ADVERTISEMENT

ಮಲೇಬೆನ್ನೂರು | ಅಮ್ಮನಹಬ್ಬಕ್ಕೆ ಹರಿದು ಬಂದ ಜನಸಾಗರ

ಮಲೇಬೆನ್ನೂರು: ಜನಮನ ಸೆಳೆದ ರಾಜಬೀದಿ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:14 IST
Last Updated 20 ಮಾರ್ಚ್ 2024, 16:14 IST
ಮಲೇಬೆನ್ನೂರು ಪಟ್ಟಣದ ದೇವತೆ ಏಕನಾಥೇಶ್ವರಿ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ಜರುಗಿತು
ಮಲೇಬೆನ್ನೂರು ಪಟ್ಟಣದ ದೇವತೆ ಏಕನಾಥೇಶ್ವರಿ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ಜರುಗಿತು    

ಮಲೇಬೆನ್ನೂರು: ಪಟ್ಟಣದ ಅಮ್ಮನಹಬ್ಬದ ಪ್ರಯುಕ್ತ ಏಕನಾಥೇಶ್ವರಿ, ಕೋಡಿಮಾರೇಶ್ವರಿ ಉತ್ಸವಮೂರ್ತಿ ಮೆರವಣಿಗೆ ಮಂಗಳವಾರ ತಡರಾತ್ರಿ ವೈಭವದಿಂದ ಜರುಗಿತು.

ದೇವಾಲಯದ ಬಳಿ ರಥ ಶಾಂತಿ, ಪೂಜೆ ನಡೆಸಿದ ಬಳಿಕ ಉತ್ಸವ ಮೂರ್ತಿಯ ರಥಾರೋಹಣವಾಯಿತು. ಬಲಿದಾನದ ನಂತರ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯ, ಡಿಜೆ, ಡೊಳ್ಳು, ನಾಸಿಕ್ ಡೋಲು, ಕೊಂಬು ಕಹಳೆ ನಿನಾದ, ಭಜನಾ ತಂಡ ಉತ್ಸವಕ್ಕೆ ಮೆರುಗು ನೀಡಿದ್ದವು.

ರಾಜಬೀದಿಯುದ್ಧಕ್ಕೂ ತಳಿರು ತೋರಣ, ಬೇವಿನೆಲೆ, ಬಾಳೆಕಂಬ ಕಟ್ಟಲಾಗಿತ್ತು. ‘ಹುಲಿಗ್ಯೋ ಉಧೋ ಉಧೋ...’ ಉದ್ಘೋಷ, ಕತ್ತಿ ಫಡುವಾಳ, ಘಟೆಯೊಂದಿಗೆ ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು.

ADVERTISEMENT

ಉತ್ಸವ ಮೂರ್ತಿಯ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮುಖ್ಯವೃತ್ತದಲ್ಲಿ ಪಟಾಕಿ ಸಿಡಿಸುವ ಕಾರ್ಯಕ್ರಮ ದೀಪಾವಳಿಯನ್ನು ನೆನಪಿಸಿತು. ಯುವಜನ ಡಿಜೆ ವಾದ್ಯಕ್ಕೆ ನರ್ತಿಸಿದರು. ಈ ವೇಳೆ ಯುವಕರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

ಮಕ್ಕಳು, ಹಿರಿಯರು, ಯುವಕರು ಗ್ರಾಮದೇವತೆ ಹಬ್ಬ ಆಚರಿಸಿ ಸಂಭ್ರಮಿಸಿದರು. ಲಕ್ಷಕ್ಕೂ ಹೆಚ್ಚು ಜನರು ಪಟ್ಟಣದಲ್ಲಿ ಜಮಾಯಿಸಿದ್ದರು. ವಾಹನಗಳ ಭರಾಟೆ ಹೆಚ್ಚಾಗಿತ್ತು. ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರು ಭದ್ರತೆ ಒದಗಿಸಿದ್ದರು.

ಬ್ರಾಹ್ಮಿ ಸಮಯದಲ್ಲಿ ಹೊರಗಿನಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಬುತ್ತಿ, ಕಡುಬು ಹೋಳಿಗೆ ನಿವೇದಿಸಿದರು. ಊರೊಳಗಿನ ದೇವಾಲಯದಲ್ಲಿ ಜೋಗತಿಯರಿಗೆ ಬಳೆ ತೊಡಿಸುವ, ಉಡಿ ತುಂಬುವ ಧಾರ್ಮಿಕ ಆಚರಣೆಗಳು ಜರುಗಿದವು. ಅನ್ನ ಸಂತರ್ಪಣೆ ನಡೆಯಿತು. ಪಟ್ಟಣದ ಉದ್ಯಮಿ ಚಿಟ್ಟಕ್ಕಿ ರಮೇಶ್‌, ನಾಗರಾಜ್‌ ಬಂಗಾರದ ಕಿರೀಟ ಅರ್ಪಿಸಿದರು.

ಹಿಟ್ಟಿನ ಕೋಣದ ಬಲಿ: ಸಾಂಪ್ರದಾಯಿಕ ಪೂಜಾವಿಧಿಗಳ ನಂತರ ಹೊರಗಿನಮ್ಮನ ಗುಡಿ ಬಯಲಿನಲ್ಲಿ ಬುಧವಾರ ಬೆಳಗಿನಜಾವ ಹಿಟ್ಟಿನಕೊಣದ ಬಲಿ ನೀಡಲಾಯಿತು. ಹಸಿರುಡೆಗೆ ಉಟ್ಟವರು, ಕುರಿ, ಆಡು, ಕೋಳಿ ನೀಡಿದ ಭಕ್ತರು ಹರಕೆ ಸಮರ್ಪಿಸಿದರು.

ಪ್ರಾಣಿಬಲಿ ನಿಷೇಧ ಕುರಿತು ಅಲ್ಲಲ್ಲಿ ಭಿತ್ತಿಪತ್ರ ಅಂಟಿಸಿದ್ದರು. ಬೀದಿ ಬದಿ ತಿನಿಸು, ಐಸ್‌ ಕ್ರೀಂ, ಬೋಂಡಾ, ಬಜ್ಜಿ, ಕಾರಮಂಡಕ್ಕಿ ಮಾರಾಟಕ್ಕೆ ಅವಕಾಶ ಇರಲಿಲ್ಲ.

ಪಟ್ಟಣದಲ್ಲಿ ಕುಡಿಯುವ ಹಾಗೂ ಬಳಸುವ ನೀರಿಗೆ ಭಕ್ತರು ಪರದಾಡಿದರು. ಕೊಳವೆ ಬಾವಿಗಳು ಬತ್ತಿದ ಕಾರಣ ಪುರಸಭೆ ವಿಶೇಷ ಟ್ಯಾಂಕರ್‌ ವ್ಯವಸ್ಥೆ ಮಾಡಿದ್ದರು. ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಜನಜಂಗುಳಿ ಇತ್ತು. ಖಾಸಗಿ ನೀರು ಪೂರೈಕೆದಾರರಿಗೆ ಬೇಡಿಕೆ ಹೆಚ್ಚಾಗಿತ್ತು.

ಚುನಾವಣೆ ಬಿಸಿ: ಲೋಕಸಭಾ ಚುನಾವಣೆ ಬಿಸಿ ಗ್ರಾಮದೇವತೆ ಉತ್ಸವಕ್ಕೂ ತಟ್ಟಿತ್ತು. ನೀತಿ ಸಂಹಿತೆ ಜಾರಿ ಇದ್ದ ಕಾರಣ ಶುಭಾಶಯ ಕೋರುವ ಫ್ಲೆಕ್, ಬ್ಯಾನರ್, ಬಂಟಿಂಗ್ ಕಂಡುಬರಲಿಲ್ಲ.

ಸಂಸದ ಜಿ.ಎಂ.ಸಿದ್ದೇಶ್ವರ, ಲೋಕಸಭೆ ಚುನಾವಣೆ ಬಿಜೆಪಿ ಹುರಿಯಾಳು ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಚಂದ್ರಶೇಖರ್‌ ಪೂಜಾರ್‌, ಬಿ.ಎಂ.ವಾಗೀಶ್‌ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಿ ಉತ್ಸವ: ಸಮೀಪದ ಹಿರಹಾಲಿವಾಣ ಗ್ರಾಮದ ಒಂದು ಗುಂಪಿನವರು ಏಳೂರು ಕರಿಯಮ್ಮನ ಉತ್ಸವವನ್ನು ಸರಳವಾಗಿ ಆಚರಿಸಿದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದರು.

ಮಲೇಬೆನ್ನೂರು ಪಟ್ಟಣದ ದೇವತೆ ಹೊರಗಿನಮ್ಮನಿಗೆ ವಿಶೇಷ ಪುಷ್ಪಾಲಂಕಾರ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.