ADVERTISEMENT

ಬಸವಾಪಟ್ಟಣ | ಹೀರೇಕಾಯಿ ಬೆಳೆದು ಹಿಗ್ಗಿದ ಸೋದರರು

ಬಸವಾಪಟ್ಟಣ: ಒಂದು ಎಕರೆ ಭೂಮಿಯಲ್ಲಿ ಪ್ರಯೋಗ; ಉತ್ತಮ ಆದಾಯ

ಎನ್‌.ವಿ ರಮೇಶ್‌
Published 18 ಜೂನ್ 2025, 7:10 IST
Last Updated 18 ಜೂನ್ 2025, 7:10 IST
ಬಸವಾಪಟ್ಟಣದಲ್ಲಿ ರೈತ ಸೋದರರಾದ ಪಿ. ನ್ಯಾಮತ್ ಅಲಿ ಮತ್ತು ಪಿ.ಸಗೀರ್ ಅಲಿ ಬೆಳೆದಿರುವ ಹೀರೇಕಾಯಿ ಬೆಳೆ
ಬಸವಾಪಟ್ಟಣದಲ್ಲಿ ರೈತ ಸೋದರರಾದ ಪಿ. ನ್ಯಾಮತ್ ಅಲಿ ಮತ್ತು ಪಿ.ಸಗೀರ್ ಅಲಿ ಬೆಳೆದಿರುವ ಹೀರೇಕಾಯಿ ಬೆಳೆ   

ಬಸವಾಪಟ್ಟಣ: ರೈತ ಸಹೋದರರಾದ ನ್ಯಾಮತ್‌ ಅಲಿ ಮತ್ತು ಸಗೀರ್‌ ಅಲಿ ಇಲ್ಲಿನ ಕೋಟೆ ಪ್ರದೇಶದ ಒಂದು ಎಕರೆ ಭೂಮಿಯಲ್ಲಿ ಹೀರೆಕಾಯಿ ಬೆಳೆದು ಯಶಸ್ಸು ಕಂಡಿದ್ದಾರೆ.

ಇರುವ ಒಂದು ಎಕರೆ ಜಮೀನಿನಲ್ಲಿ ಸಹೋದರರು ಈ ಬಾರಿ ಹೀರೆಕಾಯಿ ಬೆಳೆದು ಉತ್ತಮ ಲಾಭ ಪಡೆಯುತ್ತಿದ್ದಾರೆ. ಪ್ರತಿ ಎರಡು ದಿನಕ್ಕೆ ಒಮ್ಮೆ ಒಂದು ಟನ್‌ (10 ಕ್ವಿಂಟಲ್‌) ಕಾಯಿಗಳನ್ನು ಕೊಯಿಲು ಮಾಡಿ, ದಾವಣಗೆರೆ, ಹರಿಹರ, ಹೊನ್ನಾಳಿ ಮಾರುಕಟ್ಟೆಗಳಿಗೆ ಸಗಟು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ಗೆ ₹ 3,000ದಂತೆ ದರ ದೊರೆಯುತ್ತಿದೆ.

‘ಈಗಾಗಲೇ ತಿಂಗಳಿಗೆ 15 ಟನ್‌ ಕಟಾವು ಮಾಡಿದ್ದು, ಉತ್ತಮ ಆದಾಯ ಪಡೆಯುತ್ತಿದ್ದೇವೆ. ಈ ಬೆಳೆಗೆ ₹ 30,000 ಬಂಡವಾಳ ಹೂಡಿದ್ದು, ಕೊಯಿಲಿನ ಕೊನೆಯವರೆಗೆ 30 ಟನ್‌ ಇಳುವರಿ ಹಾಗೂ ₹ 2 ಲಕ್ಷ ಆದಾಯ ಬರುವ ಸಾಧ್ಯತೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಒಂದು ಎಕರೆ ಹೊಲವನ್ನು ಹಸನು ಮಾಡಿ 2025ರ ಏಪ್ರಿಲ್‌ ಕೊನೆ ವಾರದಲ್ಲಿ ಪ್ರತಿ ಬಳ್ಳಿಗೆ ಮೂರು ಅಡಿ ಮತ್ತು ಪ್ರತಿ ಸಾಲಿಗೆ ಐದು ಅಡಿ ಅಂತರದಲ್ಲಿ ವಿವಿಧ ತಳಿಯ 900 ಗ್ರಾಂ ಹೀರೆಕಾಯಿ ಬೀಜವನ್ನು ಬಿತ್ತನೆ ಮಾಡಿದೆವು. 10 ದಿನಗಳ ನಂತರ ಪ್ರತಿ ಗುಣಿಗೆ ರಾಸಾಯನಿಕ ಗೊಬ್ಬರವನ್ನು ಹಾಕಿದೆವು. ನಂತರ ಪ್ರತಿ 10 ದಿನಗಳ ಅಂತರದಲ್ಲಿ ಗೊಬ್ಬರ  ಬಳಸಿದ್ದೇವೆ. ಹನಿ ನೀರಾವರಿಯ ಮೂಲಕ ಫಸಲಿಗೆ ನೀರು ಹಾಯಿಸಿದ್ದು, ಈವರೆಗೆ ಐದು ಬಾರಿ ಕೀಟ ಮತ್ತು ರೋಗ ನಾಶಕವನ್ನು ಸಿಂಪಡಿಸಿದ್ದೇವೆ. ಬಿತ್ತನೆ ಮಾಡಿ 40 ದಿನಗಳ ನಂತರ ಕಾಯಿಗಳು ಬಲಿತು ಕೊಯಿಲಿಗೆ ಬಂದವು’ ಎಂದು ನ್ಯಾಮತ್‌ ಅಲಿ ಮಾಹಿತಿ ನೀಡಿದರು.

‘ಹೀರೆ ಬಳ್ಳಿಗಳನ್ನು ನಿಲ್ಲಿಸಲು ಅವುಗಳ ಪಕ್ಕದಲ್ಲಿ ಐದು ಅಡಿ ಎತ್ತರದ ಮರದ ಗೂಟ ನೆಟ್ಟು ಆಸರೆ ನೀಡಬೇಕು. ಬಳ್ಳಿಗಳ ಕೆಳಗಿರುವ ಕಳೆ ತೆಗೆಯುವುದು ಬಹುಮುಖ್ಯ. ಮಳೆ ಬಂದಲ್ಲಿ ನೀರು ಹಾಯಿಸುವ ತೊಂದರೆ ಇರುವುದಿಲ್ಲ. ಬೇಸಿಗೆಯಲ್ಲಿ ಪ್ರತಿ ಬಳ್ಳಿಯ ಬುಡಕ್ಕೆ ತಲುಪುವಂತೆ ನೀರು ಹಾಯಿಸಬೇಕು. ಕೊಯಿಲಿನ ಕೊನೆಗೆ ಹೀರೆ ಬಳ್ಳಿಯ ಎಲೆಗಳು ಮತ್ತು ಬಳ್ಳಿಯ ತ್ಯಾಜ್ಯಗಳು ಮುಂದಿನ ಬೆಳೆಗೆ ಉತ್ತಮ ಗೊಬ್ಬರವಾಗುತ್ತದೆ. ಈ ತರಕಾರಿಯನ್ನು ರೈತರು ಅಂತರ ಬೆಳೆಯಾಗಿಯೂ ಬೆಳೆಯಬಹುದು’ ಎಂದು ತಾಲ್ಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸೌರಭ್‌ ತಿಳಿಸಿದ್ದಾರೆ.

ಬಸವಾಪಟ್ಟಣದಲ್ಲಿ ರೈತ ಪಿ. ನ್ಯಾಮತ್ ಅಲಿ ಮಂಗಳವಾರ ಹೀರೇಕಾಯಿ ಗಳನ್ನು ಮಾರುಕಟ್ಟೆಗೆ ಸಾಗಿಸಲು ಸಿದ್ಧಗೊಳಿಸುತ್ತಿರುವುದು
ಬಸವಾಪಟ್ಟಣದಲ್ಲಿ ರೈತ ಸೋದರರಾದ ಪಿ. ನ್ಯಾಮತ್ ಅಲಿ ಮತ್ತು ಪಿ.ಸಗೀರ್ ಅಲಿ ಬೆಳೆದಿರುವ ಹೀರೇಕಾಯಿಗಳೊಂದಿಗೆ ಪಕ್ಕದ ಹೊಲಗಳ ರೈತರು
‘ಕೊಯಿಲು ಆರಂಭವಾದ ನಂತರ ಸತತವಾಗಿ ಎರಡು ತಿಂಗಳು ಗುಣಮಟ್ಟದ ಕಾಯಿಗಳು ದೊರೆಯುತ್ತವೆ. ಗಾತ್ರದಲ್ಲಿ ಒಂದೂವರೆ ಅಡಿಯಿಂದ ಎರಡು ಅಡಿ ಉದ್ದದವರೆಗೆ ಇದ್ದು ಮಾರಾಟದ ಸಮಸ್ಯೆ ಇಲ್ಲ
ನ್ಯಾಮತ್‌ ಅಲಿ ಸಗೀರ್‌ಅಲಿ ರೈತ ಸಹೋದರರು 
ಉತ್ತಮ ಪೋಷಕಾಂಶವಿರುವ ಹೀರೆಕಾಯಿಯನ್ನು ವರ್ಷವಿಡೀ ಬೆಳೆಯಬಹುದು. ಇದಕ್ಕೆ ಮರಳು ಮಿಶ್ರಿತ ಜೇಡಿಮಣ್ಣು 25ರಿಂದ 30 ಸೆಲ್ಸಿಯಸ್‌ ಉಷ್ಣತೆ ಅವಶ್ಯ
ಸೌರಭ್‌ ತೋಟಗಾರಿಕಾ ಸಹಾಯಕ ನಿರ್ದೇಶಕ

ಅಡುಗೆಯಲ್ಲಿ ಹೀರೆಕಾಯಿ ಬಳಕೆ ಪೌಷ್ಟಿಕಾಂಶಯುಕ್ತ ಹೀರೆಕಾಯಿ ನಿತ್ಯದ ಅಡುಗೆಯಲ್ಲಿ ಬಳಸಲಾಗುತ್ತದೆ. ಎಣ್ಣೆಗಾಯಿ ಪಲ್ಯ ಹೋಳು ಪಲ್ಯ ಹೆಸರುಬೇಳೆ ಹೀರೇಕಾಯಿ ದಾಲ್‌ ಹೀರೆಕಾಯಿ ಬೋಂಡಾ ಪಲಾವ್ ತರಕಾರಿ ಸಾಂಬಾರ್‌ನಲ್ಲಿ ಇದನ್ನು ಬಳಸಲಾಗುತ್ತದೆ. ಹೀರೇಕಾಯಿ ಸಿಪ್ಪೆ ಸಹ ಪೌಷ್ಟಿಕಾಂಶ ಗುಣ ಹೊಂದಿದ್ದು ಬಹುತೇಕರು ತಿರುಳನ್ನು ಬಿಸಾಡದೆ ಚಟ್ನಿ ತಯಾರಿಸಿ ಸವಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.