ADVERTISEMENT

ಬಸವಾಪಟ್ಟಣ | ರಸ್ತೆಪಕ್ಕದಲ್ಲಿ ಕಸ; ಗ್ರಾಮ ಪಂಚಾಯಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:15 IST
Last Updated 20 ಅಕ್ಟೋಬರ್ 2025, 6:15 IST
ರಸ್ತೆಪಕ್ಕದಲ್ಲೇ ಎಸೆದಿರುವ ಕಸ
ರಸ್ತೆಪಕ್ಕದಲ್ಲೇ ಎಸೆದಿರುವ ಕಸ   

ಬಸವಾಪಟ್ಟಣ: ಇಲ್ಲಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಗ್ರಾಮಸ್ಥರು ತಂದು ಸುರಿಯುತ್ತಿರುವ ಭಾರಿ ಪ್ರಮಾಣದ ಕಸದಿಂದ ಉಂಟಾಗುತ್ತಿರುವ ಸಮಸ್ಯೆಯ ವಿರುದ್ಧ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಗ್ರಾಮದ ಕಸ ಸಂಗ್ರಹಣೆಗೆ ವಾಹನ ಸೌಕರ್ಯ ನೀಡಿ, ಗ್ರಾಮವನ್ನು ಸ್ವಚ್ಛವಾಗಿಡುವ ಯೋಜನೆಗಾಗಿ ಪ್ರತಿ ಮನೆಗೆ ಶುಲ್ಕವನ್ನು ನಿಗದಿ ಪಡಿಸಲಾಗಿತ್ತು. ಆದರೆ, ಇಲ್ಲಿಯ ಜನ ಇದಕ್ಕೆ ಸಹಕಾರ ನೀಡದೆ ಕಸವನ್ನು ರಸ್ತೆ ಬದಿಗೆ ತಂದು ಸುರಿಯುತ್ತಿದ್ದಾರೆ. ಇದರಿಂದ ಗ್ರಾಮದ ಸ್ವಚ್ಛತೆ ಸಂಪೂರ್ಣ ಮಾಯವಾಗಿದೆ.

ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿ ಗ್ರಾಮದಲ್ಲಿ ರೋಗ ರುಜಿನಗಳು ಹರಡುವಂತಾಗಿದೆ. ಅನೇಕ ಬಾರಿ ಜೆ.ಸಿ.ಬಿ ಯಂತ್ರದಿಂದ ಕಸವನ್ನು ನಾವು ತೆರವುಗೊಳಿಸಿ, ಇನ್ನು ಮುಂದೆ ಇಲ್ಲಿ ಕಸ ಹಾಕಬಾರದು ಎಂದು ಸೂಚನೆ ನೀಡಿದ್ದರೂ ಜನ ಇದಕ್ಕೆ ಕಿವಿಗೊಡುತ್ತಿಲ್ಲ. ಗ್ರಾಮಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್‌. ಹಾಲೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ. ಆದರೆ, ಕಸದ ವಿಷಯದಲ್ಲಿ ಇಲ್ಲಿ ಗ್ರಾಮಸ್ಥರಿಂದ ಯಾವ ರೀತಿಯ ಸಹಕಾರ ಸಿಗುತ್ತಿಲ್ಲ. ಜನ ನಾಗರಿಕ ಪ್ರಜ್ಞೆ ಬೆಳೆಸಿಕೊಂಡು ಕಸವನ್ನು ತಿಪ್ಪೆಗಳಿಗೆ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸರ್ಕಾರದಿಂದ ಅನುದಾನವಿಲ್ಲದೇ ಕಸದ ವಾಹನ ನಿರ್ವಹಣೆ ಅಸಾಧ್ಯವಾಗಿದ್ದು, ಜನ ಗ್ರಾಮ ಪಂಚಾಯಿತಿಯ ಮನವಿಗೆ ಸ್ಪಂದಿಸಿ ಕಸ ವಿಲೇವಾರಿಗೆ ನಿಗದಿಪಡಿಸಿದ ಶುಲ್ಕ ನೀಡಬೇಕು. ಇಲ್ಲವೇ ತಮ್ಮ ಮನೆಗಳ ಕಸವನ್ನು ತಾವೇ ದೂರ ಹಾಕುವ ಪ್ರಜ್ಞೆ ಬೆಳೆಸಿಕೊಳ್ಳಬೇಕಲು ಎಂದು ಉಪಾಧ್ಯಕ್ಷೆ ಕುಸುಮ ಬಸವರಾಜಪ್ಪ, ಸದಸ್ಯರಾದ, ಬೆನಕಮ್ಮ, ವಾಹಿದಾಬಾನು, ಜರೀನಾಬಾನು, ಅರ್ಷಿದಾಬಾನು, ಅತಾವುಲ್ಲಾ, ಎಂ.ಎಸ್‌. ರಮೇಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.