ADVERTISEMENT

ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರಿಂದ ಕಲ್ಲುತೂರಾಟ 

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:38 IST
Last Updated 25 ಡಿಸೆಂಬರ್ 2025, 4:38 IST
ಸಾಸ್ವೆಹಳ್ಳಿ ಕಲ್ಲುತೂರಾಟದಿಂದ ಜಖಂಗೊಂಡಿರುವ ಆಂಬುಲೆನ್ಸ್
ಸಾಸ್ವೆಹಳ್ಳಿ ಕಲ್ಲುತೂರಾಟದಿಂದ ಜಖಂಗೊಂಡಿರುವ ಆಂಬುಲೆನ್ಸ್   

ಸಾಸ್ವೆಹಳ್ಳಿ:  ಆ್ಯಂಬುಲೆನ್ಸ್ ಚಾಲಕನ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಬುಧವಾರ ಆರೋಪಿಸಿ ಮಲ್ಲಿಕಟ್ಟೆ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಬುಲೆನ್ಸ್ ಮತ್ತು ಆಸ್ಪತ್ರೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಸಮೀಪದ ಮಲ್ಲಿಕಟ್ಟೆ ಗ್ರಾಮದ ಸೈಯದ್ ಅಮೀರ್ ಜಾನ್ (65) ಎಂಬುವವರನ್ನು ಅನಾರೋಗ್ಯದ ಕಾರಣ ಬುಧವಾರ ಮಧ್ಯಾಹ್ನ ಇಲ್ಲಿನ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರಾದ ಮಂಜುನಾಥ್ ಕೆ.ಎಸ್ ಅವರು ರೋಗಿಯನ್ನು ಪರೀಕ್ಷಿಸಿ ರೋಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ರೋಗಿಯ ಸಂಬಂಧಿಗಳು ನಾವು ಹೆಚ್ಚಿನ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಕರೆ ಮಾಡಿದ್ದಾರೆ.

ADVERTISEMENT

ಈ ವೇಳೆ ಆಂಬುಲೆನ್ಸ್ ಚಾಲಕ ಸ್ಥಳದಲ್ಲಿ ಇರಲಿಲ್ಲ. ಚಾಲಕನಿಗೆ ಕರೆ ಮಾಡಿದರೂ ಸಕಾಲಕ್ಕೆ ಬಾರದ ಕಾರಣ, ಚಿಕಿತ್ಸೆ ವಿಳಂಬವಾಗಿ ವೃದ್ಧ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು. ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿದ್ದ ಆಂಬುಲೆನ್ಸ್ ಹಾಗೂ ಆಸ್ಪತ್ರೆ ಮೇಲೆ ಕಲ್ಲು ತೂರಿ ಗಾಜುಗಳನ್ನು, ಸಿ.ಸಿ.ಟಿ.ವಿ ಕ್ಯಾಮೆರಾ ಒಡೆದಿದ್ದಾರೆ. ಈ ವೇಳೆ ಆಸ್ಪತ್ರೆಯ ಕಿಟಕಿ ಗಾಜುಗಳೂ ಜಖಂಗೊಂಡಿವೆ.

ವಿಷಯ ತಿಳಿಯುತ್ತಿದ್ದಂತೆ ಹೊನ್ನಾಳಿ ಠಾಣೆ ಪಿಎಸ್ಐ ಕುಮಾರ್ ಎನ್ ಹಾಗೂ ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಗಿರೀಶ್ ಎನ್.ಎಚ್ ಸ್ಥಳಕ್ಕೆ ಭೇಟಿ ನೀಡಿದರು. ಚಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ದರು.

‘ನಾನು ಆಸ್ಪತ್ರೆ ಆವರಣದ ಹೊರಗಡೆ ಇದ್ದೆ. ಆಂಬುಲೆನ್ಸ್ ಬಳಿ ಬರುತ್ತಿದ್ದೇನೆ ಎಂದು ತಿಳಿಸಿ ಬರುವಷ್ಟರಲ್ಲಿ ಗಾಜುಗಳನ್ನು ಒಡೆಯಲಾಗಿದೆ’ ಎಂದು ಆಂಬುಲೆನ್ಸ್ ಚಾಲಕ ರಂಗನಾಥ್ ತಿಳಿಸಿದರು.

‘ಆಂಬುಲೆನ್ಸ್ ಚಾಲಕರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಚಾಲಕರ ಬದಲಾವಣೆ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು’ ಎಂದು ಹೊನ್ನಾಳಿ ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಗಿರೀಶ್ ಎನ್.ಎಚ್. ತಿಳಿಸಿದ್ದಾರೆ.

ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.