ADVERTISEMENT

ರೈತ ಮುಖಂಡರ ಬಂಧನ, ಬಿಡುಗಡೆ

ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 6:11 IST
Last Updated 7 ಆಗಸ್ಟ್ 2022, 6:11 IST
ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕಾಗಿ ರೈತರ ಜಮೀನುಗಳ ಭೂಸ್ವಾಧೀನ ವಿರೋಧಿಸಿ ಅಣಜಿ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕಾಗಿ ರೈತರ ಜಮೀನುಗಳ ಭೂಸ್ವಾಧೀನ ವಿರೋಧಿಸಿ ಅಣಜಿ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.   

ದಾವಣಗೆರೆ: ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕಾಗಿ ರೈತರ ಜಮೀನುಗಳ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಪಿಎಂಸಿ ಅಧ್ಯಕ್ಷ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಮೆಳ್ಳೆಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮಗಳಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಶನಿವಾರ ಅಣಜಿ ಸರ್ಕಲ್‌ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಕೆಐಎಡಿಬಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದಿದ್ದು, ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್, ಮುಖಂಡರಾದ ಹನುಮಂತಪ್ಪ, ಸಿ.ಟಿ. ಕುಮಾರ್, ದೇವರಾಜ್ ಹಾಗೂ ಮಲ್ಲಿಕಾರ್ಜುನ ಅವರನ್ನು ಮಧ್ಯಾಹ್ನ ಬಂಧಿಸಿ ಸಂಜೆಯ ವೇಳೆ ಬಿಡುಗಡೆ ಮಾಡಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಬಸವನಗೌಡ ಕೋಟೂರ ‘ಜಮೀನು ಪರಿಶೀಲಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನದಟ್ಟು ಮಾಡಿ ಜಮೀನು ಉಳಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಪೂರ್ವಜರ ಆಸ್ತಿಯೇ ನಮಗೆ ಜೀವನಕ್ಕೆ ಆಧಾರ. ಅದನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಕೈಗಾರಿಕಾ ಕಾರಿಡಾರ್‌ಗೆ ಬೆದ್ದಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿ. ಆದರೆ, ಉತ್ತಮ ಇಳುವರಿ ನೀಡುವ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.