ADVERTISEMENT

ಬಸವಾಪಟ್ಟಣ: ವೃದ್ಧಾಶ್ರಮದಲ್ಲಿ ಸ್ವಾತಂತ್ರ್ಯ ಯೋಧನ ಪತ್ನಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 4:10 IST
Last Updated 13 ಆಗಸ್ಟ್ 2022, 4:10 IST
ಬಸವಾಪಟ್ಟಣದ ಸಿದ್ಧಾರೂಢ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ವಿಜಯಮ್ಮ ಅವರು ಪತಿ ಎಸ್. ರಾಮರಾವ್ ಅವರಿಗೆ ಭಾರತ ಸರ್ಕಾರ ನೀಡಿರುವ ತಾಮ್ರ ಪತ್ರವನ್ನು ಪ್ರದರ್ಶಿಸಿದರು.
ಬಸವಾಪಟ್ಟಣದ ಸಿದ್ಧಾರೂಢ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ವಿಜಯಮ್ಮ ಅವರು ಪತಿ ಎಸ್. ರಾಮರಾವ್ ಅವರಿಗೆ ಭಾರತ ಸರ್ಕಾರ ನೀಡಿರುವ ತಾಮ್ರ ಪತ್ರವನ್ನು ಪ್ರದರ್ಶಿಸಿದರು.   

ಬಸವಾಪಟ್ಟಣ: ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಶಿಕ್ಷಕರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ್ದ ಭದ್ರಾವತಿಯ ಎಸ್‌. ರಾಮರಾವ್‌ ಅವರ ಪತ್ನಿ ವಿಜಯಮ್ಮ ಈಗ ನಿರಾಶ್ರಿತರಾಗಿ ಇಲ್ಲಿನ ಸಿದ್ಧಾರೂಢ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪತಿ ರಾಮರಾವ್‌ ಅವರಿಗಿದ್ದ ದೇಶಭಕ್ತಿ ಕುರಿತು ವಿಜಯಮ್ಮ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

‘ಪತಿ ರಾಮರಾವ್‌ ಅವರು 1933ರಲ್ಲಿ ಭದ್ರಾವತಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. 12ನೇ ವಯಸ್ಸಿನಲ್ಲಿಯೇ ಶಾಲೆಯ ಶಿಕ್ಷಕರ ಪ್ರೇರಣೆಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಎರಡು ವರ್ಷಗಳ ಕಾಲ ಶಿವಮೊಗ್ಗ ಜೈಲಿನಲ್ಲಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತರಲೇಬೇಕು ಎಂಬ ಛಲ ಅವರಲ್ಲಿತ್ತು. ತಮ್ಮಂತೆಯೇ ನೂರಾರು ಯುವಕರನ್ನು ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ವಿದ್ಯಾಭ್ಯಾಸ ಮೊಟಕಾಗಿದ್ದರಿಂದ ಜೀವನೋಪಾಯಕ್ಕಾಗಿ ಪೌರೋಹಿತ್ಯ ಮಾಡುತ್ತಿದ್ದರು. ಗಾಂಧೀಜಿಯವರ ಅನುಯಾಯಿಯಾದ್ದರಿಂದ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಖಾದಿ ಅವರ ಉಡುಪಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಸ್ವಾವಲಂಬನೆ ಭಾರತದ ಕನಸು ಕಾಣುತ್ತಿದ್ದರು’ ಎಂದು ವಿಜಯಮ್ಮ ಸ್ಮರಿಸಿದರು.

ADVERTISEMENT

‘ಸ್ವಾತಂತ್ರ್ಯದ ರಜತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಪತಿಗೆ ಸ್ವಾತಂತ್ರ್ಯ ಯೋಧ ಎಂದು ತಾಮ್ರಪತ್ರವನ್ನು ನೀಡಿ ಗೌರವಿಸಿದ್ದರು. ಅಂದಿನಿಂದ ಕೇಂದ್ರ ಸರ್ಕಾರದ ಮಾಸಾಶನ ದೊರೆಯಲಾರಂಭಿಸಿತು. 1994ರಲ್ಲಿ ಪತಿ ನಿಧನರಾದರು. ನಂತರದಲ್ಲಿ ನನಗೂ ಈಮಾಸಾಶನ ಬರುತ್ತಿತ್ತು. ನಮಗೆ ಮಕ್ಕಳಿಲ್ಲ. ನೋಡಿಕೊಳ್ಳುವವರು ಯಾರೂ ಇಲ್ಲವಾದ ಕಾರಣ ವೃದ್ಧಾಶ್ರಮದಲ್ಲಿದ್ದೇನೆ. ವೃದ್ಧಾಶ್ರಮ ನಡೆಸುತ್ತಿರುವ ಗುರುಮೂರ್ತಿ ಮತ್ತು ಅವರ ಪತ್ನಿ ಉಮಾದೇವಿ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ಸ್ವಾತಂತ್ರ್ಯ ಯೋಧರೊಬ್ಬರ ಪತ್ನಿಗೆ ಆಶ್ರಯ ನೀಡಿ, ಅವರ ಯೋಗ ಕ್ಷೇಮ ನೋಡಿಕೊಳ್ಳುವುದು ದೇಶ ಸೇವೆಯೆಂದೇ ಭಾವಿಸಿದ್ದೇವೆ. ವಿಜಯಮ್ಮನವರಿಗೆ ಯಾವ ಕೊರತೆಯೂ ಆಗದಂತೆ ವ್ಯವಸ್ಥೆ ಮಾಡಿದ್ದೇವೆ. ಅವರೂ ಆಶ್ರಮದ ಸದಸ್ಯರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ’ ಎನ್ನುತ್ತಾರೆ ವೃದ್ಧಾಶ್ರಮದ ಕಾರ್ಯದರ್ಶಿ ಎಚ್‌.ಟಿ. ಉಮಾದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.