ಅನೀಸ್ ಪಾಷಾ
ದಾವಣಗೆರೆ: ‘ಬಾಬಾ ಸಾಹೇಬ್ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರ ಹೇಳಿಕೆಯು ಚುನಾವಣಾ ಕುತಂತ್ರದಿಂದ ಕೂಡಿದೆ’ ಎಂದು ಕಾಂಗ್ರೆಸ್ ಮುಖಂಡ ಅನೀಸ್ ಪಾಷಾ ದೂರಿದ್ದಾರೆ.
‘2018ರಲ್ಲಿ ಮನುವಾದಿ ಸಂಘಟನೆಯವರು ಸಂವಿಧಾನದ ಪ್ರತಿಗಳನ್ನು ಸುಟ್ಟು, ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿದ್ದರು. ಆ ಸಂದರ್ಭದಲ್ಲಿ ಪ್ರಧಾನಮಂತ್ರಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ಲ. ಆರೋಪಿಗಳ ವಿರುದ್ಧ ಕ್ರಮ ವಹಿಸಲಿಲ್ಲ. ಬಿಜೆಪಿ ಸಂಸದರು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದು ಬಹಿರಂಗ ಹೇಳಿಕೆ ನೀಡಿದಾಗಲೂ, ಪ್ರಧಾನಿ ವಿರೋಧಿಸಲಿಲ್ಲ’ ಎಂದು ಹೇಳಿದ್ದಾರೆ.
‘ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ದೇಶಾದ್ಯಂತ 272 ಸಂಸದರು ಗೆದ್ದರೆ ಸಾಕು. ಆದರೆ, ಪ್ರಧಾನಿ ಮೋದಿ 400 ಸಂಸದರನ್ನು ಗೆಲ್ಲಿಸಿ ಎಂದು ಪದೇ ಪದೇ ಹೇಳುತ್ತಿರುವುದು ಅನುಮಾನ ಮೂಡಿಸುತ್ತಿದೆ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಮುಸ್ಲಿಂ ಲೀಗ್ ಚಿಂತನೆಯನ್ನು ಹೊಂದಿದೆ ಎಂದು ಚುನಾವಣಾ ಸಂದರ್ಭದಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ. ಒಂದು ಸಮುದಾಯದ ಕಡೆಗೆ ಬೆರಳು ಮಾಡಿ ಮಾತಾಡಲು ಯಾರಿಗೂ ಅವಕಾಶ ಇಲ್ಲ. ಪ್ರಧಾನಿ ಘನತೆವೆತ್ತ ಸ್ಥಾನದಲ್ಲಿದ್ದು, ಈ ರೀತಿಯ ಹೇಳಿಕೆ ನೀಡುತ್ತಿರುವುದು ಜನರ ದಾರಿ ತಪ್ಪಿಸುವ ಕೆಲಸವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.