ADVERTISEMENT

ಸೂಳೆಕೆರೆ ಹೂಳು ತೆರವು: ರೈತರಿಗೆ ತೇಜಸ್ವಿ ಪಟೇಲ್ ಕರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 6:56 IST
Last Updated 21 ಫೆಬ್ರುವರಿ 2024, 6:56 IST
ಬಸವಾಪಟ್ಟಣ ಸಮೀಪದ ಚಿರಡೋಣಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಕೆರೆ ಹಸ್ತಾಂತರದ ಫಲಕವನ್ನು ರೈತ ಮುಖಂಡ ತೇಜಸ್ವಿ ಪಟೇಲ್ ಮಂಗಳವಾರ ಅನಾವರಣಗೊಳಿಸಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಹಾಜರಿದ್ದರು
ಬಸವಾಪಟ್ಟಣ ಸಮೀಪದ ಚಿರಡೋಣಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಕೆರೆ ಹಸ್ತಾಂತರದ ಫಲಕವನ್ನು ರೈತ ಮುಖಂಡ ತೇಜಸ್ವಿ ಪಟೇಲ್ ಮಂಗಳವಾರ ಅನಾವರಣಗೊಳಿಸಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಹಾಜರಿದ್ದರು   

ಬಸವಾಪಟ್ಟಣ: ಈ ವರ್ಷ ಮಳೆಯ ಅಭಾವದಿಂದ ಸೂಳೆಕೆರೆ ಒಣಗುತ್ತಿದ್ದು, ಸಂಗ್ರಹವಾಗಿರುವ ಭಾರಿ ಪ್ರಮಾಣದ ಹೂಳನ್ನು ಇಲ್ಲಿನ ಅಚ್ಚುಕಟ್ಟು ಪ್ರದೇಶದ ರೈತರು ಒಂದಾಗಿ ತೆರವುಗೊಳಿಸಬೇಕು ಎಂದು ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್‌ ಅಭಿಪ್ರಾಯಪಟ್ಟರು. 

ಸಮೀಪದ ಚಿರಡೋಣಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಿದ ಕೆರೆಯ ಹಸ್ತಾಂತರದ ಫಲಕವನ್ನು ಮಂಗಳವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

ನಮ್ಮೂರು ನಮ್ಮಕೆರೆ ಯೋಜನೆಯಲ್ಲಿ ಚಿರಡೋಣಿ ಕೆರೆ ದತ್ತು ಪಡೆದು ₹5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಜನ, ಜಾನುವಾರುಗಳಿಗೆ ನೆರವು ಕಲ್ಪಿಸಲಾಗಿದೆ. ಅದರಂತೆ ಸದ್ಯದಲ್ಲಿಯೇ ಸಂಪೂರ್ಣ ಒಣಗಲಿರುವ ಸೂಳೆಕೆರೆ ಹೂಳು ತೆಗೆದರೆ ಸುಮಾರು 2 ಟಿಎಂಸಿ ಅಡಿವರೆಗೂ ನೀರು ಸಂಗ್ರಹವಾಗಲಿದೆ. 6,000 ಎಕರೆ ಪ್ರದೇಶಕ್ಕೆ ನೀರುಣಿಸುವ ಸೂಳೆಕೆರೆ 22 ಗ್ರಾಮಗಳ ನೂರಾರು ಮೀನುಗಾರರಿಗೂ ನಿತ್ಯ ಉದ್ಯೋಗ ಒದಗಿಸಿದೆ. ಇಂತಹ ಕೆರೆಯನ್ನು ರೈತರೇ ಸ್ವ ಇಚ್ಛೆಯಿಂದ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು. 

ADVERTISEMENT

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಸ್ವಾವಲಂಬನೆ, ಶಿಸ್ತು, ಸಾಮಾಜಿಕ ಐಕ್ಯತೆಯನ್ನು ಬೆಳೆಸಿದೆ. ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತಾ ಸುಖೀ ಕುಟುಂಬದ ಸ್ಥಾಪನೆಗೆ ನೆರವಾಗಿದೆ ಎಂದು ಹೇಳಿದರು.

ಯೋಜನೆಯ ಪ್ರದೇಶಿಕ ನಿರ್ದೇಶಕಿ.ಬಿ.ಗೀತಾ ಮಾತನಾಡಿ, ‘ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ಕೊಡುವ ಪ್ರಾಮುಖ್ಯತೆಯನ್ನು ಹೆಚ್ಚಾಗಿ ಪರಿಸರದ ಸೌಂದರ್ಯವನ್ನು ಅಭಿವೃದ್ಧಿಪಡಿಸಲು ನೀಡಿದರೆ ನಮ್ಮ ಪರಿಸರ ಸ್ವಚ್ಛ ಮತ್ತು ಆರೋಗ್ಯ ಪೂರ್ಣ ಕ್ಷೇತ್ರವಾಗಲು ಸಾಧ್ಯ’ ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಅಶೋಕ್‌ ಕಾರ್ಯಕ್ರಮ ಉದ್ಘಾಟಿಸಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್‌.ಬಿ.ಮಲ್ಲಿಕಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಶೇಖರಪ್ಪಗೌಡ, ಪಿಡಿಒ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಎಂ.ಎ.ಗೋಪಾಲರಾವ್‌, ವೀರಭದ್ರೇಶ್ವರ ದೇಗುಲ ಸಮಿತಿ ಆಧ್ಯಕ್ಷ ಕೆ.ಎಸ್‌.ಚಂದ್ರಶೇಖರ್‌, ಒಕ್ಕೂಟದ ಅಧ್ಯಕ್ಷರಾದ ಕೆ.ಜಿ.ಚಂದ್ರಣ್ಣ, ಕುಂದೂರಪ್ಪ, ಯೋಜನಾಧಿಕಾರಿ ನವೀನ್‌ ನಾಯಕ್‌ ಹಾಗೂ ಸ್ವಸಹಾಯ ಸಂಘದ ನೂರಾರು ಮಹಿಳೆಯರು ಭಾಗವಹಿಸಿದ್ದರು. ಶಂಭುಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.