ADVERTISEMENT

ಹಿಂದೂ ಮತ ವಿಭಜಿಸುವ ಕೆಲಸ ಮಾಡಲ್ಲ: ಶಾಸಕ ಬಸನಗೌಡ ‍ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 13:48 IST
Last Updated 17 ಸೆಪ್ಟೆಂಬರ್ 2025, 13:48 IST
   

ಸಂತೇಬೆನ್ನೂರು (ದಾವಣಗೆರೆ): ಹಿಂದೂ ಸಮಾಜ ಒಟ್ಟಾಗಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ನಿರ್ಮೂಲನೆ ಮಾಡುವುದು ಸುಲಭ. ಹಿಂದೂಗಳ ಮತಗಳನ್ನು ವಿಭಜಿಸುವ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಬಸನಗೌಡ ‍ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.

‘ಹಿಂದೂ ಸಮಾಜ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿಂದೂತ್ವದ ಆಧಾರದಲ್ಲಿ ನಡೆಯುವುದು ಸ್ಪಷ್ಟವಾಗಿದೆ. ಕಾರ್ಯತಂತ್ರದ ಕುರಿತು ಕೆ.ಎಸ್‌. ಈಶ್ವರಪ್ಪ ಜತೆಗೆ ಚರ್ಚೆ ನಡೆದಿದೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ಎಸೆಯುವ ಹಾಗೂ ಉಗುಳುವ ಕೃತ್ಯಗಳು ಅಲ್ಲಲ್ಲಿ ನಡೆದಿವೆ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಜೆಸಿಬಿ ಮಾದರಿ ಆಡಳಿತ ರಾಜ್ಯದಲ್ಲಿ ಬರಬೇಕಿದೆ. ಈ ಬಗ್ಗೆ ಹಿಂದೂತ್ವದ ಕಾರ್ಯಕರ್ತರು ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಿಂದೂ ಸಮಾಜದ ವಿರುದ್ಧ ನೀಡಿದ ಹೇಳಿಕೆಯನ್ನು ಗಮನಿಸಿದ್ದೇನೆ. ಇನ್ನು ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಮಾತ್ರವೇ ಶಾಮನೂರು ಕುಟುಂಬಕ್ಕೆ ಬರಲಿವೆ. ಹಿಂದೂಗಳ ಮತಗಳು ಹಿಂದುತ್ವದ ಪ್ರತಿಪಾದಕರಿಗೆ ಸಿಗಲಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಎಸ್‌ಟಿ ಮೀಸಲು: ಮೊಸಳೆ ಕಣ್ಣೀರು’

‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಕಾಂಗ್ರೆಸ್‌ ಮೊಸಳೆ ಕಣ್ಣೀರು ಸುರಿಸುತ್ತಿದೆ. ಮೀಸಲಾತಿ ಪ್ರಕ್ರಿಯೆ ಪಕ್ಷಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬುದು ಅರ್ಥವಾದ ಬಳಿಕ ಸಭೆಯನ್ನು ಏಕಾಏಕಿ ಮುಂದೂಡಿದೆ’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಬೀದರ್‌, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆ ಹಳೆಯದು. ಇದನ್ನು ನೆಪವಾಗಿಟ್ಟುಕೊಂಡು ರಾಜಕೀಯ ಮಾಡಲು ರಾಜ್ಯ ಸರ್ಕಾರ ಹವಣಿಸುತ್ತಿದೆ. ಇದಕ್ಕೆ ಜನರು ಛೀಮಾರಿ ಹಾಕಲಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ವಿರುದ್ಧ ರಾಜ್ಯದ ವಿವಿಧೆಡೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಳ್ಳು ದೂರು ನೀಡಿದವರ ವಿರುದ್ಧ ಪ್ರತಿದೂರು ದಾಖಲಿಸುವೆ. ಪೊಲೀಸರ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವೆ
ಬಸನಗೌಡ ಪಾಟೀಲ ಯತ್ನಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.