ADVERTISEMENT

‘21 ಗ್ರಾಮ ಪಂಚಾಯಿತಿಗಳಲ್ಲಿ ಅಟಲ್ ಭೂಜಲ ಯೋಜನೆ: ಮಾಡಾಳ್

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅಟಲ್ ಭೂಜಲ್ ಯೋಜನೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 5:59 IST
Last Updated 28 ಡಿಸೆಂಬರ್ 2021, 5:59 IST
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಟಲ್ ಭೂಜಲ್ ಯೋಜನೆ ಅನುಷ್ಠಾನ ಕುರಿತು ತರಬೇತಿ ಕಾರ್ಯಾಗಾರವನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಟಲ್ ಭೂಜಲ್ ಯೋಜನೆ ಅನುಷ್ಠಾನ ಕುರಿತು ತರಬೇತಿ ಕಾರ್ಯಾಗಾರವನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು   

ಚನ್ನಗಿರಿ: ಪ್ರತಿ ವರ್ಷ ರೈತರು ನೀರಿಗಾಗಿ ತೊಂದರೆಪಡುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಅಟಲ್ ಭೂಜಲ್ ಯೋಜನೆಯನ್ನು ಜಾರಿಗೆ ತಂದಿದೆ. ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಟಲ್ ಭೂಜಲ ಯೋಜನೆ ಸಮರ್ಪಕ
ಅನುಷ್ಠಾನ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಯೋಜನೆ ಅಡಿ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯಿತಿಗಳು ಯೋಜನೆ
ವ್ಯಾಪ್ತಿಗೆ ಒಳಪಟ್ಟಿವೆ. ಈ ಯೋಜನೆಯನ್ನು ಪ್ರಾಥಮಿಕ ಹಂತದಲ್ಲಿ ರಾಜ್ಯದ ನೀರಿನ ಸಮಸ್ಯೆ ಇರುವ ಗ್ರಾಮ
ಪಂಚಾಯಿತಿಗಳಲ್ಲಿ ₹ 1,201 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತದಲ್ಲಿ ಈ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಇನ್ನು 24 ಪಂಚಾಯಿತಿಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ADVERTISEMENT

ಈ ಯೋಜನೆ ಅಡಿ ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆ ಹಾಗೂ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುವುದು. ಜಮೀನುಗಳಲ್ಲಿ ಮಳೆಯ ನೀರು ಹೊರ ಹೋಗದಂತೆ ತಡೆಯಲು ಬದುಗಳನ್ನು ನಿರ್ಮಿಸಲಾಗುವುದು. ಕೃಷಿ ಇಲಾಖೆಯ ವಾಟರ್ ಶೆಡ್ ಯೋಜನೆಗೆ ₹ 13 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸಂತೇಬೆನ್ನೂರು, ಕೆರೆಬಿಳಚಿ, ದೊಡ್ಡಬ್ಬಿಗೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಹಿರಿಯ ಭೂ ವಿಜ್ಞಾನಿ ಶಫೀವುಲ್ಲಾ ಅಹಮದ್, ಜಿಲ್ಲಾ ಹಿರಿಯ ಭೂ ವಿಜ್ಞಾನಿ ಬಸವರಾಜ್, ಎಇಇ ಅನಿಲ್ ಕುಮಾರ್, ಯೋಜನೆಯ ತಜ್ಞ ಅಂಬರೀಶ್, ಭಾಗ್ಯಲಕ್ಷ್ಮೀ, ಎ. ಹುಲಿಗೇಶ್, ಈಶ್ವರ್ ನಾಯ್ಕ,ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.