
ದಾವಣಗೆರೆ: ಬ್ಯಾಂಕಿಂಗ್ ಸೇವೆಗಳನ್ನು ವಾರದಲ್ಲಿ ಐದು ದಿನಗಳಿಗೆ ಸೀಮಿತಗೊಳಿಸಬೇಕು ಎಂದು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಮಂಡಿಪೇಟೆಯ ಕೆನರಾ ಬ್ಯಾಂಕ್ ಮುಂಭಾಗ ಜಮಾಯಿಸಿದ ಬ್ಯಾಂಕ್ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಕೇಂದ್ರ ಹಣಕಾಸು ಇಲಾಖೆ ಸರಿಯಾಗಿ ಸ್ಪಂದಿಸದೇ ಇದ್ದರೆ ಜ.27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ಬ್ಯಾಂಕ್ ನೌಕರರ ಕೆಲಸದ ಅವಧಿಯನ್ನು ವಾರದಲ್ಲಿ ಐದು ದಿನಗಳಿಗೆ ಮಿತಿಗೊಳಿಸುವಂತೆ ಕೇಂದ್ರ ಸರ್ಕಾರದ ಎದುರು ಪ್ರಸ್ತಾವವಿದೆ. ಇದಕ್ಕೆ ಅನುಮೋದನೆ ನೀಡಬೇಕಾದ ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಎರಡು ವರ್ಷಗಳಿಂದ ವಿಳಂಬ ಮಾಡುತ್ತಿದೆ. ಈ ಕುರಿತು ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು’ ಎಂದು ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ಕೆ.ರಾಘವೇಂದ್ರ ನಾಯರಿ ಒತ್ತಾಯಿಸಿದರು.
ವೇದಿಕೆಯ ಮುಖಂಡರಾದ ಕೆ. ವಿಶ್ವನಾಥ ಬಿಲ್ಲವ, ಪ್ರದೀಪ್ ಪಾಟೀಲ, ಎಂ.ಪಿ. ಕಿರಣ್‌ಕುಮಾರ್, ಶಮಂತ್ ಎಂ., ಸಿದ್ಧಾರ್ಥ್, ಎಚ್.ಎಸ್. ತಿಪ್ಪೇಸ್ವಾಮಿ, ಆರ್. ಆಂಜನೇಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.