರಂದು ನಡೆಯುವ ಜಾತ್ರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಉಪ ಮುಖ್ಯಮಂತ್ರಿಗಳು, ಸಚಿವರು, ಬಂಜಾರ ಸಮುದಾಯದ ಶಾಸಕರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ಸ್ಥಳಕ್ಕೆ ಅಧಿಕಾರಿಗಳನ್ನು ನಿಯೋಜಿಸಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ. ಶಾಶ್ವತ ಯೋಜನೆಗಳು ಕೆರೆ ಪುನಶ್ಚೇತನ, ಸಂಪ‍ರ್ಕ ರಸ್ತೆ, 40 ಎಕೆರೆ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಕ್ಕೆ ದೊಡ್ಡಕೆರೆ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನಾಲ್ಕು ಓವರ್‌ಹೆಡ್‌ ಟ್ಯಾಂಕ್ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷ ರುದ್ರಪ್ಪ ಎಂ.ಲಮಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.