
ದಾವಣಗೆರೆ: ಇಲ್ಲಿನ ಶಾಮನೂರು ಬಳಿ ಇರುವ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಜಿಲ್ಲಾ ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆ ಉದ್ಘಾಟನೆಯಾಗಿ ಆರು ತಿಂಗಳು ಕಳೆದಿದ್ದರೂ ರೋಗಿಗಳಿಗೆ ಮುಕ್ತವಾಗಿಲ್ಲ. ಸುಸಜ್ಜಿತ ಕಟ್ಟಡ ನಿರ್ಮಿಸಿರುವ ಸರ್ಕಾರ, ಈವರೆಗೆ ಒಬ್ಬ ಸಿಬ್ಬಂದಿಯನ್ನೂ ನೇಮಿಸದ್ದರಿಂದ ಹೊಸ ಆಸ್ಪತ್ರೆಗೆ ಬೀಗ ಬಿದ್ದಿದೆ.
ವಿಶಾಲವಾದ ಆವರಣ, ಹಸಿರು ಹುಲ್ಲುಹಾಸು, ಹತ್ತಾರು ಪ್ರಭೇದದ ಆಯುರ್ವೇದ ಗಿಡಗಳು, ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಆಕರ್ಷಕವಾದ ಭತ್ತದ ಗದ್ದೆಗಳು ಆಸ್ಪತ್ರೆಯ ವಾತಾವರಣವನ್ನು ಮುದಗೊಳಿಸುತ್ತವೆ. ನಗರದ ಹೊರವಲಯದಲ್ಲಿದೆ ಎಂಬ ಆಕ್ಷೇಪದ ಹೊರತಾಗಿಯೂ ಆಯುಷ್ ಆಸ್ಪತ್ರೆಯು ಕಣ್ಮನ ಸೆಳೆಯುವಂತೆ ನಿರ್ಮಾಣವಾಗಿದೆ. ಆದರೆ, ವೈದ್ಯರು ಸೇರಿ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಸೇವೆ ಸಿಗದಂತಾಗಿದೆ.
ವೈದ್ಯರು, ಥೆರಪಿಸ್ಟ್, ಸಹಾಯಕರು ಸೇರಿದಂತೆ 56 ಹುದ್ದೆಗಳಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಆಯುಷ್ ಇಲಾಖೆಯ ಆಯುಕ್ತರು 2025ರ ಜನವರಿಯಲ್ಲೇ ಪ್ರಸ್ತಾವನೆ ಸಲ್ಲಿಸಿದ್ದರು. ಹಣಕಾಸು ಇಲಾಖೆಯು ಎರಡು ಮೂರು ಬಾರಿ ಕೆಲವು ವಿಚಾರಗಳಲ್ಲಿ ಸ್ಪಷ್ಟನೆ ಕೇಳಿದೆ. ಆದರೆ ಸಿಬ್ಬಂದಿ ನೇಮಿಸುವ ಕುರಿತಂತೆ ಇನ್ನೂ ನಿರ್ಧಾರ ಕೈಗೊಳ್ಳದ ಕಾರಣ ಆಸ್ಪತ್ರೆ ಕಾರ್ಯಾರಂಭ ನನೆಗುದಿಗೆ ಬಿದ್ದಿದೆ.
2016–17ರ ಬಜೆಟ್‌ನಲ್ಲಿ ಆಸ್ಪತ್ರೆ ನಿರ್ಮಾಣ ಪ್ರಸ್ತಾಪಿಸಲಾಗಿತ್ತು. ಜಿ+3 ಅಂತಸ್ತು ಹೊಂದಿರುವ ಕಟ್ಟಡವನ್ನು ಕೆಎಚ್‌ಆರ್‌ಡಿಬಿ ₹7.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. 2022–23ರಲ್ಲಿ ನಿರ್ಮಾಣ ಪೂರ್ಣಗೊಂಡಿತ್ತು. ಕಳೆದ ಜೂನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಉದ್ಘಾಟಿಸಿದ್ದರು. ಇದೇ ಆವರಣದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಕಚೇರಿ ಇದ್ದು, ಅಲ್ಲಿನ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಗ್ರಹಣ ಹಿಡಿದಿದೆ.
‘ಆಸ್ಪತ್ರೆಯು 50 ಹಾಸಿಗೆ ಸಾಮರ್ಥ್ಯ ಹೊಂದಿದೆ. ಆದರೆ, ಅದಕ್ಕೆ ತಕ್ಕ ವೈದ್ಯಕೀಯ ಉಪಕರಣಗಳು ಇನ್ನೂ ಸರಬರಾಜಾಗಿಲ್ಲ. ಇದೇ ರೀತಿಯ ಆಸ್ಪತ್ರೆಗಳು ಗದಗ, ಮಂಗಳೂರಿನಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತಾವಿತ ಹುದ್ದೆಗಳ ಪೈಕಿ ಶೇ 50ರಷ್ಟು ಭರ್ತಿ ಮಾಡಿದರೆ ತಾತ್ಕಾಲಿಕವಾಗಿ 10 ಬೆಡ್ ಆಸ್ಪತ್ರೆಯೊಂದಿಗೆ ಕಾರ್ಯಾರಂಭ ಮಾಡಲು ನಾವು ಸಿದ್ಧರಿದ್ದೇವೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರ ಕುಮಾರ್ ಬಿ.ಯು ತಿಳಿಸಿದರು.
ಜಿಲ್ಲಾ ಆಯುಷ್ ಸಂಯುಕ್ತ ಆಸ್ಪತ್ರೆಯಡಿ ನ್ಯಾಚುರೋಪತಿ, ಆಯುರ್ವೇದ, ಯುನಾನಿ ಹಾಗೂ ಹೊಮಿಯೊಪತಿ ವೈದ್ಯಕೀಯ ಪದ್ಧತಿಗಳ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ನ್ಯಾಚುರೋಪತಿ ಆಸ್ಪತ್ರೆ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ತಲಾ ಒಂದು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎರಡೂ ಕಡೆ ಹೊರರೋಗಿಳಿಗೆ (ಒಪಿಡಿ) ವೈದ್ಯಕೀಯ ಸಲಹೆ ಸೌಲಭ್ಯವಿದೆಯೇ ವಿನಾ ಚಿಕಿತ್ಸೆಗೆ ದಾಖಲಾಗಲು ಅವಕಾಶವಿಲ್ಲ. ಒಳರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ ಹೊಸ ಕಟ್ಟಡ ನಿರ್ಮಾಣವಾಗಿದ್ದರೂ, ಅದು ಜನರ ಬಳಕೆಗೆ ಲಭ್ಯವಿಲ್ಲ.
ಆಸ್ಪತ್ರೆ ಆರು ತಿಂಗಳಾದರೂ ಕಾರ್ಯಾರಂಭ ಮಾಡದ ಕಾರಣ, ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಆಯುಷ್ ಆಯುಕ್ತರಿಗೆ ಪತ್ರ ಬರೆದಿದ್ದೇವೆಎಂ.ಸಿ. ವಿಜಯ ಕುಮಾರ್, ಅಧ್ಯಕ್ಷ, ದಾವಣಗೆರೆ ಜಿಲ್ಲೆ ತೆರಿಗೆ ಪಾವತಿದಾರರ ಸಂಘ
‘ಸರ್ಕಾರದಿಂದ ಹುದ್ದೆ ಸೃಜನೆಯಾಗದ ಹೊರತು, ನಿಯೋಜನೆ, ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಲು ಬರುವುದಿಲ್ಲ. ಅನುಮತಿ ನೀಡಿದರೆ, ಜಿಲ್ಲೆಯ ಇತರೆಡೆ ಇರುವ ವೈದ್ಯ ಸಿಬ್ಬಂದಿಯನ್ನು ವಾರಕ್ಕೊಬ್ಬರಂತೆ ಇಲ್ಲಿಗೆ ನಿಯೋಜಿಸಿ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಲು ನಾವು ಸಿದ್ಧರಿದ್ದೇವೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರ ಕುಮಾರ್ ಬಿ.ಯು ಸ್ಪಷ್ಟಪಡಿಸಿದರು.
‘ಸಿಬ್ಬಂದಿ ನೇಮಕವಾದೊಡನೆ ಆಸ್ಪತ್ರೆಗೆ ಅಗತ್ಯವಾಗಿ ಬೇಕಿರುವ ಮಂಚ, ಹಾಸಿಗೆ, ಥೆರಪಿ ಉಪಕರಣ ಹಾಗೂ ಔಷಧ ಪೂರೈಕೆಯಾಗಲಿವೆ. ವೈದ್ಯರ ಜೊತೆಗೆ ಥೆರಪಿ ಸಿಬ್ಬಂದಿ, ಸಹಾಯಕರು, ‘ಡಿ’ ಗ್ರೂಪ್ ನೌಕರರು ಸೇರಿದಂತೆ ಹಲವು ಹುದ್ದೆಗಳ ಅಗತ್ಯವಿದೆ. ಆಸ್ಪತ್ರೆ ಕಾರ್ಯಾರಂಭ ಮಾಡದಿದ್ದರೂ ಈ ಜಾಗವನ್ನು ಶುಭ್ರವಾಗಿ ಇಟ್ಟುಕೊಂಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.