ADVERTISEMENT

ಅಂಬೇಡ್ಕರ್‌ವಾದಿಗಳಾಗಿ ಎಂದರೆ ಅವಕಾಶವಾದಿಗಳಾದರು: ಜ್ಞಾನ ಪ್ರಕಾಶ ಸ್ವಾಮೀಜಿ ಬೇಸರ

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 3:45 IST
Last Updated 7 ಡಿಸೆಂಬರ್ 2021, 3:45 IST
ಹರಿಹರದ ಮೈತ್ರಿವನದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ, ಡಿಎಸ್–4 ಸಂಸ್ಥಾಪನಾ ದಿನ ಹಾಗೂ ರಾಜ್ಯ ಕಾರ್ಯಕಾರಿಣಿಯನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು.
ಹರಿಹರದ ಮೈತ್ರಿವನದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ, ಡಿಎಸ್–4 ಸಂಸ್ಥಾಪನಾ ದಿನ ಹಾಗೂ ರಾಜ್ಯ ಕಾರ್ಯಕಾರಿಣಿಯನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು.   

ಹರಿಹರ: ‘ಡಾ.ಬಿ.ಆರ್‌. ಅಂಬೇಡ್ಕರ್ ಹೆಸರು ಹೇಳುವವರು ಇಂದು ಅವಕಾಶವಾದಿಗಳಾಗಿದ್ದಾರೆ. ಸಾಧಕರಾಗಿ ಎಂದರೆ ಸಮಯ ಸಾಧಕರಾಗಿದ್ದಾರೆ. ಜನ್ಮದಿನ, ಪುಣ್ಯತಿಥಿ ಆಚರಣೆಗೆ ಅಂಬೇಡ್ಕರ್ ಅವರನ್ನು ಸೀಮಿತಗೊಳಿಸಿದ್ದೇವೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರ ಹೊರವಲಯದ ಮೈತ್ರಿವನದಲ್ಲಿ ಸೋಮವಾರ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ, ‘ಡಿಎಸ್–4’ ಸಂಸ್ಥಾಪನಾ ದಿನ ಹಾಗೂ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಣ ಗಳಿಸಲು ಸಾಕಷ್ಟು ಅವಕಾಶಗಳಿದ್ದರೂ ಅಂಬೇಡ್ಕರ್ ಎಂದಿಗೂ ಕೈಚಾಚಲಿಲ್ಲ. ತಮ್ಮ ಸಿದ್ಧಾಂತದ ಜೊತೆಗೆ ರಾಜಿ ಮಾಡಿಕೊಳ್ಳಲಿಲ್ಲ’ ಎಂದು ಸ್ಮರಿಸಿದರು.

‘ರಾಜಕೀಯ ಅಧಿಕಾರ ಪಡೆಯದ ಹೊರತು ಶೋಷಿತ ವರ್ಗದವರ ಅಭಿವೃದ್ಧಿ ಸಾಧ್ಯವಿಲ್ಲ. ಮೂಗಿಗೆ ತುಪ್ಪ ಸವರಿದಂತೆ ಕೆಳ ಹಂತದ ಸ್ಥಾನಮಾನ ಪಡೆದು ಅಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬಾರದು’ ಎಂದು ಹೇಳಿದರು.

ADVERTISEMENT

‘ಅಂಬೇಡ್ಕರ್ ಹೇಳಿದಂತೆ ಎಸ್ಸಿ, ಎಸ್ಟಿ, ಒಬಿಸಿ ವರ್ಗದವರು ಒಂದಾಗಬೇಕು. ಈ ದೇಶದ ರಾಜಕೀಯ ಅಧಿಕಾರ ಪಡೆಯಬೇಕು. ಆ ಮೂಲಕ ಎಲ್ಲಾ ದಲಿತ, ಶೋಷಿತ ವರ್ಗದವರ ಅಭಿವೃದ್ಧಿ ಸಾಧಿಸಬೇಕು. ದಲಿತರಿಗೆ ಸಚಿವ, ಡಿಸಿಎಂ, ಸಿಎಂ ಸ್ಥಾನ ಕೊಡಿ ಎಂದು ಅಂಗಲಾಚುವುದು ಹೈಟೆಕ್ ಜೀತದ ಸಂಕೇತ’ ಎಂದರು.

‘ಅಂಬೇಡ್ಕರ್ ಇಲ್ಲದ ಭಾರತ ಸ್ಮರಿಸಲು ಸಾಧ್ಯವಿಲ್ಲ. ಈ ದೇಶದ ದಲಿತರು, ಮಹಿಳೆಯರು ಇಂದು ಮತದಾನದ ಹಕ್ಕನ್ನು ಪಡೆಯಲು ಅಂಬೇಡ್ಕರ್ ಕಾರಣ. ಅವರು ಸಂವಿಧಾನದ ಮೂಲಕ ನೀಡಿದ ಮೀಸಲಾತಿ ದಲಿತ ವರ್ಗಕ್ಕೆ ನೀಡಿದ ಸಣ್ಣ ಕಾಣಿಕೆ. ಆ ಮೂಲಕ ಸಾಧಿಸಬೇಕಾದದ್ದು ಸಾಕಷ್ಟಿದೆ’ ಎಂದು ಹೇಳಿದರು.

‘ಬ್ರಿಟಿಷ್ ಕೌನ್ಸಿಲ್ ಸರ್ಕಾರದಲ್ಲಿ ನಾಲ್ಕು ಖಾತೆಗಳ ಸಚಿವರು, ಸ್ವಾತಂತ್ರ್ಯ ಭಾರತದ ಮೊದಲ ಕಾನೂನು ಸಚಿವರಾದರೂ ಅಂಬೇಡ್ಕರ್ ಕುಟುಂಬ ಬಡತನದ ಬೇಗೆಯಲ್ಲಿತ್ತು. ಅವರು ನಾಲ್ವರು ಮಕ್ಕಳು ಚಿಕ್ಕವರಿದ್ದಾಗಲೇ ಸಾವನ್ನಪ್ಪಿದರು. ಅವರ ಪತ್ನಿ ರಮಾಬಾಯಿಗೆ ಉಡಲು ಸರಿಯಾದ ಒಂದು ಸೀರೆ ಇರಲಿಲ್ಲ’ ಎಂದರು.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮರ್ಮಗಳು’ ವಿಷಯ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ, ‘ಮಠಗಳು ಜಾತಿ ಮತ್ತು ಭ್ರಷ್ಟಾಚಾರದ ಕೂಪಗಳಾಗಿವೆ. ಬೂಟಾಟಿಕೆಯನ್ನು ಧಿಕ್ಕರಿಸಬೇಕು. ಈಗಿನ ಭಾರತ ದಿವಾಳಿ ಭಾರತವಾಗಿದೆ. ಅಭಿವೃದ್ಧಿ ಮಂತ್ರ ಜಪಿಸುತ್ತಲೇ ದೇಶದ ರಸ್ತೆ, ರೈಲು, ವಿಮಾನ ಸೇರಿ ಗಮನಾರ್ಹ ಇಲಾಖೆಗಳನ್ನು ಖಾಸಗಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

‘ಅಸ್ಪೃಶ್ಯತೆಯ ಕರಾಳತೆ ಮತ್ತು ದೌರ್ಜನ್ಯ ದಬ್ಬಾಳಿಕೆಗಳ ಅವಲೋಕನ’ ವಿಷಯ ಕುರಿತು ಉಪನ್ಯಾಸ ನೀಡಿದ ಹರಪನಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ರಾಜಪ್ಪ, ‘ಎಡಗೈ, ಬಲಗೈ ಎಂದು ದಲಿತರನ್ನು ವಿಭಜಿಸಿ ಆಳಲಾಗುತ್ತಿದೆ. ಅಂಬೇಡ್ಕರ್ ಸಿದ್ಧಾಂತದ ಬೆಳಕಿನಲ್ಲಿ ಎಲ್ಲರೂ ಒಂದಾಗಿ ಮುನ್ನಡೆಯಬೇಕಿದೆ’ ಎಂದು ಹೇಳಿದರು.

ಬಸವನಾಗಿದೇವ ಶ್ರೀ, ಸಿದ್ಧರಾಮ ಶ್ರೀ, ಮೈಸೂರಿನ ಡಾ.ಮಹೇಶ್‍ಚಂದ್ರಗುರು, ಚಿತ್ರದುರ್ಗದ ಪ್ರೊ.ಸಿ.ಕೆ. ಮಹೇಶ್, ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ್, ಹನಗವಾಡಿ ರುದ್ರಪ್ಪ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಶಾಸಕ ಎಸ್.ರಾಮಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ರುದ್ರಮುನಿ, ಡಿಎಸ್-4 ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ವಕೀಲ ರಾಘವೇಂದ್ರ ನಾಯ್ಕ್, ಹೊದಿಗೆರೆ ರಮೇಶ್, ಸೈಯದ್ ಏಜಾಜ್, ನೆರಳು ಬೀಡಿ ಸಂಸ್ಥೆಯ ಜಬೀನಾಖಾನಂ, ಸ್ಲಂ ಜನಾಂದೋಲನದ ರೇಣುಕಾ ಯಲ್ಲಮ್ಮ, ಎಸ್.ಚೈತ್ರಾ, ಸಂತೋಷ್ ನೋಟದವರ್, ಮಂಜುನಾಥ್, ಹೊನ್ನಾಳಿಯ ಎ.ಕೆ. ಚನ್ನೇಶ್ವರ ಇದ್ದರು.

ದಾವಣಗೆರೆಯ ಭಾರತೀಯ ಜನಕಲಾ ಸಮಿತಿ ಹಾಗೂ ದೀಪ ಕಮಲ ಸಂಗೀತ ಸಂಸ್ಥೆಯ ಕಲಾವಿದರು ಕ್ರಾಂತಿ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.