ADVERTISEMENT

ಸುರಕ್ಷತಾ ಕ್ರಮ ಅನುಸರಿಸದೇ ಸ್ಫೋಟಕ ಸಾಗಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:26 IST
Last Updated 1 ಆಗಸ್ಟ್ 2021, 3:26 IST

ದಾವಣಗೆರೆ: ಆಲೂರು ಗ್ರಾಮದ ಬಳಿಯ ಕಲ್ಲುಕ್ವಾರಿಗಳಿಗೆ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಗಲಕೋಟೆ ಜಿಲ್ಲೆಯ ವಿಶ್ವನಾಥ ಹಾಗೂ ಸೋಮಲಿಂಗಯ್ಯ ಬಂಧಿತರು. ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಎರಡು ಬೊಲೆರೊದಲ್ಲಿ ಬಾಗಲಕೋಟೆಯಿಂದ ತಾಲ್ಲೂಕಿನ ಆಲೂರು ಗ್ರಾಮಕ್ಕೆ ಸಾಗಿಸುತ್ತಿದ್ದಾಗ ಬೇತೂರು ಬಸವರಾಜಪ್ಪ ಅವರ ಕಲ್ಲುಕ್ವಾರಿ ಬಳಿ ರಸ್ತೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರಿಂದ 2970 ಜಿಲೆಟಿನ್ ಟ್ಯೂಬ್‌ಗಳು, 762 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಅಪೆಕ್ಸ್ 90 ಪೌಡರ್‌ನ 2,800 ಪಾಕೆಟ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ವಾಹನ ಮಾಲೀಕ ನವೀನ ಕುಮಾರ ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ದಾವಣಗೆರೆ ಪೂರ್ವವಲಯ ಐಜಿಪಿ ನೇತೃತ್ವದ ಡಿವೈಎಸ್‌ಪಿ ತಿರುಮಲೇಶ್, ಸಿಪಿಐ ಶಂಕರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

ADVERTISEMENT

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ: ವ್ಯಕ್ತಿ ಸಾವು

ದಾವಣಗೆರೆ: ಸಮೀಪದ ಬಾಡಾ ಕ್ರಾಸ್ ಹತ್ತಿರ ಬರುವ ವಿ. ಶ್ರಿದೇವಿ ಬೇಕರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 35 ವರ್ಷದ ವ್ಯಕ್ತಿಯಾಗಿದ್ದು, ವಿಳಾಸ ಪತ್ತೆಯಾಗಿರುವುದಿಲ್ಲ. ವಾರಸುದಾರರು ಇದ್ದಲ್ಲಿ 7760097292 ಸಂಪರ್ಕಿಸಿ.

ಗೃಹಿಣಿ ಸಾವು

ನ್ಯಾಮತಿ: ತಾಲ್ಲೂಕಿನ ಸವಳಂಗ–ಶಿವಮೊಗ್ಗ ರಸ್ತೆಯ ಸೋಗಿಲು ಕ್ರಾಸ್ ಬಳಿಗೃಹಿಣಿಯೊಬ್ಬರು ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ಸೋಗಿಲು ಗ್ರಾಮದ ಯಶೋಧ (35) ಮೃತಪಟ್ಟವರು. ನಾಗರಾಜ ಎಂಬವರ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ಯಶೋಧ ಅವರು ಬೈಕ್‌ನಿಂದ ಬಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಚಿನ್ನಾಭರಣ ಕಳವು

ದಾವಣಗೆರೆ: ವಿದ್ಯಾನಗರ ಹೊಸ ಬಡಾವಣೆಯಹೇಮಂತ ಕುಮಾರ ಅವರ ಮನೆಯ ಬಾಗಿಲನ್ನು ಕಬ್ಬಿಣದ ಆಯುಧದಿಂದ ಮೀಟಿ ಒಳನುಗ್ಗಿದ ಕಳ್ಳರು ₹ 2.47 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ₹18 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಸಂಬಂಧಿಕರ ಮನೆಗೆ ಹೋಗಿದ್ದಾಗ ಮನೆಯ ಬೀರುವಿನಲ್ಲಿ ಇಟ್ಟಿದ್ದ ಆಭರಣಗಳನ್ನು ದೋಚಿದ್ದಾರೆ.

ಹೊಡೆದಾಟ

ಜಗಳೂರು: ತಾಲ್ಲೂಕಿನ ಮೀನಿಗರಹಳ್ಳಿ ಗ್ರಾಮದಲ್ಲಿ ದಾರಿಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗುಂಪುಘರ್ಷಣೆ ನಡೆದಿದೆ.

ಗ್ರಾಮದಲ್ಲಿರುವ ಮಲ್ಲೇಶಪ್ಪ ಹಾಗೂ ರಮೇಶ ಅವರ ಕುಟುಂಬಗಳ ಮಧ್ಯೆ ಬಹಳ ದಿನಗಳಿಂದ ದಾರಿಯ ಸಮಸ್ಯೆ ಇದ್ದು, ಶನಿವಾರ ಮಲ್ಲೇಶಪ್ಪ ಅವರು ಬೈಕ್ನಲ್ಲಿ ವಿವಾದಿತ ಕೆಸರು ತುಂಬಿದ ರಸ್ತೆಯಲ್ಲಿ ತೆರಳುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ಈ ಬಗ್ಗೆ ಪಕ್ಕದ ಮನೆಯ ರಮೇಶ ಅವರ ಕುಟುಂಬದ ಸದಸ್ಯರು ಹಾಗೂ ಮಲ್ಲೇಶಪ್ಪ ಕುಟುಂಬದ ಸದಸ್ಯರ ನಡುವೆ ಜಗಳವಾಗಿದೆ. ಎರಡೂ ಕಡೆಯವರು ಪರಸ್ಪರ ಕೋಲು ಹಾಗೂ ಕಲ್ಲುಗಳಿಂದ ಹೊಡೆದಾಡಿಕೊಂಡು ಗಾಯಮಾಡಿಕೊಂಡಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಗುಂಪಿನ ತಲಾ ಐವರ ಮೇಲೆ ಪರಸ್ಪರ ದೂರು ದಾಖಲಾಗಿದೆ.

ವಂಚನೆ

ದಾವಣಗೆರೆ: ಇಲ್ಲಿನ ವಿನೋಬ ನಗರದ ನಿವಾಸಿ ಎ.ವಿ.ಮಹೇಂದ್ರರಾವ್ ಅವರಿಗೆ ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ₹ 1,21,024 ವಂಚಿಸಿದ್ದಾನೆ. ಸಾಲ ಕೊಡಿಸುವುದಾಗಿ ಮೆಸೇಜ್ ಬಂದಿತ್ತು. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.