ADVERTISEMENT

ಬಗರ್‌ ಹುಕುಂ: ಬಂಜಾರರ ಭೂಮಿ ಸಕ್ರಮಗೊಳಿಸಲು ಮನವಿ

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 23:49 IST
Last Updated 14 ಫೆಬ್ರುವರಿ 2024, 23:49 IST
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್ ಅವರ 285ನೇ ಜಯಂತಿ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಯುವತಿಯರು ನೃತ್ಯ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್ ಅವರ 285ನೇ ಜಯಂತಿ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ಯುವತಿಯರು ನೃತ್ಯ ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ   

ದಾವಣಗೆರೆ: ಬಂಜಾರರು ತಲತಲಾಂತರದಿಂದ ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವ ಸರ್ಕಾರಿ, ಅರೆ ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ಸಕ್ರಮಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಮನವಿ ಸಲ್ಲಿಸಿತು.

ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಬಳಿಯ ಭಾಯಾಗಡದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್ ಅವರ 285ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ ಸಮಿತಿಯ ಅಧ್ಯಕ್ಷ ರುದ್ರಪ್ಪ ಎಂ.ಲಮಾಣಿ ಮನವಿ ಸಲ್ಲಿಸಿದರು.

‘ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಭೂ ಯೋಜನೆಗೆ ಹೆಚ್ಚು ಅನುದಾನ ನೀಡಬೇಕು. ಸರ್ಕಾರವು ಬಂಜಾರ ಕುಟುಂಬಗಳು ಭೂ ಒಡೆತನ ಹೊಂದಲು ಅಗತ್ಯ ಕಾರ್ಯಕ್ರಮ ರೂಪಿಸಬೇಕು’ ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.

ADVERTISEMENT

‘ಭಾಯಾಗಡದಲ್ಲಿರುವ ಸಪ್ತ ಮಾತೃಕೆಯರ ಕೊಳದ ನವೀಕರಣ ಮತ್ತು ಕಾಗಿನೆಲೆ ಕ್ಷೇತ್ರದ ಮಾದರಿಯಲ್ಲಿ ಸಂಗೀತ ಕಾರಂಜಿ ನಿರ್ಮಿಸಲು ₹ 1 ಕೋಟಿ ಅನುದಾನ ಮಂಜೂರು ಮಾಡಬೇಕು. ಚಿನ್ನಿಕಟ್ಟೆಯಿಂದ ಹಳೇ ಜೋಗದವರೆಗೆ ಒಟ್ಟು 10 ಕಿ.ಮೀ. ಉದ್ದದ ಚತುಷ್ಪಥ ರಸ್ತೆಗೆ ₹ 44 ಕೋಟಿ ಅಂದಾಜಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ರಸ್ತೆ ನಿರ್ಮಿಸಲು ಅನುದಾನ ನೀಡಬೇಕು’ ಎಂದು ಕೋರಲಾಯಿತು.

‘ಕ್ಷೇತ್ರದಲ್ಲಿ ಅಪೂರ್ಣವಾಗಿರುವ ಯಾತ್ರಿ ನಿವಾಸ ಪೂರ್ಣಗೊಳಿಸಲು ₹ 1 ಕೋಟಿ ಬಿಡುಗಡೆ ಮಾಡಬೇಕು. ಸುತ್ತಲೂ ಇರುವ ವರದನಕೆರೆ, ಭೂತನಕೆರೆ, ಬಸವಣ್ಣನಕೆರೆ, ಮಾಚಗೊಂಡನಹಳ್ಳಿ ಕೆರೆ, ಕೊಡತಾಳು ಕೆರೆಗಳ ಹೂಳು ಎತ್ತಬೇಕು. ಕೆರೆ ಒತ್ತುವರಿ ಪ್ರದೇಶ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು. 

‘ಸಮಿತಿಯಿಂದ ನೀಡಲಾಗಿರುವ ಬೇಡಿಕೆ ಪಟ್ಟಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸುತ್ತೇನೆ. ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.