ADVERTISEMENT

ದಾವಣಗೆರೆ | ಕೊರೊನಾ: ಪೊಲೀಸ್‌ ಇಲಾಖೆಯಲ್ಲಿ ದೂರು ಅಧಿಕಾರಿಗಳ ನೇಮಕ

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್‌ಕುಮಾರ್‌ ಪಾಂಡೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 15:44 IST
Last Updated 17 ಜುಲೈ 2020, 15:44 IST
ದಾವಣಗೆರೆಯ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್‌ಕುಮಾರ್‌ ಪಾಂಡೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣ ಭೇದಿಸಿದ ಶ್ವಾನದಳದ ‘ತುಂಗಾ’ಗೆ ಹಾರ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.
ದಾವಣಗೆರೆಯ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್‌ಕುಮಾರ್‌ ಪಾಂಡೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣ ಭೇದಿಸಿದ ಶ್ವಾನದಳದ ‘ತುಂಗಾ’ಗೆ ಹಾರ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.   

ದಾವಣಗೆರೆ: ಕೆಲ ಪೊಲೀಸ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿರುವುದರಿಂದ ಪೊಲೀಸ್‌ ಸಿಬ್ಬಂದಿಯ ಕುಟುಂಬದವರಲ್ಲಿ ಆತಂಕ ನಿವಾರಿಸಲು ಇಲಾಖೆಯಲ್ಲಿ ದೂರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಪೊಲೀಸರು ಹಾಗೂ ಕುಟುಂಬದವರ ಜೊತೆ ಸಂವಾದ ನಡೆಸಿ ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆ ತಿಳಿಸುತ್ತಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಡಾ. ಅಮರ್‌ಕುಮಾರ್‌ ಪಾಂಡೆ ಹೇಳಿದರು.

‘ಕೊರೊನಾ ಸಂದರ್ಭದಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಯುದ್ಧಭೂಮಿಯಲ್ಲಿನ ಸೈನಿಕರಂತೆ ಪೊಲೀಸರೂ ಕೆಲಸ ಮಾಡುತ್ತಿದ್ದು, ಈ ಪರಿಸ್ಥಿತಿ ನಮ್ಮ ಮನೋಬಲ ಹೆಚ್ಚಿಸಿದೆ.ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರಿಂದ ಪೊಲೀಸ್‌ ಇಲಾಖೆಗೆ ಸಿಕ್ಕಿರುವ ಬೆಂಬಲ, ಉತ್ತೇಜನ ಹೆಚ್ಚಿನ ಶಕ್ತಿ ತುಂಬಿದೆ. ಪರಿಸ್ಥಿತಿ ಕಷ್ಟವಾದರೂ ಉತ್ತಮವಾಗಿ ನಿಭಾಯಿಸುತ್ತಿದ್ದೇವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಟೈನ್‌ಮೆಂಟ್‌ ವಲಯಗಳಲ್ಲೂ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಕೊರೊನಾ ನಡುವೆಯೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಂಭೀರ ಎನಿಸಬಹುದಾದ ಅಪರಾಧ ಪ್ರಕರಣಗಳು ಈ ಅವಧಿಯಲ್ಲಿ ನಡೆದಿಲ್ಲ. ಅಪರಾಧ ಪ್ರಕರಣಗಳ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರಗಳ್ಳತನ ಹೆಚ್ಚುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ‘ಹಲವೆಡೆ ಸರಗಳ್ಳತನ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಿ ಕಳವು ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು’ ಎಂದರು.

‘ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಇದನ್ನೂ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿದ್ದೇವೆ. ಕೆಲ ಸಿಬ್ಬಂದಿಗೆ ಸೋಂಕು ಬಂದಿದೆ. ಆದರೂ ಧೃತಿಗೆಡದೆ ಕೆಲಸ ಮಾಡುತ್ತಿದ್ದಾರೆ. ಕೆಲವರು ಗುಣಮುಖರಾಗಿದ್ದಾರೆ. ಅಗತ್ಯ ಇರುವ ಕಡೆ ಮಾತ್ರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಇದ್ದರೂ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಹೇಳಿದರು.

ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣ ಭೇದಿಸಿದ ಶ್ವಾನದಳದ ಡಾಬರ್‌ಮನ್‌ ಜಾತಿಯ ‘ತುಂಗಾ’ಗೆ ಬಹುಮಾನ ನೀಡುವುದಾಗಿ ಘೋಷಿಸಿದರು. 11 ಕಿ.ಮೀ. ದೂರದವರೆಗೂ ಓಡಾಡಿ ಕೊಲೆ ಆರೋಪಿ ಪತ್ತಗೆ ಸಹಕರಿಸಿದ ಶ್ವಾನದ ಚಾಣಾಕ್ಷತನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ,ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.