ADVERTISEMENT

ಸಮಾಜದ ಹಿತದೃಷ್ಟಿಯಿಂದ ಒಂದಾಗಿ: ಸಂಪತ್‌ಕುಮಾರ್ ಸಲಹೆ

ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್‌ಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:53 IST
Last Updated 26 ಡಿಸೆಂಬರ್ 2019, 9:53 IST
ದಾವಣಗೆರೆಯಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ‘ಕೇಶಶಿಲ್ಪಿಗಳು–ಕ್ಷೌರಿಕರ ಭವ್ಯ ಇತಿಹಾಸ’ ಪುಸ್ತಕವನ್ನು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್‌.ಶ್ರೀಪತಿ ಬಿಡುಗಡೆ ಮಾಡಿದರು
ದಾವಣಗೆರೆಯಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ‘ಕೇಶಶಿಲ್ಪಿಗಳು–ಕ್ಷೌರಿಕರ ಭವ್ಯ ಇತಿಹಾಸ’ ಪುಸ್ತಕವನ್ನು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್‌.ಶ್ರೀಪತಿ ಬಿಡುಗಡೆ ಮಾಡಿದರು   

ದಾವಣಗೆರೆ: ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಸಂಘಟನೆಯನ್ನು ಬೆಳೆಸುವ ಅಗತ್ಯವಿದೆ ಎಂದು ಸವಿತಾ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸಂಪತ್‌ಕುಮಾರ್ ಹೇಳಿದರು.

ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸವಿತಾ ಸಮಾಜದ ನೌಕರರ ಸಮಾವೇಶ ಮತ್ತು ‘ಕೇಶ ಶಿಲ್ಪಿಗಳು- ಕ್ಷೌರಿಕರ ಭವ್ಯ ಇತಿಹಾಸ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದಲಾದರೂ ನಾವು ಪ್ರತಿಷ್ಠೆ, ದ್ವೇಷ, ಅಸೂಯೆಗಳನ್ನು ಬಿಡಬೇಕು. ಆಗ ಮಾತ್ರ ರಾಜಕೀಯವಾಗಿ, ಧಾರ್ಮಿಕವಾಗಿ ಮುಂದೆ ಬರಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

‘ಸಮಾಜದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿವೇತನ, ಉಚಿತ ಶಿಕ್ಷಣ, ಸಹಾಯ ಧನ ಹೀಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ಸಮಾಜದ 5 ವಿದ್ಯಾರ್ಥಿನಿಯರಿಗೆ ಬಿ.ಇಡಿ ಶಿಕ್ಷಣಕ್ಕೆ ಉಚಿತವಾಗಿ ಪ್ರವೇಶ ನೀಡಲಾಗಿದೆ. ಬರುವ ವರ್ಷ 15 ವಿದ್ಯಾರ್ಥಿನಿಯರಿಗೆ ಇದನ್ನು ವಿಸ್ತರಿಸಲಾಗುವುದು’ ಎಂದರು.

‘ವೀರಪ್ಪಮೊಯ್ಲಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸಮಾಜಕ್ಕೆ ನಿವೇಶನ ನೀಡಿದ್ದಾರೆ. ಅದನ್ನು ಸಮಾಜದ ಸತ್ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವ ಚಿಂತನೆಗಳು ನಡೆದಿವೆ. ವೃತ್ತಿಯ ಜತೆಗೆ ಮಕ್ಕಳನ್ನು ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರೇರಣೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಕೇಶ ಶಿಲ್ಪಿಗಳು’ ಪುಸ್ತಕ ಬಿಡುಗಡೆಗೊಳಿಸಿದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್. ಶ್ರೀಪತಿ ಮಾತನಾಡಿ, ‘ವೃತ್ತಿಯ ಬಗ್ಗೆ ಸಮಾಜದವರು ಹೊಂದಿರುವ ಕೀಳರಿಮೆಯಿಂದ ಹೊರಬರಬೇಕು. ನಮ್ಮದು ಶ್ರೇಷ್ಠ ವೃತ್ತಿಯಾಗಿದ್ದು. ಯಾವ ಅಳುಕಿಲ್ಲದೇ ಕೆಲಸ ಮಾಡುವ ಮನೋಭಾವ ಹೊಂದಬೇಕು. ಆಗ ಮಾತ್ರವೇ ನಮ್ಮ ಶಕ್ತಿಯನ್ನು ತೋರಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಕೇಶ ಶಿಲ್ಪಿಗಳು ಕೃತಿಕಾರ, ಉಪನ್ಯಾಸಕ ಪಿ.ಬಿ. ವೆಂಕಟಾಚಲಪತಿ ಮಾತನಾಡಿ, ‘ಈ ದೇಶದ ಮೊದಲ ರಾಜವಂಶವಾದ ನಂದರ ಪ್ರಥಮ ದೊರೆ ನಮ್ಮ ಸಮಾಜಕ್ಕೆ ಸೇರಿದವರು. ಇಂಥಹ ಅನೇಕ ಇತಿಹಾಸ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. ಈ ಇತಿಹಾಸವನ್ನು ಭಾರತದ ಯಾವ ಇತಿಹಾಸಕಾರೂ ಹೇಳಿಲ್ಲ. ಆದರೆ ಗ್ರೀಕ್ ದೇಶದ ಇತಿಹಾಸಕಾರ ತನ್ನ ಕೃತಿಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ’ ಎಂದು ಹೇಳಿದರು.

ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ. ನಾಗರಾಜ್, ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ್, ಎಸ್.ಎನ್. ರಂಗಸ್ವಾಮಿ ಕಬ್ಬಳ, ದಾವಣಗೆರೆ ತಾಲೂಕು ಸಮಾಜದ ಅಧ್ಯಕ್ಷ ಎನ್. ರಂಗಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.