ಪ್ರಾತಿನಿಧಿಕ ಚಿತ್ರ
ದಾವಣಗೆರೆ: ನ್ಯಾ. ನಾಗಮೋಹನ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಬಂಜಾರ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ಜಯದೇವ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪಿ.ಬಿ. ರಸ್ತೆ ಮಾರ್ಗವಾಗಿ ತೆರಳಿ ಉಪ ವಿಭಾಗಾಧಿಕಾರಿ ಕಚೇರಿ ಎದುರು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಒಳ ಮೀಸಲಾತಿ ವರ್ಗೀಕರಣದಲ್ಲಿ ಬಂಜಾರ ಸಮುದಾಯದ ಸಾಂವಿಧಾನಿಕ ಮೀಸಲಾತಿಯನ್ನು ಕಿತ್ತುಕೊಳ್ಳುವ ಅಥವಾ ಕಡಿಮೆಗೊಳಿಸುವ ಪ್ರಯತ್ನವನ್ನು ಒಪ್ಪುವುದಿಲ್ಲ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ನಾಗಮೋಹನ ದಾಸ್ ವರದಿಯಲ್ಲಿ ಸ್ಪಶ್ಯ, ಅಸ್ಪಶ್ಯ ಪದಗಳ ಬಳಕೆ ಇದೆ. ಇದು ನಿಷಿದ್ಧವಾಗಿದ್ದರೂ ಆ ಪದವನ್ನು ಬಳಸಿ ಬಂಜಾರ ಸಮುದಾಯವನ್ನು ಸ್ಪಶ್ಯ ಗುಂಪಿನಲ್ಲಿ ಸೇರಿಸಿರುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ನಮ್ಮನ್ನು ಅಸ್ಪಶ್ಯರೆಂದೇ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
‘ಆಯೋಗ ಸಂಗ್ರಹಿಸಿದ ವರದಿಯ ಅಂಶಗಳು ಅಪೂರ್ಣ, ಅವೈಜ್ಞಾನಿಕವಾಗಿವೆ. ಅಸ್ಪಷ್ಟ ದತ್ತಾಂಶ ಮತ್ತು ನ್ಯಾಯಸಮ್ಮತವಲ್ಲದ ಶಿಫಾರಸುಗಳನ್ನು ವರದಿ ಒಳಗೊಂಡಿದೆ. ಕಳೆದ 50 ವರ್ಷಗಳಿಂದ ಪರಿಶಿಷ್ಟ ಜಾತಿಗಳ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ ಮತ್ತು ಈ ಸಮೀಕ್ಷೆಯ ಸಮಗ್ರ ದತ್ತಾಂಶ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸಂತ ಸೇವಾಲಾಲ್ ಅವರ ಪುತ್ಥಳಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಕಾರರು ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಲಂಬಾಣಿ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರೂ ಭಾಗವಹಿಸಿದ್ದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಬಸವರಾಜ ನಾಯ್ಕ, ಪಾಲಿಕೆ ಮಾಜಿ ಸದಸ್ಯ ಶಿವಪ್ರಕಾಶ್, ಮಂಜಾನಾಯ್ಕ, ಮುಖಂಡರಾದ ಅನಿಲ್ ನಾಯ್ಕ, ಹನುಮಂತ ನಾಯ್ಕ, ರಮೇಶ ನಾಯ್ಕ, ಮಲ್ಲೇಶ್ ನಾಯ್ಕ, ಮಂಜು ನಾಯ್ಕ, ಚಿನ್ನಸಮುದ್ರ ಶೇಖರನಾಯ್ಕ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.