
ದಾವಣಗೆರೆ: ‘ವಚನಗಳು, ಬಸವತತ್ವವನ್ನು ಕೆಲವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ, ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿ ಹರ ಸಾಹಿತ್ಯ ಸಂಕುಲ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಶೋಧಕ ಡಿ.ಎ. ಉಪಾಧ್ಯ ಅವರ ‘ಬಸವಶೈವದಲ್ಲಿ ಹಿಂದುತ್ವ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಬಸವಣ್ಣನವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಪಾಪ–ಪುಣ್ಯ, ಸ್ವರ್ಗ–ನರಕ ಅಲ್ಲಗಳೆದರೆಂದು ನಂಬಿಸಲಾಗುತ್ತಿದೆ. ಕರ್ಮ ಸಿದ್ಧಾಂತ ಟೀಕಿಸಿದ್ದಾರೆಂಬ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಬಸವಣ್ಣನವರು ಹೀಗೆ ಎಲ್ಲಿ ಹೇಳಿದ್ದಾರೆ ತೋರಿಸಿ?’ ಎಂದು ಸವಾಲು ಹಾಕಿದರು.
‘ಬಸವತತ್ವ ಪಾಲಿಸುವವರನ್ನು ನಾಸ್ತಿಕರನ್ನಾಗಿಸಲಾಗುತ್ತಿದೆ. ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಪ್ರತಿಪಾದಿಸುವವರು ಮೊದಲು ಶಿವಯೋಗ ಸಾಧನೆ ಮಾಡಬೇಕು’ ಎಂದು ಸಲಹೆ ಹೇಳಿದರು.
‘ಶೈವ ಪರಂಪರೆ ಬಸವಾದಿ ಶರಣರ ಪೂರ್ವದಿಂದಲೂ ಇದೆ. ಲಿಂಗ ಪೂಜೆ ಬಸವಣ್ಣನವರಿಗಿಂತ ಮೊದಲೇ ಇತ್ತು. ಕಾಯಕ ಸಮುದಾಯಗಳಿಗೆ ಇಷ್ಟಲಿಂಗ ದೀಕ್ಷೆ ನೀಡಿದ ಬಸವಣ್ಣ ಇಷ್ಟಲಿಂಗದಲ್ಲಿ ದೇವರನ್ನು ಕಾಣುವಂತೆ ಜಾಗೃತಿ ಮೂಡಿಸಿದರು’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.