ಮಲೇಬೆನ್ನೂರು: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ರೂ 66 ಕೋಟಿ ವೆಚ್ಚದ ‘ಅಮೃತ್ ಯೋಜನೆ’ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಮಳೆ ನಡುವೆ ಭರದಿಂದ ಭಾನುವಾರ ಸಾಗಿದೆ.
ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಉಸ್ತುವಾರಿಯಲ್ಲಿ ಕಾಮಗಾರಿ ಸಾಗಿದೆ.
‘ಹೈದರಾಬಾದ್ ಮೂಲ ಎಸ್‌ಎಂಸಿ ಇಸ್ಫ್ರಾಸ್ಟ್ರಕ್ಚರ್ ಹಾಗೂ ಸಿವಿಎಕ್ ಕಂಪನಿ ಕಾಮಗಾರಿ ವಹಿಸಿಕೊಂಡಿದೆ. 54 ಕಿ.ಮೀ ನೀರು ವಿತರಣೆ ಕೊಳವೆ ಮಾರ್ಗ ಅಳವಡಿಸಬೇಕಿದ್ದು 18 ಕಿ.ಮೀ ಎರಡೂವರೆ ಇಂಚಿನ ಎಚ್‌ಡಿಪಿಇ ಪೈಪ್‌ಗಳನ್ನು ಅಳವಡಿಸಲಾಗಿದೆ’ ಎಂದು ಸಹಾಯಕ ಎಂಜಿನಿಯರ್ ಪ್ರಕಾಶ್ ಸಜ್ಜನ್ ಮಾಹಿತಿ ನೀಡಿದರು.
‘ಕೆಲಸ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ತುಂಗಭದ್ರಾ ನದಿ ಜಾಕ್‌ವೆಲ್ ಕಾಮಗಾರಿ ಬುನಾದಿ ಸ್ಥಗಿತಗೊಂಡಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿವೇಶನ ನಿಗದಿಯಾಗಿಲ್ಲ. ಚಿಕ್ಕಪುಟ್ಟ ಸಮಸ್ಯೆ ಹೊರತುಪಡಿಸಿದರೆ ಸುಗಮವಾಗಿ ಸಾಗಿದೆ. ರೂಪಿಸಿರುವ ಯೋಜನೆಯಂತೆ 2025 ಮಾರ್ಚ್‌ಯೊಳಗೆ ಕಾರ್ಯಗತವಾಗಬೇಕು’ ಎಂದರು.
ಶ್ರಾವಣ ಮಾಸ, ಗಣೇಶೋತ್ಸವ, ದಸರಾ ಹಬ್ಬ ಇದ್ದು ಪಟ್ಟಣದೊಳಗಿನ ಕೊಳವೆಮಾರ್ಗ ಅಳವಡಿಸುವ ಕೆಲಸ ತುರ್ತಾಗಿ ಮುಗಿಸಲು ನಾಗರಿಕರು ಕೋರಿದರು. ಮಳೆಗಾಲ ಆರಂಭವಾಗಿದ್ದು ಗುಂಡಿ ತೆಗೆದು ಬಿಡಬೇಡಿ ಎಂದರು.
‘ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸರ್ಕಾರದ ಯೋಜನೆ ಯೋಜನೆ ಕೆಲಸ ಸಮರ್ಪಕ ರೀತಿ ಮಾಡಿ. ಕಾಮಗಾರಿ ಗುಣಮಟ್ಟ ಕಾಪಾಡಿ’ ಎಂದು ಪುರಸಭೆ ಅಧ್ಯಕ್ಷ ಬಿ. ಹನುಮಂತಪ್ಪ ಸೂಚಿಸಿದರು.
ಯಾವುದೇ ತರಹದ ಸಮಸ್ಯೆ ಎದುರಾದಲ್ಲಿ ಆಯಾ ವಾರ್ಡ್ ಸದಸ್ಯರು, ಪುರಸಭೆ ಎಂಜಿನಿಯರ್ ಸಲಹೆ ಪಡೆದು ಕಾಮಗಾರಿ ಮುಂದುವರಿಸಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.