ADVERTISEMENT

ಮುಸ್ಲಿಂ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಬ್ಯಾಂಕ್‌

ಕಷ್ಟಪಡುವವರ ನೆರವಿಗಾಗಿ ‘ಮೆಹನತ್‌’ ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್‌

ಬಾಲಕೃಷ್ಣ ಪಿ.ಎಚ್‌
Published 8 ಮಾರ್ಚ್ 2021, 4:50 IST
Last Updated 8 ಮಾರ್ಚ್ 2021, 4:50 IST
ಜಬೀನಾ ಖಾನಂ
ಜಬೀನಾ ಖಾನಂ   

ದಾವಣಗೆರೆ: ಬೆವರನು ಸುರಿಸಿ ದುಡಿಯುವ ಮುಸ್ಲಿಮ್‌ ಮಹಿಳೆಯರಿಗಾಗಿ ‘ಮೆಹನತ್‌’ ಮಹಿಳಾ ಸೌಹಾರ್ದ ಸಹಕಾರಿ ಎಂಬ ಬ್ಯಾಂಕ್‌ ಸದ್ದಿಲ್ಲದೇ ನಡೆಯುತ್ತಿದೆ. ಮಹಿಳೆಯರೇ ನಡೆಸುವ ಈ ಬ್ಯಾಂಕ್‌ ಹಲವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದೆ.

ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ನೋಂದಣಿಯಾಗಿ ವಿನಾಯಕ ನಗರ 3ನೇ ಮೇನ್‌ ಮುರುಘರಾಜೇಂದ್ರ ಪ್ರೌಢಶಾಲೆ ಬಳಿ 2019ರ ನವೆಂಬರ್‌ 24ರಂದು ಈ ಬ್ಯಾಂಕ್‌ ಹುಟ್ಟಿಕೊಂಡಿದೆ. ಮನೆ ಕಟ್ಟಲು, ಮದುವೆ ಮಾಡಲು, ನಿವೇಶನ ಖರೀದಿಸಲು, ವ್ಯಾಪಾರ ಮಾಡಲು, ಶಿಕ್ಷಣ ಪಡೆಯಲು ಹೀಗೆ ಯಾವುದೇ ಕಾರಣಕ್ಕೆ ಸಾಲ ಪಡೆಯುವ ಅವಕಾಶವನ್ನು ಈ ಬ್ಯಾಂಕ್‌ ಮುಸ್ಲಿಂ ಮಹಿಳೆಯರಿಗೆ ಒದಗಿಸಿದೆ. ಆದರೆ ಸಾಲದ ಮೊತ್ತ ಸದ್ಯ ₹ 50 ಸಾವಿರದ ಮಿತಿಯಲ್ಲಿ ಇದೆ.

‘ಯಾವುದೇ ಬ್ಯಾಂಕ್‌ಗಳಲ್ಲಿ ಬಡವರಿಗೆ ಸಾಲ ಸಿಗುವುದು ಕಷ್ಟ. ಅದರಲ್ಲೂ ಮುಸ್ಲಿಮರಿಗೆ ಇನ್ನೂ ಕಷ್ಟ. ಇನ್ನು ಬಡ ಮುಸ್ಲಿಂ ಮಹಿಳೆಯರಿಗೆ ಸಾಲ ಸಿಗುವುದು ಕನಸಿನ ಮಾತು. ಇದನ್ನೆಲ್ಲ ಹತ್ತಿರದಿಂದ ನೋಡಿಯೇ ಮಹಿಳೆಯರಿಗಾಗಿಯೇ ಒಂದು ಬ್ಯಾಂಕ್‌ ತೆರೆಯಬೇಕು ಎಂದು ನಿರ್ಧರಿಸಿದೆವು’ ಎಂದು ಮೆಹನತ್‌ ಮುಸ್ಲಿಂ ಅಲ್ಪಸಂಖ್ಯಾತರ ಮಹಿಳಾ ಸೌಹಾರ್ದ ಸಹಕಾರಿ ಅಧ್ಯಕ್ಷೆ ಜಬೀನಾಖಾನಂ.

ADVERTISEMENT

ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿದವರನ್ನು ಗುರುತು ಮಾಡಿದರೆ ಶೇ 99 ಮಂದಿ ಪುರುಷರೇ ಆಗಿದ್ದಾರೆ. ಮಹಿಳೆಯರು ನಿಯತ್ತಾಗಿ ಮರುಪಾವತಿ ಮಾಡುತ್ತಾರೆ. ಮಹಿಳೆಯರು ಅದರಲ್ಲೂ ದುಡಿವ ಮಹಿಳೆಯರು ಮೋಸ ಮಾಡುವುದಿಲ್ಲ. ಅದರಿಂದಾಗಿಯೇ ಮಹಿಳೆಯರಿಗೆ ಸಾಲ ನೀಡಿದರೆ ಶೇ 95ಕ್ಕಿಂತ ಅಧಿಕ ಯಾವ ಒತ್ತಡಗಳೂ ಇಲ್ಲದೇ ಬರುತ್ತವೆ. ಉಳಿದ ಶೇ 5ರಷ್ಟು ಮಂದಿಗೆ ಸ್ವಲ್ಪ ಒತ್ತಡ ಹಾಕಬೇಕಾಗುತ್ತದೆ ಎಂದರು.

₹ 100 ನೀಡಿ ಬ್ಯಾಂಕ್‌ನ ಸದಸ್ಯರಾಗಬಹುದು. ಬೈಲಾ ಪ್ರಕಾರ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಇದು ಮುಸ್ಲಿಂ ಮಹಿಳೆಯರಿಗಾಗಿ ಮುಸ್ಲಿಂ ಮಹಿಳೆಯರೇ ನಡೆಸುವ ಬ್ಯಾಂಕ್‌ ಎಂದು ತಿಳಿಸಿದರು.

‘400 ಮಂದಿ ಸದಸ್ಯರಿದ್ದಾರೆ. ಯಾರಿಂದಲೂ ಠೇವಣಿ ಪಡೆದಿಲ್ಲ. ಪಿಗ್ಮಿ ಮಾಡಿಲ್ಲ. ಉಳಿತಾಯ ಖಾತೆ, ಚಾಲ್ತಿಖಾತೆ, ಸಾಲ, ಮರುಪಾವತಿ ಅಷ್ಟೇ ಈಗ ಇದೆ. 2019ರ ನವೆಂಬರ್‌ನಿಂದ ಇಲ್ಲಿವರೆಗೆ ₹ 50 ಸಾವಿರದಂತೆ 70 ಮಂದಿಗೆ ಸಾಲ ನೀಡಿದ್ದೇವೆ. ಶೇ 95ಕ್ಕೂ ಅಧಿಕ ಮಂದಿ ನಿಯಮಿತವಾಗಿ ಸಾಲ ಮರುಪಾವತಿ ಮಾಡುತ್ತಿದ್ದಾರೆ’ ಎಂದು ಸಿಇಒ ಸಬ್ರಿನ್‌ ತಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

13 ಸದಸ್ಯರು

ಅಧ್ಯಕ್ಷರು, ಉಪಾಧ್ಯಕ್ಷರು, ಸೇರಿ ಒಟ್ಟು 13 ಮಂದಿ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ.

ಜಬೀನಾ ಖಾನಂ, ಹಸೀನಾ ಬಾನು ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಶಿರಿನ್‌ ಬಾನು, ಜರಿನಾಬಿ, ನಾಹೇರಾ ಬಾನು, ಶಾಹಿನಾ ಬಾನು, ಅಖಿಲಾಬಿ, ನೂರ್‌ ಫಾತಿಮಾ, ನಗಿಸಾ ಬಾನು, ಗುಲ್ಜರ್‌ ಬಾನು, ಫಾತಿಮಾ, ನಾಜೀಮಾ ಬಾನು, ದಿಲ್‌ಶದ್‌ಬಿ ನಿರ್ದೇಶಕರಾಗಿದ್ದಾರೆ.

ಸದ್ಯ ಸಣ್ಣ ಕೊಠಡಿಯೊಂದರಲ್ಲಿ ನಾಮಫಲಕ ಕೂಡ ಇಲ್ಲದೇ ಕಾರ್ಯನಿರ್ವಹಿಸುತ್ತಿದೆ. ಸಿಇಒ ಒಬ್ಬರೇ ಅಧಿಕೃತ ಹುದ್ದೆಯಲ್ಲಿದ್ದು, ಬೇರೆ ಸಿಬ್ಬಂದಿ ಇಲ್ಲದೇ ನಡೆಯುತ್ತಿದೆ.

ಹೇಳಿಕೆಗಳು

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡದೇ ಕಟ್ಟಿಹಾಕುವುದು ನಿಲ್ಲಬೇಕು ಎಂಬ ಕಾರಣಕ್ಕೆ ಮಹಿಳಾ ಬ್ಯಾಂಕ್‌ ಆರಂಭಿಸಲಾಗಿದೆ.

ಜಬೀನಾ ಖಾನಂ, ಅಧ್ಯಕ್ಷೆ, ಮೆಹನತ್‌ ಬ್ಯಾಂಕ್‌

***

ಮಹಿಳೆಯರನ್ನು ಸಬಲಗೊಳಿಸಲು ಬ್ಯಾಂಕ್‌ ಆರಂಭಗೊಂಡಿದೆ. ಈಗ ಅಂಬೆಗಾಲಿಡುತ್ತಿದೆ. ಬ್ಯಾಂಕ್‌ ಇನ್ನಷ್ಟು ಬೆಳೆದು ಮಹಿಳೆಯರನ್ನು ಬೆಳೆಸುವ ಕನಸಿದೆ.

-ಹಸೀನಾ ಬಾನು, ಉಪಾಧ್ಯಕ್ಷೆ, ಮೆಹನತ್‌ ಬ್ಯಾಂಕ್‌

***

ಸೌಹಾರ್ದ ಸಹಕಾರಿ ಬೈಲಾದಂತೆ ನಮ್ಮ ಬ್ಯಾಂಕ್‌ ಕೆಲಸ ಮಾಡುತ್ತಿದೆ. ಮುಸ್ಲಿಂ ಮಹಿಳೆಯರು, ಅದರಲ್ಲೂ ದುಡಿವ ಮಹಿಳೆಯರು ಬ್ಯಾಂಕ್‌ ವ್ಯವಹಾರಕ್ಕೆ ತೆರೆದುಕೊಳ್ಳುತ್ತಿದ್ದಾರೆ.

-ಸಬ್ರಿನ್‌ ತಾಜ್‌, ಸಿಇಒ, ಮೆಹನತ್‌ ಬ್ಯಾಂಕ್‌

***
ಬೇರೆ ಬ್ಯಾಂಕ್‌ಗಳಲ್ಲಿ ಹಲವು ದಾಖಲೆ ಕೇಳಿದರು. ದಾಖಲೆ ನೀಡಿದರೂ ಅಲೆದಾಟ ತಪ್ಪಲಿಲ್ಲ. ಇಲ್ಲಿ ಯಾವ ಅಲೆದಾಟವೂ ಇಲ್ಲದೇ ಸಾಲ ಪಡೆದು ಮನೆ ರಿಪೇರಿ ಮಾಡಿಸಿಕೊಂಡೆ.

-ನಾಹೆರಾ ಬಾನು, ಸಾಲ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.