ADVERTISEMENT

ದಾವಣಗೆರೆ: ಸಂತ ಸೇವಾಲಾಲ್ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 2:49 IST
Last Updated 14 ಆಗಸ್ಟ್ 2022, 2:49 IST

ದಾವಣಗೆರೆ: ‘ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ದಿಂದ ಸೆಪ್ಟೆಂಬರ್ 11ರಿಂದ 19ರವರೆಗೆ ಆಯೋಜಿಸಿರುವ ‘ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗ–2022’ ಕಾರ್ಯಕ್ರಮಕ್ಕೆ ಕರುನಾಡು ಬಂಜಾರ ಸೇವಾ ಸೇನೆ ವಿರೋಧ ವ್ಯಕ್ತಪಡಿಸಿದೆ.

‘ಸೂರಗೊಂಡನಕೊಪ್ಪದಲ್ಲಿರುವ ಮಹಾಸಂಸ್ಥಾನ ದೇಶದ 9 ಕೋಟಿ ಜನರ ಬಂಜಾರ ಸಮುದಾಯದ ಆಸ್ತಿ. ಅದರಲ್ಲಿ ಬೇರೆ ಬೇರೆ ಕೋಮುವಾದಿ ಸಂಘಟನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕಾರ್ಯಕ್ರಮಕ್ಕೆ ಸಮಿತಿಯು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ್ ರಾಮಾವತ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಆರ್‌ಎಸ್‌ಎಸ್‌ನ ನಾಥೂರಾಂ ಗೋಡ್ಸೆ ಮಹಾತ್ಮಗಾಂಧಿ ಅವರನ್ನೇ ಕೊಂದಿರುವುದರಿಂದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವುದಿಲ್ಲ. ಆರ್‌ಎಸ್‌ಎಸ್, ಸಂಘಪರಿವಾರದವರು ಹಿಂದಿನಿಂದಲೂ ಬಂಜಾರ ಸಮುದಾಯದ ಮೇಲೆ ದೌರ್ಜನ್ಯವೆಸಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕಾರ್ಯಕ್ರಮ ಆಯೋಜಿಸುವ ಸಂಬಂಧ ಆಯೋಜಕರು ಸೂರಗೊಂಡನಕೊಪ್ಪದಲ್ಲಿರುವ ಸಮಿತಿಗೆ ಯಾವುದೇ ರೀತಿಯ ಮನವಿ ಕೊಟ್ಟಿಲ್ಲ. ಶಾಸಕ ಪಿ.ರಾಜೀವ್ ಅವರ ವೈಯಕ್ತಿಕ ಹಿತಾಸಕ್ತಿಗೆ ಅವರೊಬ್ಬರೇ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಅವರು ಸರ್ಕಾರದ ಓಲೈಸುತ್ತಾ ಪ್ರಭು ಚವ್ಹಾಣ್ ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿ ಆ ಸ್ಥಾನದಲ್ಲಿ ಅವರು ಕೂರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಾಂಡಾ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರಗಳು ನಡೆಯುತ್ತಿದ್ದು, ಯಾವ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿಲ್ಲ. ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗ ನೀಡದೇ, ವೈಯಕ್ತಿಕ ಓಲೈಕೆಗಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ.ಪಿ.ರಾಜೀವ್ ಅವರು ತಾಂಡಾ ಅಭಿವೃದ್ಧಿಯ ನಿಗಮದ ಯೋಜನೆಗಳನ್ನು ಮೊದಲು ಜನರಿಗೆ ತಲುಪಿಸಲಿ, ಅದಾದ ನಂತರ ಕಾರ್ಯಕ್ರಮ ಆಯೋಜಿಸಲಿ’ ಎಂದರು.

‘ಸೂರಗೊಂಡನಕೊಪ್ಪದಲ್ಲಿ ಕಾರ್ಯಕ್ರಮ ಮಾಡಿದರೆ ದೇಶದ 9 ಕೋಟಿ ಬಂಜಾರರ ಅಸ್ಮಿತೆಯನ್ನು ನಾಶಪಡಿಸಿದಂತಾಗುತ್ತದೆ. ಒಂದು ವೇಳೆ ಈ ಕಾರ್ಯಕ್ರಮ ಆಯೋಜಿಸಿದರೆ ಪ್ರತಿಭಟನೆ ಮಾಡುತ್ತೇವೆ. ಅಲ್ಲದೇ ನಾವೂ ಕಾರ್ಯಕ್ರಮ ಆಯೋಜಿಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಿದರೂ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಸಂಘದ ಖಜಾಂಚಿ ಕುಮಾರನಾಯ್ಕ, ಕ್ರೀಡಾ ಕಾರ್ಯದರ್ಶಿ ಅರುಣ್‌ಕುಮಾರ್, ಸಂದೀಪ್, ರವಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.