ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬಂಜಾರ ಜನಜಾಗೃತಿ ರಾಜ್ಯ ಸಮಾವೇಶ
ಬೆಂಗಳೂರು: ‘ನಿಖರ ದತ್ತಾಂಶ ಸಂಗ್ರಹವಾಗುವವರೆಗೆ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಬಾರದು’ ಎಂದು ಬಂಜಾರ ಜನಜಾಗೃತಿ ರಾಜ್ಯ ಸಮಾವೇಶದಲ್ಲಿ ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸಲಾಯಿತು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಬಂಜಾರ ಸಮುದಾಯದ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಸ್ವಾಮೀಜಿಗಳು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಮುಖಂಡರು ಹಕ್ಕೊತ್ತಾಯವನ್ನು ಮಂಡಿಸಿದರು.
ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ‘ಸಮುದಾಯದಿಂದ ನನಗೆ ಅಧಿಕಾರ ಸಿಕ್ಕಿದೆ. ನನಗೆ ಸರ್ಕಾರಕ್ಕಿಂತ ಸಮುದಾಯದ ಹಿತ ಮುಖ್ಯ. ನಿಮ್ಮೆಲ್ಲರ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಬಸವರಾಜ ನಾಯ್ಕ ಮಾತನಾಡಿ, ‘ಎರಡು ತಿಂಗಳಲ್ಲಿ ಎಲ್ಲ ತಾಂಡಾಗಳಲ್ಲಿ ದತ್ತಾಂಶಗಳ ಚಳವಳಿ ನಡೆಸಬೇಕಿದೆ. ಸಮುದಾಯದ ವಾಸ್ತವ ದತ್ತಾಂಶಗಳನ್ನು ಸಂಗ್ರಹಿಸಿ, ಆಯೋಗಕ್ಕೆ ಸಲ್ಲಿಸಬೇಕಿದೆ’ ಎಂದರು.
ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಮಾತನಾಡಿ, ‘ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಅಧಿವೇಶನದಲ್ಲಿ ಏನು ಮಾಡಬೇಕೆಂಬುದರ ಕುರಿತು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾವೇಶದ ರಾಜ್ಯ ಸಮಿತಿ ಸಂಚಾಲಕ ಅನಂತ ನಾಯ್ಕ, ‘ಪರಿಶಿಷ್ಟ ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಯನ್ನು ವಾಸ್ತವ ದತ್ತಾಂಶಗಳ ಮೂಲಕ ನಿರೂಪಿಸಿ ಸಾಬೀತು ಪಡಿಸಲು ರಾಜ್ಯ ಸರ್ಕಾರದ ಬಳಿ ಸದ್ಯ ಯಾವುದೇ ವೈಜ್ಞಾನಿಕ ಅಧ್ಯಯನ, ಸಮೀಕ್ಷೆ, ಪರಾಮರ್ಶೆ ಮಾಡಿರುವ ವರದಿಗಳು ಇಲ್ಲ’ ಎಂದು ಹೇಳಿದರು.
ವಿಧಾನಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಸಚಿವ ರೇವುನಾಯ್ಕ ಬೆಳಮಗಿ, ವಿಧಾನ ಪರಿಷತ್ತಿನ ಸದಸ್ಯ ಪ್ರಕಾಶ್ ರಾಥೋಡ್, ನಿವೃತ್ತ ನ್ಯಾಯಮೂರ್ತಿ ಗಣೇಶ ನಾಯ್ಕ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಮತ್ತು ಸಮುದಾಯದ ಸ್ವಾಮೀಜಿಗಳು, ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.