ADVERTISEMENT

ಪರಂಪರೆಗೆ ಚ್ಯುತಿ ಬಾರದಂತೆ ಕಲೆ ಪ್ರದರ್ಶನಗೊಳ್ಳಲಿ

ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿಚಾಚಾರ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 15:47 IST
Last Updated 20 ಜನವರಿ 2019, 15:47 IST
ದಾವಣಗೆರೆಯಲ್ಲಿ ಭಾನುವಾರ ನಡೆದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ ‘ನಾಟ್ಯಭಾರತಿ’ಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ದಾವಣಗೆರೆಯಲ್ಲಿ ಭಾನುವಾರ ನಡೆದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ ‘ನಾಟ್ಯಭಾರತಿ’ಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ಭಾರತದ ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆಗೆ ಚ್ಯುತಿ ಬಾರದಂತೆ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿಚಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರ ‘ನಾಟ್ಯಭಾರತಿ’ಯ ವಜ್ರಮಹೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ‘ಹೆಜ್ಜೆಗೆಜ್ಜೆಗಳ ಸಂಭ್ರಮ –2019’ದಲ್ಲಿ ಅವರು ಮಾತನಾಡಿದರು.

ಭಾರತೀಯ ಕಲೆಗಳು ಕಲೆಗಳಾಗಿ ಮಾತ್ರ ಪ್ರದರ್ಶನವಾಗುವುದಲ್ಲ. ಅವು ದೇವರಿಗೆ ಭಕ್ತಿ ಸಲ್ಲಿಸುವ ಸೇವೆ. ಕಲೆಗಳನ್ನು ದೈವಿಕವಾಗಿ ನೋಡಲಾಗುತ್ತದೆ. ಹಾಗಾಗಿ ಎದುರು ಪ್ರೇಕ್ಷಕರಿದ್ದಾರೆ ಎಂದು ಭಾವಿಸಬಾರದು. ಭಗವಂತನ ಮುಂದೆ ಪ್ರದರ್ಶಿಸುತ್ತಿದ್ದೇವೆ ಎಂದು ಭಾವಿಸಬೇಕು. ಸಾಹಿತ್ಯವನ್ನು ಅನುಭವಿಸಿ ಹಾಡಬೇಕು. ನೃತ್ಯ ಮಾಡಬೇಕು. ಆಗ ಕಲೆ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.

ADVERTISEMENT

‘ಸಂಗೀತವೇ ಸಿರಿಗೆರೆ ಪೀಠಕ್ಕೆ ನಾನು ಬರಲು ಕಾರಣವಾಯಿತು. ಸಿರಿಗೆರೆ ಮಠದಲ್ಲಿ ಭಜನೆ ಹಾಡಿದ್ದರಿಂದ ಮಠದಿಂದ ಪಿಟೀಲು ಕಳುಹಿಸಿಕೊಟ್ಟಿದ್ದರು. ಶಿವಮೊಗ್ಗದಲ್ಲಿ ಸಂಗೀತ ಕಲಿಕೆ ಆರಂಭಿಸಿದೆ. ಮೈಸೂರಿನಲ್ಲಿ ಪಿಟೀಲು ಚೌಡಯ್ಯರ ಸಂಸ್ಥೆಯಲ್ಲಿ ಪಿಟೀಲು ಅಧ್ಯಯನ ಮಾಡಿದೆ. ಮುಂಬಯಿಯಲ್ಲಿ ಮುಂದುವರಿಸಿದೆ. ಉನ್ನತ ವಿದ್ಯಾಭ್ಯಾಸಕ್ಕೆ ವಿಯೆನ್ನಾಗೆ ಹೋದಾಗ ಅಲ್ಲೂ ಭಾರತದಿಂದ ಬಂದ ಭರತನಾಟ್ಯ ತಂಡಕ್ಕೆ ಪಿಟೀಲು ವಾದಕನಾಗಿದ್ದೆ’ ಎಂದು ಸಂಗೀತದ ನಂಟನ್ನು ವಿವರಿಸಿದರು.

ಬೆಂಗಳೂರಿನ ಪ್ರಭಾತ್‌ ಆರ್ಟ್ಸ್‌ ಇಂಟರ್‌ನ್ಯಾಷನಲ್‌ ನಿರ್ದೇಶಕ ರಾಘವೇಂದ್ರ ಜೆ. ಪ್ರಭಾತ್‌ ಅವರಿಗೆ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಪ್ರಶಸ್ತಿ ‘ನಾಟ್ಯ ಸೌರಭ’, ಮೈಸೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸೆ ಡಾ. ಸುಕನ್ಯಾ ಪ್ರಭಾಕರ್‌ ಅವರಿಗೆ ವಿದುಷಿ ಲಕ್ಷ್ಮೀದೇವಮ್ಮ ಪ್ರಶಸ್ತಿ ‘ಸಂಗೀತ ಸುರಭಿ’, ಸಂತ ಶಿಶುನಾಳ ಶರೀಫ ಹಾಗೂ ಗುರುಗೋವಿಂದ ಭಟ್ಟರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಅವರಿಗೆ ವಜ್ರಮಹೋತ್ಸವ ವಿಶೇಷ ಪ್ರಶಸ್ತಿ ‘ಮಧುರಗಾನ ಸಂವರ್ಧಕ’ ನೀಡಿ ಗೌರವಿಸಲಾಯಿತು. ಭರತನಾಟ್ಯ ಪರೀಕ್ಷೆಯಲ್ಲಿ ಶೇ 95.75 ಅಂಕ ಗಳಿಸಿದ ಬಿ.ಜೆ. ಮನುಶ್ರೀಯನ್ನು ಸನ್ಮಾನಿಸಲಾಯಿತು.

ನಾಟ್ಯಭಾರತಿ ಗೌರವಾಧ್ಯಕ್ಷ ಎಚ್‌.ಬಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರಜನಿ ರಘುನಾಥ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ, ಶ್ರೀನಿಧಿ ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.