ADVERTISEMENT

ಲಾಕ್‌ಡೌನ್‌ ತಂದ ಸಂಕಷ್ಟ; ಭಣಗುಡುತ್ತಿದೆ ಎಪಿಎಂಸಿ ಬರಡಾಗುತ್ತಿದೆ ರೈತರ ಬದುಕು

ಸಿಗದ ಮಾರುಕಟ್ಟೆ ವ್ಯವಸ್ಥೆ

ಚಂದ್ರಶೇಖರ ಆರ್‌.
Published 24 ಮೇ 2021, 3:19 IST
Last Updated 24 ಮೇ 2021, 3:19 IST
ದಾವಣಗೆರೆಯ ಎಪಿಎಂಸಿ ಆವರಣ ಬಿಕೋ ಎನ್ನುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಎಪಿಎಂಸಿ ಆವರಣ ಬಿಕೋ ಎನ್ನುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಮುಂಗಾರು ಆರಂಭವಾಗಿದೆ. ಕೃಷಿ ಚುಟುವಟಿಕೆ ಗರಿಗೆದರಿದೆ. ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಧಾನ್ಯಗಳನ್ನು ಮಾರಾಟ ಮಾಡಿ ಬೇಸಾಯಕ್ಕೆ ಅಣಿಯಾಗಿರುವ ರೈತರು ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿದ್ದಾರೆ.

ಲಾಕ್‌ಡೌನ್‌ ಕಾರಣ ಎಪಿಎಂಸಿ ಕೆಲಹೊತ್ತು ಮಾತ್ರ ತೆರೆಯುತ್ತಿದೆ. ಇದರಿಂದ ಬೆಳೆಗಳ ಮಾರಾಟಕ್ಕೆ ಸಿದ್ಧರಾಗಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ. ಕಳೆದ ಬಾರಿಯೂ ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸಿದ್ದ ರೈತರ ಬದುಕಿನ ಮೇಲೆ ಈ ಬಾರಿಯೂ ಕಾರ್ಮೋಡ ಕವಿದಿದೆ.

ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭವಾಗಿದ್ದು, ರೈತರು ಮಾರುಕಟ್ಟೆಯತ್ತ ಮುಖಮಾಡಿದ್ದಾರೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ಬೆಂಬಲ ಬೆಲೆಯೂ ಇಲ್ಲ. ಬೀಜ ಮತ್ತು ಗೊಬ್ಬರ ಖರೀದಿಗೂ ರೈತರು ತೊಂದರೆ ಎದುರಿಸುವಂತಾಗಿದೆ.

ADVERTISEMENT

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಎಪಿಎಂಸಿ ಸ್ಥಗಿತವಾಗಿದೆ. ಹೋಬಳಿಗಳಲ್ಲೂ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದಾಗಿದೆ. ಕೆಲವರು ಸ್ಥಳೀಯ ಮಟ್ಟದಲ್ಲೇ ಮಾರಾಟ ಮಾಡಿ ನಷ್ಟ ಸರಿದೂಗಿಸಿಕೊಳ್ಳುತ್ತಿದ್ದಾರೆ.

ಸರ್ಕಾರ ಕೃಷಿ ಸಂಬಂಧಿತ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೋವಿಡ್‌ ಆತಂಕದಿಂದ ಎಪಿಎಂಸಿಗಳಲ್ಲಿ ವಹಿವಾಟು ಸ್ಥಗಿತಗೊಂಡಿದೆ. ದಲ್ಲಾಲರು, ಖರೀದಿದಾರರು ಯಾರೊಬ್ಬರೂ ಎಪಿಎಂಸಿಯತ್ತ ಮುಖಮಾಡಿಲ್ಲ.

ಲಾಕ್‌ಡೌನ್‌ ಕಾರಣ ಬೆಳಿಗ್ಗೆ 6ರಿಂದ 10ರ ವರೆಗೆ ಮಾತ್ರ ವಹಿವಾಟಿಗೆ ಅವಕಾಶ ಇದೆ. ಆದರೆ, ಈ ನಿಗದಿತ ಸಮಯದಲ್ಲಿ ವ್ಯಾಪಾರ ಸಾಧ್ಯವಿಲ್ಲ ಎಂಬುದು ರೈತರು ಮತ್ತು ಖರೀದಿದಾರರ ಅಳಲು.

ಸಾಮಾನ್ಯ ದಿನಗಳಲ್ಲಿ ಎಪಿಎಂಸಿಯಲ್ಲಿ ಉತ್ತಮ ವಹಿವಾಟು ನಡೆಯುತ್ತಿತ್ತು. ಬೇಸಿಗೆ ಹಂಗಾಮಿನ ಶೇಂಗಾ, ಮೆಕ್ಕೆಜೋಳ, ಭತ್ತ, ತರಕಾರಿ ಸೇರಿ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದವು. ಖರೀದಿ ಸ್ಥಗಿತಗೊಂಡಿದ್ದರಿಂದ ಎಲ್ಲ ಮಳಿಗೆ, ಗೋದಾಮುಗಳು ಬಾಗಿಲು ಹಾಕಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಬಿಕೋ ಎನ್ನುತ್ತಿದೆ.ಕೂಲಿ ಸಿಗುತ್ತದೋ ಎಂದು ಕಾಯುವ ಹಮಾಲಿಗಳು ಮಾತ್ರ ಕಾಣಸಿಗುತ್ತಾರೆ.

ಸಂಕಷ್ಟದಲ್ಲಿ ಕಾರ್ಮಿಕರು: ಎಪಿಎಂಸಿ ಇಲ್ಲದ ಕಾರಣ ವರ್ತಕರು, ಕೂಲಿ ಕಾರ್ಮಿಕರು ಸೇರಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿಯಿಂದ ನೂರಾರು ಜನ ಹಮಾಲಿ ಕಾರ್ಮಿಕರು ವಂಚಿತರಾಗಿದ್ದಾರೆ.

‘ಗ್ರಾಮಗಳಲ್ಲಿ ‌ಎಲ್ಲ ಧಾನ್ಯವನ್ನೂ ಸಂಗ್ರಹಿಸಲು ಸಾಧ್ಯವಾಗದ ಕಾರಣ ಎಲ್ಲ ರೈತರೂ ಎಪಿಎಂಸಿಗೆ ಬೆಳೆಗಳನ್ನು ತರುತ್ತಾರೆ. ಪ್ರತಿದಿನ 15 ಸಾವಿರ ಚೀಲ ಭತ್ತ ಒಣಗಿಸುವ ಸಾಮರ್ಥ್ಯ ಇಲ್ಲಿನ ಎಪಿಎಂಸಿ ಯಾರ್ಡ್‌ಗೆ ಇದೆ. ಹಾಗಾಗಿ ಎಲ್ಲರೂ ಇಲ್ಲಿಗೇ ತರಲು ಮನಸ್ಸು ಮಾಡುತ್ತಾರೆ. ಆದರೆ ವಹಿವಾಟು ಇಲ್ಲದ ಕಾರಣ ಸಮಸ್ಯೆಯಾಗಿದೆ. ಇದು ಹಮಾಲಿಗಳ ಬದುಕಿನ ಮೇಲೂ ಪರಿಣಾಮ ಬೀರಿದೆ’ ಎನ್ನುತ್ತಾರೆ ಎಪಿಎಂಸಿ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌.

‘ಕೆಲವರು ಕಡಿಮೆ ಚೀಲ ಮೆಕ್ಕೆಜೋಳ, ಭತ್ತ ಖರೀದಿಸುತ್ತಾರೆ. ಮಾರುಕಟ್ಟೆ, ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಹೆಚ್ಚಿನ ಖರೀದಿ ಮಾಡುತ್ತಿಲ್ಲ’ ಎಂದು ಬೇಸರಿಸಿದರು ಸುರಹೊನ್ನೆಯ ರೈತ ಶಿವು.

‘ಬೆಳಿಗ್ಗೆಯೇ ಎಪಿಎಂಸಿಗೆ ಧಾನ್ಯಗಳನ್ನು ತೆಗೆದುಕೊಂಡು ಹೋಗಲು ಆಗದು. ಚಿಲ್ಲರೆ ವ್ಯಾಪಾರಿಗಳಿಗೂ ಸೀಮಿತ ಅವಧಿಯಲ್ಲಿ ಖರೀದಿ ಸಾಧ್ಯವಿಲ್ಲ. ಇದರಿಂದ ತರಕಾರಿ, ಹಣ್ಣಿನ ಬೆಳೆಗಳು ಕೊಳೆಯುತ್ತಿವೆ. ಖರೀದಿಗಾದರೂ ಹೆಚ್ಚಿನ ಸಮಯ ನೀಡಬೇಕು’ ಎನ್ನುತ್ತಾರೆ ರೈತ ದೇವರಾಜ್‌.

‘ಬೆಳಿಗ್ಗೆ 10ರ ಒಳಗೆ ಟೆಂಡರ್‌ ಪ್ರಕ್ರಿಯೆ ಮುಗಿಸುತ್ತಿದ್ದೇವೆ.ಮಧ್ಯಾಹ್ನ 2ರ ವರೆಗೆ ಅವಕಾಶ ನೀಡುವಂತೆ ಕೋರಿದ್ದೆವು. ಆದರೆ, ಅವಧಿ ಸೀಮಿತಗೊಳಿಸಿದ್ದಾರೆ.ಖರೀದಿ ಕೇಂದ್ರ ತೆರೆದರೆ ಅನುಕೂಲವಾಗಲಿದೆ. ಭತ್ತಕ್ಕೆ₹ 1878 ಬೆಂಬಲ ಬೆಲೆ ಇದೆ. ಮಾರುಕಟ್ಟೆಯಲ್ಲಿ ₹ 1480–₹ 1520ವರೆಗೆ ಮಾರಾಟವಾಗುತ್ತಿದೆ.ಪೆಟ್ರೋಲ್‌, ರಸಗೊಬ್ಬರ ಬೆಲೆ ಏರಿಕೆಯಾದ ಕಾರಣ ರೈತರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಬೇಸರಿಸಿದರು ಎಪಿಎಂಸಿ ಸದಸ್ಯ ಮುದೇಗೌಡ್ರು ಗಿರೀಶ್.

‘ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ವ್ಯಾಪಾರಿಗಳು’

ಈಗ ಭತ್ತ ಕಟಾವು ಸಮಯ. ಕಟಾವು ಮಾಡಿರುವ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ.ಎಪಿಎಂಸಿಯಲ್ಲಿ ಖರೀದಿ ಅವಧಿ ಸೀಮಿತಗೊಳಿಸಿರುವುದರಿಂದ ವ್ಯಾಪಾರಿಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಮನಸ್ಸಿಗೆ ತೋಚಿದ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ರೈತರು ಕಡಿಮೆ ದರಕ್ಕೆ ಬೆಳೆಗಳನ್ನು ಮಾರಾಟ ಮಾಡುವಂತಾಗಿದೆ.ಸರ್ಕಾರ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡಬಾರದು ಎಂದು ನಿರ್ದೇಶನ ಹೊರಡಿಸಬೇಕು ಎಂದು ಒತ್ತಾಯಿಸುತ್ತಾರೆ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ ಬಣ)ದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ.

ಸ್ಥಳೀಯ ಬೆಳೆಗೆ ಸಿಗದ ಮಾರುಕಟ್ಟೆ

ಸರ್ಕಾರವೇ ಬೆಳೆಗಳನ್ನು ಖರೀದಿ ಮಾಡುವ ವ್ಯವಸ್ಥೆ ತರಬೇಕು. ಈಗ ತೇವಾಂಶದ ಕಾರಣ ಬೆಳೆಗಳು ಸರಿಯಾಗಿ ಒಣಗಿರುವುದಿಲ್ಲ. ಇದರಿಂದ ಸಮರ್ಪಕ ಬೆಲೆಯೂ ಸಿಗುವುದಿಲ್ಲ. ಕೆಲ ರೈತರು ಯಂತ್ರ, ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂದು ಬೇಗನೇ ಭತ್ತ ಕಟಾವು ಮಾಡುತ್ತಿದ್ದಾರೆ.ರೈತರು ಸ್ವಲ್ಪ ಕಾದರೆ ಒಳಿತು. ಕೆಲ ಅಕ್ಕಿ ಗಿರಣಿ ಮಾಲೀಕರು ಈಗಾಗಲೇ ಗಂಗಾವತಿ, ಕಾರಟಗಿಯಿಂದ ಭತ್ತ ತಂದು ಸಂಗ್ರಹಿಸಿಟ್ಟಿದ್ದಾರೆ. ತೇವಾಂಶದ ಕೊರತೆ ಕಾರಣ ಅದನ್ನು ಒಣಗಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಸ್ಥಳೀಯ ಭತ್ತದ ಖರೀದಿಗೆ ಯಾರೂ ಮುಂದಾಗುತ್ತಿಲ್ಲ.ಸದ್ಯ ರಫ್ತು ಇಲ್ಲ. ಆದುದರಿಂದ ಭತ್ತಕ್ಕೆ ಮಾರುಕಟ್ಟೆ ಇಲ್ಲ ಎನ್ನುತ್ತಾರೆ ಎಪಿಎಂಸಿ ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌.

ವಹಿವಾಟು ಕಡಿಮೆ

ಸರ್ಕಾರದ ಮಾರ್ಗಸೂಚಿ ಪಾಲಿಸುವ ಕಾರಣ ವಹಿವಾಟಿನಅವಧಿ ಸೀಮಿತಗೊಳಿಸಲಾಗಿದೆ. ಈಗ ಬೆಳೆಗಾರರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಇದೆ. ಹೀಗಾಗಿ ಕೆಲವರು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ಸಮಸ್ಯೆ ಇಲ್ಲ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸಹಜವಾಗಿಯೇ ವಹಿವಾಟು ಕಡಿಮೆ ಆಗಿದೆ. ಭತ್ತ, ಶೇಂಗಾ ಬೆಳೆಗಳ ಆವಕವೂ ಕಡಿಮೆಯಾಗಿದೆ.ಭತ್ತಕ್ಕೆ ಸದ್ಯ ಉತ್ತಮ ಬೆಲೆ ಇಲ್ಲ. ಇನ್ನೂ ಸೀಸನ್‌ ಇರುವ ಕಾರಣ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ತಿಳಿಸಿದರು.

‘ಎಪಿಎಂಸಿ ಬಂದ್‌ ಮಾಡಿಸುವ ಹುನ್ನಾರ’

‘ಎಪಿಎಂಸಿಯನ್ನು ಸಂಪೂರ್ಣವಾಗಿ ಬಂದ್‌ ಮಾಡಿಸುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಭತ್ತಕ್ಕೆ ₹ 2000 ಬೆಲೆ ಇತ್ತು. ಈಗ ₹ 1400ಕ್ಕೂ ಕೇಳುವವರು ಇಲ್ಲದಾಗಿ ರಸ್ತೆಯ ಮೇಲೆ ಬಿದ್ದಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಹಣ ನೀಡುತ್ತೇವೆ ಎನ್ನುತ್ತಾರೆ. ಆದರೆ, ಒಬ್ಬರೈತ ಖರ್ಚು ಮಾಡಿದ ಹಣವೂ ಬರುವುದಿಲ್ಲ. ರೈತರಿಗೆ ಪ್ಯಾಕೇಜ್‌ ಘೋಷಿಸಿದರೆ ಕಮಿಷನ್‌ ಬರುವುದಿಲ್ಲ. ಹೀಗಾಗಿ ಅವರಿಗೆ ಪ್ಯಾಕೇಜ್‌ ಘೋಷಿಸಲು ಸರ್ಕಾರ ಮುಂದಾಗುತ್ತಿಲ್ಲ. ಸಣ್ಣ ರಾಜ್ಯ ಕೇರಳ ₹ 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸುತ್ತದೆ. ಆದರೆ ನಮ್ಮಲ್ಲಿ ಕೇವಲ ₹ 1200 ಕೋಟಿ ಪ್ಯಾಕೇಜ್‌’ ಎಂದು ದೂರುತ್ತಾರೆ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌.

ಸ್ಥಳೀಯ ಮಟ್ಟದಲ್ಲೇ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಿ

ಹಣ್ಣು, ತರಕಾರಿ ತಕ್ಷಣ ಗ್ರಾಹಕರಿಗೆ ತಲುಪಬೇಕು. ಇಲ್ಲದಿದ್ದರೆ ಹಾಳಾಗುತ್ತದೆ. ಹಳ್ಳಿಗಳಿಂದ ದೂರದ ದಾವಣಗೆರೆಗೆ ಬೆಳೆಗಳನ್ನು ತರುವುದಕ್ಕೇ ಸಮಯ ಹಿಡಿಯುತ್ತದೆ. ಹೀಗಿರುವಾಗ ಎಪಿಎಂಸಿ ವಹಿವಾಟು ಸೀಮಿತಗೊಳಿಸಿದರೆ ರೈತರ ಪಾಡೇನು? ಸ್ಥಳೀಯ ಮಟ್ಟದಲ್ಲೇ ಖರೀದಿಗೆ ವ್ಯವಸ್ಥೆ ಮಾಡಬೇಕು. ಇದರಿಂದ ಹಳ್ಳಿಗಳಿಂದ ಜನರು ನಗರಪ್ರದೇಶಕ್ಕೆ ಬರುವುದನ್ನು ನಿಲ್ಲಿಸುತ್ತಾರೆ. ಕೊರೊನಾ ಹರಡುವುದೂ ತಪ್ಪುತ್ತದೆ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡ ತೇಜಸ್ವಿ ಪಟೇಲ್‌.

‘ಗ್ರಾಮ ಮಟ್ಟದಲ್ಲೇ ಖರೀದಿ ವ್ಯವಸ್ಥೆ ಮಾಡಬೇಕು. ₹ 50 ಸಾವಿರದ ಭತ್ತ ರಸ್ತೆಯಲ್ಲಿ ಹಾಳುಮಾಡಿಕೊಂಡು ₹ 5 ಸಾವಿರ ಪರಿಹಾರ ಪಡೆಯಲು ಯಾರು ಮುಂದಾಗುತ್ತಾರೆ. ನಮಗೆ ಹಕ್ಕಿನ ಸೇವೆ ಬೇಕು. ಹಂಗಿನ ನೆರವು ಬೇಡ. ಬೆಳೆಗಳನ್ನು ಮೊದಲು ಖರೀದಿಸಿ, ಆಮೇಲೆ ಹಣ ನೀಡಿದರೂ ಪರವಾಗಿಲ್ಲ. ಆದರೆ, ಉತ್ಪನ್ನಗಳಿಗೆ ಉತ್ತಮ ದರ ನಿಗದಿಪಡಿಸಬೇಕು’ ಎಂದು ಆಗ್ರಹಿಸುತ್ತಾರೆ ಅವರು.

ಸೆಸ್‌ ಸಂಗ್ರಹ ಕುಸಿತ

ಚನ್ನಗಿರಿ: ಕಳೆದ ವರ್ಷ ಕೂಡಾ ಲಾಕ್‌ಡೌನ್‌ನಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೆಸ್ ಸಂಗ್ರಹದಲ್ಲಿ ಕುಸಿತ ಕಂಡಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸಿದೆ.

ಲಾಕ್‌ಡೌನ್‌ನಿಂದ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗೆ ತರಲು ಅಡಚಣೆ ಉಂಟಾಗಿದೆ. ಚನ್ನಗಿರಿಯ ಎಪಿಎಂಸಿ ಜಿಲ್ಲೆಯಲ್ಲಿಯೇ ಸೆಸ್ ಸಂಗ್ರಹದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಆದರೆ ಈ ಬಾರಿ ಕುಸಿತವಾಗಿದೆ.

2020ನೇ ಸಾಲಿನ ಮೇನಲ್ಲಿ ₹ 12.72 ಲಕ್ಷ ಸೆಸ್ ಸಂಗ್ರಹವಾಗಿತ್ತು. 2021ರ ಮೇನಲ್ಲಿ ಕೇವಲ₹ 2.80 ಲಕ್ಷ ಸೆಸ್ ಸಂಗ್ರಹವಾಗಿದೆ. ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ತೆರೆದರೂ ರೈತರು ಖರೀದಿ ಕೇಂದ್ರಗಳ ಕಡೆ ಸುಳಿಯುತ್ತಿಲ್ಲ. ರೈತರು ಖಾಸಗಿ ಅಂಗಡಿಗಳಿಗೆ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ತಿಳಿಸಿದರು.

ಹಮಾಲರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕೆಲಸವಿಲ್ಲದೇ ಒಪ್ಪತ್ತಿನ ಕೂಳಿಗೂ ಪರದಾಡುವಂತಾಗಿದೆ. ಸರ್ಕಾರ ಹಮಾಲರಿಗೆ ₹2 ಸಾವಿರ ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಶೀಘ್ರ ಖಾತೆಗೆ ಹಣ ಬಂದರೆ ಉತ್ತಮ ಎನ್ನುತ್ತಾರೆ ಹಮಾಲಿ ಕೆಲಸ ಮಾಡುವ ಮಹಮದ್ ಸಾದಿಕ್.

ತರಕಾರಿ ಬೆಳೆಗಾರರರಿಗೆ ಅವಕಾಶ

ಹೊನ್ನಾಳಿ: ಲಾಕ್‌ಡೌನ್‌ ಕಾರಣ ಹೊನ್ನಾಳಿ ಎಪಿಎಂಸಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ.

ಆದರೆ ನ್ಯಾಮತಿ–ಹೊನ್ನಾಳಿ ಅವಳಿ ತಾಲ್ಲೂಕಿನ ತರಕಾರಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನ್ಯಾಮತಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಸಗಟು ವ್ಯಾಪಾರಿಗಳಿಗೆ ಬೆಳಿಗ್ಗೆ 6ರಿಂದ 10ರ ವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಜಯಪ್ಪ.

‘ಎಪಿಎಂಸಿ ಬಂದ್ ಆಗಿದೆ. ಇದರಿಂದ ಭತ್ತಕ್ಕೆ ಮಾರುಕಟ್ಟೆ ಇಲ್ಲವಾಗಿದೆ. ಖಾಸಗಿ ವ್ಯಾಪಾರಿಗಳು, ದಲ್ಲಾಳಿಗಳು ಇದರ ಲಾಭ ಪಡೆಯಲು ಮುಂದಾಗಿದ್ದಾರೆ. ಆರ್‌ಎನ್‌ಆರ್‌ ಭತ್ತ ಕೇವಲ ₹1500ಕ್ಕೆ ಕೇಳುತ್ತಿದ್ದಾರೆ. ಹೀಗಾದರೆ ನಾವು ಬದುಕುವುದು ಹೇಗೆ ? ರೈತರ ಮನೆಬಾಗಿಲಿಗೆ ಬಂದು ಭತ್ತ ಖರೀದಿ ಮಾಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು’ ಎಂದು ರೈತರಾದ ಬೆನಕನಹಳ್ಳಿ ಶುಂಠಿ ಗಣೇಶಪ್ಪ, ಗೊರಟ್ಟಿ ಮಂಜಪ್ಪ ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.