ದಾವಣಗೆರೆಯ ಅನ್ನದಾನೇಶ್ವರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಪುಣ್ಯಾರಾಧನೆ ಮತ್ತು ಶಿವಾನುಭವ ಸಂಪದ ಕಾರ್ಯಕ್ರಮವನ್ನು ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ: ಅನ್ನದಾನ ಶಿವಯೋಗಿಗಳ 50ನೇ ಪುಣ್ಯಾರಾಧಾನೆಯನ್ನು ವಿಶೇಷವಾಗಿ ಆಯೋಜಿಸುವ ಪ್ರಯತ್ನ ನಡೆಯುತ್ತಿದೆ. ಭಕ್ತರು ಬಯಸಿದರೆ ದಾವಣಗೆರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ದೇವರಾಜ ಅರಸು ಬಡಾವಣೆಯ ಅನ್ನದಾನೀಶ್ವರ ಶಾಖಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಅನ್ನದಾನ ಶಿವಯೋಗಿಗಳ 49ನೇ ಹಾಗೂ ಅಭಿನವ ಅನ್ನದಾನ ಸ್ವಾಮೀಜಿ ಅವರ 4ನೇ ವರ್ಷದ ಪುಣ್ಯಾರಾಧನೆ, ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅನ್ನದಾನ ಶಿವಯೋಗಿಗಳು ಶಿಕ್ಷಣ ಕ್ಷೇತ್ರಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಅವರ ಪ್ರಯತ್ನದ ಫಲವಾಗಿ ಸಾವಿರಾರು ಜನರು ಶಿಕ್ಷಣ ಪಡೆಯುವಂತಾಗಿದ್ದು, ಸಾಕ್ಷರತೆ ಹೆಚ್ಚಾಗಿದೆ’ ಎಂದರು.
‘ದೇಶ ಭೌತಿಕ ಆಸ್ತಿಯಲ್ಲ. ನಾಗರಿಕರು, ಸಕಲ ಜೀವರಾಶಿಗಳೇ ರಾಷ್ಟ್ರ. ರಾಜಕೀಯ ಅಧಿಕಾರದಿಂದ ದೇಶವನ್ನು ಬದಲಾವಣೆ ಮಾಡುವುದು ಅಸಾಧ್ಯ. ಪ್ರತಿ ಮನೆಗಳು ಬದಲಾದರೆ, ಸುಧಾರಿಸಿದರೆ ಮಾತ್ರ ರಾಷ್ಟ್ರ ಭದ್ರವಾಗುತ್ತದೆ’ ಎಂದು ಹೇಳಿದರು.
‘ಅನ್ನದಾನ ಶಿವಯೋಗಿಗಳು ನಾಟಕ ಕಂಪನಿಯೊಂದರ ಸಮಾರಂಭಕ್ಕೆ ಆಗಮಿಸಿದ ಫಲವಾಗಿ ದಾವಣಗೆರೆಯಲ್ಲಿ ಶಾಖಾ ಮಠ ನಿರ್ಮಾಣವಾಯಿತು. ಇಲ್ಲಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪಕ್ಕೆ ಇನ್ನೂ ಅನುದಾನದ ಅಗತ್ಯವಿದೆ. ದೇಣಿಗೆ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ವೀರಣ್ಣ ಹೇಳಿದರು.
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ್, ಉದ್ಯಮಿ ಬಕ್ಕೇಶ್, ಪತ್ರಕರ್ತ ಎಂ.ಬಿ. ನವೀನ್, ಎಸ್.ಜಿ.ಉಳುವಯ್ಯ, ನಾಗೂರು ಆದಪ್ಪ, ಎ.ವಿ. ರಮೇಶ್ ಹಾಗೂ ಎಸ್. ನಾಗರಾಜ ಮಳಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಪನ್ಯಾಸಕ ಮಹಾಂತೇಶ ಶಾಸ್ತ್ರಿ, ಓಂಕಾರಪ್ಪ, ಅನಿಲ್ ವೀರಪ್ಪ ಭಾವಿ, ಅಮರಯ್ಯ, ಎನ್.ಅಡಿವೆಪ್ಪ, ಎನ್.ಎ.ಗಿರೀಶ್ ಹಾಜರಿದ್ದರು.
ತ್ರಿವಿದ ದಾಸೋಹಕ್ಕೆ ಅನ್ನದಾನೇಶ್ವರ ಮಠ ಶಾಖಾ ಮಠಗಳು ಹೆಸರುವಾಸಿ. ಅನ್ನದಾನ ಶಿವಯೋಗಿಗಳ ಕಲ್ಯಾಣ ಮಂಟಪ ಮುಂದಿನ ವರ್ಷ ಉದ್ಘಾಟನೆಗೊಳ್ಳಲಿದೆಓಂಕಾರ ಶಿವಾಚಾರ್ಯ ಸ್ವಾಮೀಜಿ ಪುರುವರ್ಗಮಠ ಆವರಗೊಳ್ಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.