ADVERTISEMENT

ದಾವಣಗೆರೆ: ಸಾಂಬಾರು ಬೆಳೆಗಳಿಗೆ ರೈತರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:33 IST
Last Updated 20 ಜುಲೈ 2025, 6:33 IST
ಚನ್ನಗಿರಿಯ ಮೇದುಗೊಂಡನಹಳ್ಳಿಯ ಕೆ.ಬಿ. ಶ್ರೀಧರ್ ಅವರ ತೋಟದಲ್ಲಿ ಅಡಿಕೆ ಗಿಡಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿ
ಚನ್ನಗಿರಿಯ ಮೇದುಗೊಂಡನಹಳ್ಳಿಯ ಕೆ.ಬಿ. ಶ್ರೀಧರ್ ಅವರ ತೋಟದಲ್ಲಿ ಅಡಿಕೆ ಗಿಡಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿ   

ದಾವಣಗೆರೆ: ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೆಚ್ಚು ಆದಾಯ ತಂದುಕೊಡುವ ಅಡಿಕೆಗೆ ಈ ಭಾಗದ ರೈತರು ಒತ್ತು ನೀಡುತ್ತಿದ್ದಾರೆ. ಆದರೆ ಅಡಿಕೆ ಜೊತೆಗೆ ಬೆಳೆಯಬಹುದಾದ ಕಾಳುಮೆಣಸು, ಕೊಕೊ, ಜಾಯಿಕಾಯಿ, ಏಲಕ್ಕಿ ಮೊದಲಾದ ಸಾಂಬಾರು ಪದಾರ್ಥಗಳಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಪೂರಕ ಹವಾಗುಣ ಹಾಗೂ ಸರ್ಕಾರದ ಪ್ರೋತ್ಸಾಹಧನ ಇದ್ದರೂ ಅಂತರಬೆಳೆ ಪದ್ಧತಿಗೆ ಬಹುತೇಕರು ಗಮನ ನೀಡುತ್ತಿಲ್ಲ.

ಮಲೆನಾಡಿನಲ್ಲಿ ಅಡಿಕೆ ಜೊತೆಜೊತೆಗೆ ಸಾಂಬಾರು ಬೆಳೆಗಳನ್ನು ಬೆಳೆಯುವುದು ಸಾಮಾನ್ಯ. ಕಾಳುಮೆಣಸು, ಕೊಕೊ, ಜಾಯಿಕಾಯಿ ಬೆಳೆಗಳಿಗೆ ದಾವಣಗೆರೆ ಜಿಲ್ಲೆಯ ವಾತಾವರಣವೂ ಸೂಕ್ತವಾಗಿದೆ. ಆದರೂ ಏಕ ಬೆಳೆಯನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣವು 1.08 ಲಕ್ಷ ಹೆಕ್ಟೇರ್‌ ಇದ್ದರೆ, 200 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕಾಳುಮೆಣಸು ಬೆಳೆಯಲಾಗುತ್ತಿದೆ. ಜಾಯಿಕಾಯಿ, ಕೊಕೊ ಹಾಗೂ ಏಲಕ್ಕಿ ಬೆಳೆಯುವ ಪ್ರದೇಶ ತೀರಾ ಕಡಿಮೆಯಿದೆ ಎಂದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದರು.  

ಇದೆ ಪೂರಕ ವಾತಾವರಣ:

ADVERTISEMENT

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕುಗಳು ಸಾಂಬಾರು ಪದಾರ್ಥದ ಬೆಳೆಗಳಿಗೆ ಪೂರಕ ಹವಾಗುಣ ಹೊಂದಿವೆ. ಈ ಭಾಗದಲ್ಲಿ ಇವುಗಳನ್ನು ಬೆಳೆಯಲು ಅಗತ್ಯವಿರುವಷ್ಟು ಮಳೆಯೂ ಆಗುತ್ತದೆ. ಆದರೆ ಮಳೆ ಹೆಚ್ಚಾದರೆ ಸೊರಗುರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನೀರು ಬಸಿದುಹೋಗುವ ರೀತಿಯಲ್ಲಿ ಭೂಮಿಯನ್ನು ವಿನ್ಯಾಸ ಮಾಡಿದರೆ ಕಾಳುಮೆಣಸಿನಂತಹ ಬೆಳೆಗಳನ್ನು ಉತ್ಕೃಷ್ಟವಾಗಿ ಬೆಳೆಯಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕಾಳುಮೆಣಸು ಸದ್ಯದ ಮಾರುಕಟ್ಟೆಯಲ್ಲಿ ಅತ್ಯಧಿಕ ದರ ಹೊಂದಿದೆ. ಕ್ವಿಂಟಲ್‌ಗೆ ಅಂದಾಜು ₹64,000 ಇದೆ. ಅಡಿಕೆಯಷ್ಟೇ ಮೌಲ್ಯ ಹೊಂದಿರುವ ಇದು, ರೈತರಿಗೆ ಅಡಿಕೆಯ ಜೊತೆಗೆ ಅದರಷ್ಟೇ ಆದಾಯ ತಂದುಕೊಡುವ ಬೆಳೆಯಾಗಿದೆ. ಅಡಿಕೆಯ ನಿರ್ವಹಣೆ ಅಷ್ಟಾಗಿ ಇರುವುದಿಲ್ಲ. ಆದರೆ ಕಾಳುಮೆಣಸನ್ನು ಒಂದಿಷ್ಟು ನಿರ್ವಹಣೆ ಮಾಡಿದರೆ ಮತ್ತೊಂದು ಆದಾಯದ ಮೂಲವಾಗಿ, ರೈತರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸಾಂಬಾರು ಬೆಳೆಗಳ ಯಶಸ್ವಿ ಪ್ರಯೋಗ:

ಚನ್ನಗಿರಿಯ ಮೇದುಗೊಂಡನಹಳ್ಳಿಯ ಕೆ.ಬಿ. ಶ್ರೀಧರ್ ಅವರದ್ದು ಸಾಂಬಾರು ಬೆಳೆಗಳಲ್ಲಿ ಯಶಸ್ವಿ ಪ್ರಯೋಗ. ಐದು ವರ್ಷಗಳ ಹಿಂದೆ 430 ಕಾಳುಮೆಣಸು ಬಳ್ಳಿಗಳಿಂದ 25 ಕ್ವಿಂಟಲ್ ಬೆಳೆ ತೆಗೆದು ಉತ್ತಮ ಕೃಷಿಕ ಎನಿಸಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಅತಿಯಾದ ಮಳೆಯಿಂದ ಬಳ್ಳಿಗಳು ಸೊರಗು ರೋಗಕ್ಕೆ ಬಲಿಯಾದವು. ಛಲ ಬಿಡದ ಅವರು, ಪಿ–4 ತಳಿಯ 1,100 ಬಳ್ಳಿಗಳನ್ನು ಮತ್ತೆ ನೆಟ್ಟಿದ್ದರು. ಅವು ಈಗ ಫಸಲು ನೀಡಲು ಆರಂಭಿಸಿವೆ.

ಬಳ್ಳಿಗಳು ಮತ್ತೆ ಸೊರಗು ರೋಗಕ್ಕೆ ತುತ್ತಾಗದಂತೆ, ಈ ಬಾರಿ ಕಸಿ ಗಿಡಗಳನ್ನು ಪುತ್ತೂರಿನಿಂದ ತರಿಸಿ ನೆಟ್ಟಿದ್ದಾರೆ. ಗಿಡವೊಂದಕ್ಕೆ ₹45 ಪಾವತಿಸಿದ್ದಾರೆ. ಹಿಪ್ಪಳೆ ಗಿಡದ ಬೇರಿಗೆ ಕಾಳುಮೆಣಸಿನ ಬಳ್ಳಿಯನ್ನು ಕಸಿ ಕಟ್ಟಲಾಗಿದೆ. ಹಿಪ್ಪಳೆ ಬೇರು ಅಧಿಕ ಮಳೆಯಲ್ಲೂ ಕೊಳೆಯುವುದಿಲ್ಲ. ಹೀಗಾಗಿ ಕಾಳು ಮೆಣಸಿನ ಬಳ್ಳಿಗಳು ಸೊರಗುವುದಿಲ್ಲ ಎಂಬುದು ಅವರ ಅನುಭವದ ಮಾತು.

ಚೆನ್ನಾಗಿ ಬೆಳೆದ ಕಾಳುಮೆಣಸಿನ ಒಂದೊಂದು ಬಳ್ಳಿಯೂ ಸರಾಸರಿ 5 ಕೆ.ಜಿಯಷ್ಟು ಫಸಲು ನೀಡಬಲ್ಲದು. ಚಿಕ್ಕಮಗಳೂರು, ಸಕಲೇಶಪುರದ ಎಪಿಎಂಸಿ ಇವರಿಗೆ ಮಾರುಕಟ್ಟೆ. ದಾಸ್ತಾನು ಹೆಚ್ಚಿದ್ದರೆ, ವ್ಯಾಪಾರಿಗಳೇ ತೋಟಕ್ಕೆ ಬಂದು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಾರೆ.

ಅತ್ಯಲ್ಪ ಪ್ರಮಾಣದಲ್ಲಿ ಬೆಳೆ

ಕಾಳುಮೆಣಸಿಗೆ ಹೋಲಿಸಿದರೆ ಕೊಕೊ ಜಾಯಿಕಾಯಿ ಹಾಗೂ ಏಲಕ್ಕೆ ಬೆಳೆ ಜಿಲ್ಲೆಯಲ್ಲಿ ಅಷ್ಟಾಗಿ ಇಲ್ಲ. ಕೊಕೊ ಬೆಳೆದವರಿಗೆ ಕಾಡುಬೆಕ್ಕುಗಳ ಉಪಟಳ ಸಮಸ್ಯೆ ತಂದೊಡ್ಡುತ್ತದೆ. ಹೀಗಾಗಿ ಕೆಲವರು ಗಿಡಗಳನ್ನು ತೆಗೆದಿದ್ದಾರೆ. ಏಲಕ್ಕಿ ಬೆಳೆಯಲು ಸಹ ಜಿಲ್ಲೆಯ ವಾತಾವರಣ ಪೂರಕವಾಗಿದೆ. ಆದರೆ ಕೂಲಿ ವೆಚ್ಚ ಹಾಗೂ ನಿರ್ವಹಣೆ ಹೆಚ್ಚು ಎಂಬ ಕಾರಣಕ್ಕೆ ರೈತರು ಇದಕ್ಕೆ ಒಲವು ತೋರುತ್ತಿಲ್ಲ. ಜಾಯಿಕಾಯಿ ಅತ್ಯಲ್ಪ ಪ್ರಮಾಣದಲ್ಲಿ ಇದೆ. ಜಾಯಿಕಾಯಿ ಪತ್ರೆಗೆ ಕೆ.ಜಿ.ಗೆ ₹1800ರವರೆಗೂ ದರ ಸಿಗುತ್ತದೆ.

ಪ್ರೋತ್ಸಾಹಧನ

ಜಿಲ್ಲೆಯಲ್ಲಿ ಸಾಂಬಾರು ಬೆಳೆ ಪ್ರೋತ್ಸಾಹಿಸಲು ತೋಟಗಾರಿಕೆ ಇಲಾಖೆಯು ರೈತರಿಗೆ ಪ್ರೋತ್ಸಾಹಧನ ನೀಡುತ್ತಿದೆ. ಒಂದು ಹೆಕ್ಟೇರ್‌ನಲ್ಲಿ ಕಾಳುಮೆಣಸು ಬೆಳೆಯಲು ಅಂದಾಜು ₹60000 ಖರ್ಚಾಗುತ್ತದೆ. ಈ ಪೈಕಿ ಇಲಾಖೆಯು ₹24000 ಪ್ರೋತ್ಸಾಹಧನ ನೀಡುತ್ತದೆ. ನಾಟಿ ಮಾಡಿದ ಮೊದಲ ವರ್ಷ ನಿರ್ವಹಣೆಗೆಂದು ₹16000 ನೀಡಲಾಗುತ್ತದೆ. ರೈತರು ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಇದರ ಲಾಭ ಪಡೆಯಬಹುದು. ಜಾಯಿಕಾಯಿ ಬೆಳೆಗೂ ಇದು ಅನ್ವಯವಾಗುತ್ತದೆ. ಅಗತ್ಯವಿದ್ದರೆ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಯಿಕಾಯಿ
ಕಾಳುಮೆಣಸು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.