ಮಾಯಕೊಂಡ: ‘ಶೀಘ್ರವೇ ಮಾರಾಟ ಮತ್ತು ಕಮಿಷನ್ ಏಜೆಂಟ್ ಪರವಾನಿಗೆ ವಿತರಿಸಿ ಎರಡು ವರ್ಷಗಳವರೆಗೂ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗುವುದು’ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದರು.
ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ, ಬುಳ್ಳಾಪುರ ಬಳಿ ಗುಡ್ಡದಲ್ಲಿನ ಕೆರೆ, ವಸತಿಯುತ ಶಾಲೆ ಹಾಗು ವಿವಿಧ ಸ್ಥಳಗಳಿಗೆ ಮಂಗಳವಾರ ಶಾಸಕ ಬಸವಂತಪ್ಪ ಜೊತೆಗೂಡಿ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಗ್ರಾಮೀಣ ಪ್ರದೇಶವಾಗಿರುವ ಮಾಯಕೊಂಡ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅಡಿಕೆ, ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರದಿಂದ ಅನುಕೂಲ ಆಗುವುದು. ಆಸಕ್ತ ವರ್ತಕರು ಅರ್ಜಿ ನೀಡಿದರೆ ಮಾರಾಟ ಪರವಾನಿಗೆ ನೀಡಲಾಗುವುದು’ ಎಂದು ತಿಳಿಸಿದರು.
‘ಮೆಕ್ಕೆಜೋಳ ಹಾಗು ಅಡಿಕೆ ಡ್ರೈಯರ್ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಜೊತೆಗೆ ನಿಂತಿರುವ ಜಾನುವಾರು ಮಾರುಕಟ್ಟೆ ಪುನರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಹಳೆಯ, ಶಿಥಿಲಗೊಂಡಿರುವ ಕಟ್ಟಡಗಳನ್ನ ನಾಳೆಯಿಂದಲೇ ನೆಲಸಮಗೊಳಿಸಿ. ಈ ಜಾಗದಲ್ಲಿ ಬೆಳೆದಿರುವ ಜಾಲಿ ಹಾಗು ಇನ್ನಿತರೆ ಗಿಡಗೆಂಟೆಗಳನ್ನ ಸ್ವಚ್ಛಗೊಗೊಳಿಸಿ’ ಎಂದು ಸೂಚಿಸಿದರು.
‘ಶೀಘ್ರ ಸಚಿವರಿಂದಲೇ ಅಡಿಕೆ ಖರೀದಿ ಕೇಂದ್ರವನ್ನ ಉದ್ಘಾಟನೆ ಮಾಡಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದಿಂದ ಮೃತಪಟ್ಟವರ ಕುಟುಂಬಕ್ಕೆ ಎರಡು ಲಕ್ಷ ಪರಿಹಾರ ಇದ್ದು, ಸದ್ಬಳಕೆ ಮಾಡಿಕೊಳ್ಳಿ’ ಎಂದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ‘ಕ್ಷೇತ್ರದಲ್ಲಿ ಅಭಿವೃದ್ದಿಗೆ ಯೋಜನೆ ರೂಪಿಸಲಾಗುವುದು. ಎಪಿಎಂಸಿ ದೊಡ್ಡ ಜಾಗವಿದೆ ಈ ಪ್ರಾಂಗಣದಲ್ಲಿ ಎರಡು ಎಕರೆ ಮೀಸಲಿಟ್ಟು ಅದರಲ್ಲಿ ಅಗ್ನಿ ಶಾಮಕ ಠಾಣೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬುಳ್ಳಾಪುರ ಬಳಿಯ ಗುಡ್ಡದ ಪುರಾತನ ಕೆರೆ ಅಭಿವೃದ್ಧಿ ನನ್ನ ಆದ್ಯತೆಯಲ್ಲಿ ಒಂದಾಗಿದೆ’ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಮಾತನಾಡಿ, ‘ಗ್ರಾಮದ ದ್ವಿಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸುವ ಜೊತೆ ಹಲವು ಅಭಿವೃದ್ದಿ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು.ಜೆ, ಉಪತಹಶೀಲ್ದಾರ್ ಹಾಲೆಶಪ್ಪ, ಜಿಲ್ಲಾ ಘಟಕದ ಗ್ಯಾರಂಟಿ ಸಮಿತಿ ಸದಸ್ಯ ಅಣಜಿ ಚಂದ್ರಣ್ಣ, ಖರೀದಿಗಾರರ ಸಂಘದ ಅಧ್ಯಕ್ಷ ಜಾವೇದ್, ಮುಖಂಡರಾದ ಎಸ್. ವೆಂಕಟೇಶ್, ಜಯಪ್ರಕಾಶ್, ಎಂ.ಜಿ. ಗುರುನಾಥ್, ಸಂಡೂರ್ ರಾಜಶೇಖರ್, ಶ್ರೀನಿವಾಸ್, ಎಸ್.ಜಿ. ರುದ್ರೇಶ್, ಗೌಡ್ರ ಅಶೋಕ್, ನಟರಾಜ್, ಗೋಪಾಲ್, ನರಸಿಂಹಮೂರ್ತಿ, ಕೊಡಗನೂರು ತಿಮ್ಮಣ್ಣ, ಅಣಬೇರು ಜಾಫರ್, ದಿಂಡದಹಳ್ಳಿ ಮಂಜುನಾಥ್ ಇದ್ದರು.
ಗುಡ್ಡದ ಪುರಾತನ ಕೆರೆ ಪರಿಶೀಲನೆ: ಶಾಸಕ ಬಸವಂತಪ್ಪನವರ ಆಸಕ್ತಿಯ ಬುಳ್ಳಾಪುರ ಬಳಿಯ ಗುಡ್ಡದ ಪುರಾತನ ಕೆರೆ ಸ್ಥಳಕ್ಕೆ ಡಿಸಿ ಗಂಗಾಧರಸ್ವಾಮಿ ಮತ್ತು ಶಾಸಕ ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಡಕೆ ಖರೀದಿದಾರರು ಸಂಘ ಮಾಡಿಕೊಂಡು ರೈತರನ್ನ ನಿಯಂತ್ರಿಸುವ ಹುನ್ನಾರ ನಡೆದಿದೆ.-ಹುಚ್ಚವ್ವನಹಳ್ಳಿ ಮಂಜುನಾ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.