ADVERTISEMENT

ಅನ್ನಭಾಗ್ಯ ಯೋಜನೆ : ಜಿಲ್ಲೆಯ 3.33 ಲಕ್ಷ ಕುಟುಂಬಕ್ಕೆ ಹಣ

ಜಿಲ್ಲೆಗೆ ₹ 21 ಕೋಟಿ ಮಂಜೂರು* 11.37 ಲಕ್ಷ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 6:43 IST
Last Updated 11 ಜುಲೈ 2023, 6:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಿ.ಕೆ. ಬಸವರಾಜು

ದಾವಣಗೆರೆ: ಆದ್ಯತಾ (ಬಿಪಿಎಲ್‌) ಪಡಿತರ ಚೀಟಿ ಹೊಂದಿರುವ ಜಿಲ್ಲೆಯ 3.33 ಲಕ್ಷ ಕುಟುಂಬಗಳ ಖಾತೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆಯಡಿ ನೇರವಾಗಿ ಹಣ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಸುಮಾರು 11.37 ಲಕ್ಷ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ.

ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಇಲಾಖೆಯ ಖಾತೆಗೆ ₹ 21 ಕೋಟಿ ಬಂದಿದ್ದು, ಇಂದಿನಿಂದಲೇ ಬಿಲ್ ಮಾಡಿ ಅದನ್ನು ನಾನು ಮತ್ತು ಜಿಲ್ಲಾಧಿಕಾರಿಗಳು ಸಹಿಯಾದ ಬಳಿಕ ಅದನ್ನು ಖಜಾನೆಗೆ ಕಳುಹಿಸಲಾಗುವುದು. ಖಜಾನೆಯಿಂದ 3ರಿಂದ 4 ದಿನಗಳ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ’ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಸಿದ್ಧರಾಮ ಮಾರಿಹಾಳ ತಿಳಿಸಿದರು.

ADVERTISEMENT

‘ಬಿಪಿಎಲ್‌ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ವಿತರಿಸಲು ಉದ್ದೇಶಿಸಲಾಗಿದ್ದ 5 ಕೆ.ಜಿ ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿಗೆ ₹ 34x5ರಂತೆ ₹ 170 ಸಿಗಲಿದೆ. ನೇರ ಲಾಭ ವರ್ಗಾವಣೆ (ಡಿಬಿಟಿ) ‌ಮೂಲಕ ಪಡಿತರ ಕುಟುಂಬದ ಮುಖ್ಯಸ್ಥರ ಖಾತೆ ಸೇರುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಫಲಾನುಭವಿಗಳ ಹಣ ನೀಡಲು ಆರಂಭಿಸುತ್ತೇವೆ. ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಜೋಡಣೆ ಮಾಡದೇ ಇರುವವರ ಮಾಹಿತಿ ಸಂಗ್ರಹಿಸಿ ಅಪ್‌ಡೇಟ್‌ ಮಾಡುತ್ತೇವೆ. ಇದೇ ತಿಂಗಳಲ್ಲಿ ಎಲ್ಲರ ಖಾತೆಗೆ ಹಣ ಹಾಕುತ್ತೇವೆ’ ಎಂದು ತಿಳಿಸಿದರು.

‘ಅಂತ್ಯೋದಯ ಅನ್ನ ಯೋಜನೆಯಡಿ (ಎಎವೈ) ಪಡಿತರ ಚೀಟಿ ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ಈಗಾಗಲೇ 21 ಕೆ.ಜಿ ಅಕ್ಕಿ, 14 ಕೆ.ಜಿ ರಾಗಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಹೀಗಾಗಿ, ಈ ಕುಟುಂಬಕ್ಕೆ ನಗದು ವರ್ಗಾವಣೆಯ ಸೌಲಭ್ಯ ಸಿಗುವುದಿಲ್ಲ. ಒಂದು ವೇಳೆ ಆ ಕುಟುಂಬದಲ್ಲಿ 4 ಸದಸ್ಯರು ಇದ್ದರೆ ಆ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಕಳೆದು ಉಳಿದ 5 ಕೆ.ಜಿಗೆ ₹ 170 ಸಿಗಲಿದೆ. ಹೆಚ್ಚುವರಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಹಣ ಹಾಕಲಾಗುವುದು’ ಎಂದು ಅವರು ತಿಳಿಸಿದರು.

ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ ‘ಅನ್ನಭಾಗ್ಯ’ದಡಿ ತಲಾ 10 ಅಕ್ಕಿ ವಿತರಿಸುವ ಯೋಜನೆಗೆ, ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇರುವುದರಿಂದ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ₹ 170 ಅನ್ನು ಫಲಾನುಭವಿ ಖಾತೆಗೆ ಜಮೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

=========

ಜಿಲ್ಲೆಯಲ್ಲಿರುವ ಪಡಿತರ ಚೀಟಿದಾರರ ಸಂಖ್ಯೆ

* ಅಂತ್ಯೋದಯ ಅನ್ನ ಪಡಿತರ (ಎಎವೈ) ಚೀಟಿ: 45,723
* ಅಂತ್ಯೋದಯ ಅನ್ನ ಪಡಿತರ ಚೀಟಿಯಲ್ಲಿರುವ ಸದಸ್ಯರು: 1,94,414
* ಬಿಪಿಎಲ್‌ ಪಡಿತರ ಚೀಟಿ: 3,33,041
* ಬಿಪಿಎಲ್‌ ಪಡಿತರ ಚೀಟಿಯಲ್ಲಿರುವ ಸದಸ್ಯರು: 11,37,151
* ಎಎವೈ+ಬಿಪಿಎಲ್ ಸೇರಿ ಒಟ್ಟು ಚೀಟಿ: 3,78,764
* ಎಎವೈ+ಬಿಪಿಎಲ್ ಸೇರಿ ಚೀಟಿಯಲ್ಲಿರುವ ಒಟ್ಟು ಸದಸ್ಯರು: 13,31,565

*ಫಲಾನುಭವಿಗಳಿಗೆ ನೀಡಲು ಇರುವ ಮೊತ್ತ: ₹21 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.