ADVERTISEMENT

ಜಗಳೂರು: ಅಡಿಕೆ ತೋಟಗಳಿಗೆ ಸಿಗದ ಕಲ್ಲುಸುಣ್ಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:51 IST
Last Updated 26 ಡಿಸೆಂಬರ್ 2025, 2:51 IST
ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಗಿಡಗಳಿಗೆ ಬಿಸಿಲಿನಿಂದ ರಕ್ಷಣೆಗಾಗಿ ಸುಣ್ಣ ಬಳಿದಿರುವುದು
ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಗಿಡಗಳಿಗೆ ಬಿಸಿಲಿನಿಂದ ರಕ್ಷಣೆಗಾಗಿ ಸುಣ್ಣ ಬಳಿದಿರುವುದು   

ಜಗಳೂರು: ‘ಶಾಶ್ವತ ಬರಪೀಡಿತ ಪ್ರದೇಶ’ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಜಗಳೂರು ತಾಲ್ಲೂಕಿಗೆ ತುಂಗಭದ್ರಾ ನದಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು, ಒಣಗಿ ಬಿರುಕುಬಿಟ್ಟಿದ್ದ ಕೆರೆಗಳು ಮೈದುಂಬಿವೆ. ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು, ಅಡಿಕೆ ಬೆಳೆ ಪ್ರದೇಶವೂ ಹೆಚ್ಚುತ್ತಿದೆ.

ಅಡಿಕೆ ನಾಡು ಎಂದೇ ಹೆಸರಾಗಿದ್ದ ಚನ್ನಗಿರಿ ತಾಲ್ಲೂಕನ್ನು ಮೀರಿಸುವಂತೆ ಜಗಳೂರು ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಬಯಲುಸೀಮೆಯಲ್ಲಿ ಬೇಸಿಗೆಯ ಸುಡು ಬಿಸಿಲಿನಿಂದ ಗಿಡಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರು ಅಡಿಕೆ ಗಿಡಗಳಿಗೆ ವ್ಯಾಪಕವಾಗಿ ಸುಣ್ಣ ಬಳಿಯುತ್ತಿದ್ದು, ಕಲ್ಲು ಸುಣ್ಣಕ್ಕೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಡಿಸೆಂಬರ್‌ನಿಂದ ಮೇವರೆಗೆ ಬಿಸಿಲಿನ ಪ್ರಖರತೆ ಇರುವುದರಿಂದ ಸುಡು ಬಿಸಿಲಿಗೆ ಅಡಿಕೆ ಮರಗಳ ಕಾಂಡಗಳಿಗೆ ಹಾನಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸುಣ್ಣದ ಕಲ್ಲುಗಳನ್ನು ಕರಗಿಸಿ ತಯಾರಿಸಲಾದ ಸುಣ್ಣ, ಬೆಲ್ಲ ಮತ್ತು ಮೈದಾ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚಲಾಗುತ್ತದೆ. ಇದರಿಂದ ನೇರವಾಗಿ ಗಿಡಗಳ ಕಾಂಡಗಳಿಗೆ ತಾಗುವ ಬಿಸಿಲಿನ ಕಿರಣಗಳು ಪ್ರತಿಫಲನವಾಗಿ ಗಿಡಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯುತ್ತದೆ. ಈ ಕಾರಣಕ್ಕೆ ರೈತರು ತಾಲ್ಲೂಕಿನಾದ್ಯಂತ ಎರಡು ವಾರಗಳಿಂದ ಅಡಿಕೆ ತೋಟಗಳಿಗೆ ಸುಣ್ಣ ಹಚ್ಚುತ್ತಿದ್ದಾರೆ.

ADVERTISEMENT

ಈ ಹಿಂದೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಸುಣ್ಣದ ಕಲ್ಲುಗಳನ್ನು ಭಟ್ಟಿಯಲ್ಲಿ ಸುಟ್ಟು ಸುಣ್ಣ ತಯಾರಿಸಲಾಗುತ್ತಿತ್ತು. ಆಧುನಿಕತೆಯ ಭರಾಟೆಯಲ್ಲಿ ಸುಣ್ಣದ ಭಟ್ಟಿಗಳು ಕಣ್ಮರೆಯಾಗುತ್ತಿದ್ದು, ಆಯ್ದ ಕೆಲವು ಕಡೆ ಮಾತ್ರ ಸುಣ್ಣ ತಯಾರಿಸುತ್ತಿದ್ದಾರೆ. ಕಲ್ಲುಸುಣ್ಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೇಡಿಕೆ ಬಂದಿದೆ.

‘ಬಿಸಿಲ ಹೊಡೆತಕ್ಕೆ ಅಡಿಕೆ ಕಾಂಡಗಳು ಕಪ್ಪಾಗಿ ಸುಟ್ಟಂತಾಗುತ್ತವೆ. ಕಾಂಡಗಳಿಂದ ನೀರು ಹೊರ ಬಂದು ಸೋಂಕು ಉಂಟಾಗಿ ಗಿಡಗಳು ಸೊರಗುತ್ತವೆ. ಬಿಸಿಲಿನ ಶಾಖದಿಂದ ರಕ್ಷಣೆಗಾಗಿ ಕಲ್ಲು ಸುಣ್ಣ ಹಾಗೂ ಕಾಂಡಗಳಿಗೆ ಗಟ್ಟಿಯಾಗಿ ಸುಣ್ಣ ಅಂಟಿಕೊಳ್ಳಲು, ಮೈದಾ ಮತ್ತು ಬೆಲ್ಲವನ್ನು ಹದವಾಗಿ ಮಿಶ್ರಣ ಮಾಡಿ ಹಚ್ಚಲಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಅಡಿಕೆ ಗಿಡಗಳಿಗೆ ಬಿಸಿಲಿನಿಂದ ಯಾವುದೇ ಹಾನಿಯಾಗುವುದಿಲ್ಲ’ ಎಂದು 3 ಎಕರೆಯಲ್ಲಿ ಅಡಿಕೆ ಬೆಳೆದಿರುವ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಬೆಳೆಗಾರ ಚಿತ್ತಪ್ಪ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಬೇಸಿಗೆಯ ಕಡುಬಿಸಿಲಿನಿಂದ ಅಡಿಕೆ ಗಿಡ ರಕ್ಷಿಸಲು ರೈತರು ಸುಣ್ಣ ಬಳಿಯುತ್ತಾರೆ. ಅಡಿಕೆ ಸಾಲಿನ ನಡುವೆ ಅಂತರ ಬೆಳೆ ಹಾಕುವುದರಿಂದಲೂ ಬಿಸಿಲಿನಿಂದ ರಕ್ಷಣೆ ಪಡೆಯಬಹುದಾಗಿದೆ
ಜಿ.ಸಿ. ರಾಘವೇಂದ್ರ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಸುಣ್ಣದ ಭಟ್ಟಿ ಮಾಯ

‘ಜಗಳೂರಿನ ಸಂತೆ ಸೇರಿದಂತೆ ಎಲ್ಲ ಸಂತೆಗಳಲ್ಲಿ ಈ ಹಿಂದೆ ಕಲ್ಲು ಸುಣ್ಣವನ್ನು ಕತ್ತೆಗಳ ಮೇಲೆ ಚೀಲಗಳಲ್ಲಿ ತುಂಬಿಸಿಕೊಂಡು ಬಂದು ಸುಣಗಾರರು ಮಾರಾಟ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಸುಣ್ಣದ ಭಟ್ಟಿಗಳು ನಿಂತು ಹೋಗಿವೆ. ಸಂತೆಗಳಲ್ಲಿ ಸುಣ್ಣ ಸಿಗುತ್ತಿಲ್ಲ. ಮುಸ್ಟೂರು ಬಿದರಕೆರೆ ಸೇರಿ ಬೆರಳೆಣಿಕೆಯಷ್ಟು ಹಳ್ಳಿಗಳಲ್ಲಿ ಕಲ್ಲುಸುಟ್ಟು ಸುಣ್ಣ ತಯಾರಿಸಲಾಗುತ್ತದೆ. 10 ಕೆ.ಜಿ ಚೀಲಕ್ಕೆ ₹ 500ರವರೆಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ಕೇವಲ ₹ 200 ದರ ಇತ್ತು. ಈಗ ₹ 500 ಕೊಟ್ಟರೂ ಸುಣ್ಣ ಸಿಗುತ್ತಿಲ್ಲ’ ಎಂದು ಬುಳ್ಳೇನಹಳ್ಳಿ ಅಡಿಕೆ ಬೆಳೆಗಾರ ನಾಗಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.