ADVERTISEMENT

ಪೊಲೀಸ್‌ ಕೆಲಸಕ್ಕೆ ರಾಜೀನಾಮೆ ನೀಡಿದರೂ ಟಿಕೆಟ್‌ ಸಿಗಲಿಲ್ಲ!

ಅಭ್ಯರ್ಥಿ ಪಟ್ಟಿ ಬಿಡುಗಡೆಗೆ ಮೊದಲೇ ‘ಬಿ’ ಫಾರ್ಮ್‌ ಪಡೆದಿದ್ದ ಬಿ.ಪಿ. ಹರೀಶ್‌

ಬಾಲಕೃಷ್ಣ ಪಿ.ಎಚ್‌
Published 20 ಮಾರ್ಚ್ 2023, 6:34 IST
Last Updated 20 ಮಾರ್ಚ್ 2023, 6:34 IST
ಬಿ.ಪಿ. ಹರೀಶ್‍
ಬಿ.ಪಿ. ಹರೀಶ್‍   

ದಾವಣಗೆರೆ: ಹರಿಹರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಪಕ್ಷವು ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸುವ ಮೊದಲೇ ಇನ್ನೊಬ್ಬರು ‘ಬಿ’ ಫಾರ್ಮ್‌ ಪಡೆದು ಆಕಾಂಕ್ಷಿ ಇನ್‌ಸ್ಪೆಕ್ಟರ್‌ಗೆ ನಿರಾಸೆಯನ್ನೂ ಮಿಕ್ಕವರಿಗೆ ಅಚ್ಚರಿಯನ್ನೂ ಮೂಡಿಸಿದ್ದರು.

2018ರ ಚುನಾವಣೆ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ಟಿಕೆಟ್‌ ಕೋರಿದ್ದವರು ಹರಿಹರ ತಾಲ್ಲೂಕಿನ ಕುಣಿಬೆಳಕೆರೆಯ ದೇವೇಂದ್ರಪ್ಪ. ಪಟ್ಟಿ ಪ್ರಕಟವಾಗುವ ಮೊದಲೇ ‘ಬಿ’ ಫಾರ್ಮ್‌ ಪಡೆದವರು ಮಾಜಿ ಶಾಸಕ ಬಿ.ಪಿ. ಹರೀಶ್‌.

ದೇವೇಂದ್ರಪ್ಪ ಬಳ್ಳಾರಿಯಲ್ಲಿ ಎಸ್‌.ಐ ಆಗಿದ್ದ ವೇಳೆ ರೆಡ್ಡಿ ಸಹೋದದರು ಮತ್ತು ಶ್ರೀರಾಮುಲು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಇನ್‌ಸ್ಪೆಕ್ಟರ್‌ ಆಗಿ ಕೋಲಾರಕ್ಕೆ ವರ್ಗವಗಿ ಹೋದರೂ ಈ ಆಪ್ತ ಸಂಬಂಧ ಹಾಗೇ ಉಳಿದಿತ್ತು. 2018ರ ಚುನಾವಣೆ ಸಂದರ್ಭ ಹರಿಹರದಲ್ಲಿ ನಡೆದಿದ್ದ ಮೆರವಣಿಗೆಯಲ್ಲಿ ಜನಾರ್ದನ ರೆಡ್ಡಿ ಅವರೊಂದಿಗೆ ದೇವೇಂದ್ರಪ್ಪ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ನೆಚ್ಚಿನ ನಾಯಕನನ್ನು ತಮ್ಮ ಮನೆಗೂ ಕರೆದುಕೊಂಡು ಹೋಗಿದ್ದರು. ಸರ್ಕಾರಿ ಉದ್ಯೋಗಿಯಾಗಿದ್ದು, ರಾಜಕೀಯ ಮೆರವಣಿಗೆಯಲ್ಲಿ ಸಕ್ರಿಯರಾಗಿದ್ದ ಬಗ್ಗೆ ದೂರು ಕೇಳಿಬಂದಿತ್ತು. ಆಗ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಟಿಕೆಟ್‌ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸ ಅವರದ್ದಾಗಿತ್ತು.

ADVERTISEMENT

ಅವರ ಓಡಾಟ ಜೋರಾಗಿ ನಡೆಯುತ್ತಿದ್ದಾಗ ಮಾಜಿ ಶಾಸಕ ಬಿ.ಪಿ. ಹರೀಶ್‌ ಟಿಕೆಟ್‌ ಪಡೆಯಲು ಪಕ್ಷದೊಳಗೆ ಸದ್ದಿಲ್ಲದೇ ಪ್ರಭಾವ ಬೀರಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಹರೀಶ್‌, ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಮೊದಲೇ ‘ಬಿ’ ಫಾರ್ಮ್‌ ಪಡೆದುಕೊಂಡಿದ್ದರಲ್ಲದೆ, ಅದನ್ನು ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಕೈಗೆ ಕೊಟ್ಟು ಬಂದಿದ್ದರು.

1982ರಿಂದಲೇ ರಾಜಕಾರಣದಲ್ಲಿದ್ದುಕೊಂಡು ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಹರೀಶ್‌ ದಾಳದ ಮುಂದೆ ಬೇರೆ ಆಕಾಂಕ್ಷಿಗಳ ಕಸರತ್ತು ನಡೆಯಲಿಲ್ಲ. ಅಭ್ಯರ್ಥಿಗಳ ಘೋಷಣೆಯಾಗುವ ಮೊದಲೇ ‘ಬಿ’ ಫಾರ್ಮ್‌ ಪಡೆದ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಂಬಿತವಾಗಿತ್ತು.

ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನೊಂದಿಗೆ ಸ್ಪರ್ಧಿಸಬೇಕೆಂಬ ಮಹದಾಸೆ ಹೊಂದಿದ್ದ ದೇವೇಂದ್ರಪ್ಪ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಟಿಕೆಟ್‌ ನೀಡುವಂತೆ ಈ ಬಾರಿಯೂ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಬಿ.ಪಿ. ಹರೀಶ್‌ ಎಂದಿನಂತೆ ಆಕಾಂಕ್ಷಿಯಾಗಿದ್ದಾರೆ.

‘ಬಿ’ ಫಾರ್ಮ್‌ ಅಲ್ಲೇ ಕೊಟ್ಟು ಬಂದಿದ್ದೆ

‘ನನಗೆ ‘ಬಿ’ ಫಾರ್ಮ್‌ ಸಿಕ್ಕಿತ್ತು. ಆದರೆ, ನಾನೇ ತರುವುದು ಸರಿಯಲ್ಲ ಎಂದು ‘ಬಿ’ ಫಾರ್ಮ್‌ ಅನ್ನು ಯಡಿಯೂರಪ್ಪ ಅವರ ಸಹಾಯಕ ಸಂತೋಷ್‌ ಕೈಗೆ ಕೊಟ್ಟಿದ್ದೆ. ಇದನ್ನು ನಮ್ಮ ಸಂಸದರಾದ ಜಿ.ಎಂ. ಸಿದ್ದೇಶ್ವರ ಅವರ ಕೈಯಲ್ಲಿ ಕೊಡಿ. ಅವರು ನನಗೆ ಅಧಿಕೃತವಾಗಿ ಹಸ್ತಾಂತರಿಸಲಿ ಎಂದು ಹೇಳಿದ್ದೆ. ಮೊದಲೇ ‘ಬಿ’ ಫಾರ್ಮ್‌ ಪಡೆದಿರುವುದು ಮಾಧ್ಯಮಗಳಲ್ಲಿ ಪ್ರಸಾರ ಆದಾಗ ಯಡಿಯೂರಪ್ಪ ಅವರೇ ಕರೆ ಮಾಡಿ ವಿಚಾರಿಸಿದ್ದರು. ನಾನು ಪ್ರಚಾರ ಮಾಡಿಲ್ಲ. ಅಲ್ಲೇ ಕೊಟ್ಟು ಬಂದಿದ್ದಾಗಿ ತಿಳಿಸಿದ್ದೆ’ ಎಂದು ಬಿ.ಪಿ. ಹರೀಶ್‌ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.