ADVERTISEMENT

ಬಸವಾಪಟ್ಟಣ: ಸೂಳೆಕೆರೆಗೆ 20 ಲಕ್ಷ ಮೀನು ಮರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:01 IST
Last Updated 8 ಡಿಸೆಂಬರ್ 2025, 6:01 IST
ಬಸವಾಪಟ್ಟಣ ಸಮೀಪದ ಸೂಳೆಕೆರೆಗೆ ಶನಿವಾರ ಶಾಸಕ ಬಸವರಾಜು ಶಿವಗಂಗಾ ಹಾಗೂ ಇತರರು 20 ಲಕ್ಷ ಮೀನು ಮರಿಗಳನ್ನು ಬಿಟ್ಟರು
ಬಸವಾಪಟ್ಟಣ ಸಮೀಪದ ಸೂಳೆಕೆರೆಗೆ ಶನಿವಾರ ಶಾಸಕ ಬಸವರಾಜು ಶಿವಗಂಗಾ ಹಾಗೂ ಇತರರು 20 ಲಕ್ಷ ಮೀನು ಮರಿಗಳನ್ನು ಬಿಟ್ಟರು   

ಬಸವಾಪಟ್ಟಣ: ‘ಏಷ್ಯಾದ ಎರಡನೇ ದೊಡ್ಡ ಕೆರೆ ಎನಿಸಿದ ಸೂಳೆಕೆರೆಗೆ ಶನಿವಾರ 20 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 40 ಲಕ್ಷ ಮೀನಿನ ಮರಿಗಳನ್ನು ಬಿಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹೇಳಿದರು.

‘ಸುತ್ತಲಿನ 22 ಗ್ರಾಮಗಳ ಅಂದಾಜು 900 ಕುಟುಂಬಗಳು ಮೀನುಗಾರಿಕೆಗಾಗಿ ಈ ಕೆರೆಯನ್ನೇ ಅವಲಂಬಿಸಿವೆ. ಕಾಟ್ಲಾ, ರಹೂ, ಗೌರಿ, ಮುರುಗಲ್‌ ತಳಿಯ ಮೀನು ಮರಿಗಳನ್ನು ಬಿಡಲಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ಮತ್ತೆ 20 ಲಕ್ಷ ಮೀನು ಮರಿಗಳನ್ನು ಈ ಕೆರೆಗೆ ಬಿಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸಿಹಿನೀರು ಮೀನಿಗೆ ಸಾಕಷ್ಟು ಬೇಡಿಕೆ ಇದ್ದು, ಸೂಳೆಕೆರೆಯು ಈ ಮೀನುಗಳಿಗೆ ಪ್ರಸಿದ್ಧವಾಗಿದೆ. ವರ್ಷದಲ್ಲಿ ಜೂನ್‌, ಜುಲೈ ಬಿಟ್ಟು ಉಳಿದ ಹತ್ತು ತಿಂಗಳು ಇಲ್ಲಿ ಮೀನುಗಾರಿಕೆ ನಡೆಯುತ್ತದೆ. ಮೀನುಗಾರರಿಗೆ ಪ್ರತಿದಿನ ಸಾಕಷ್ಟು ಮೀನುಗಳು ದೊರೆಯಲಿ ಎಂಬ ಉದ್ದೇಶದಿಂದ ಪ್ರತಿವರ್ಷ ಹೆಚ್ಚು ಹೆಚ್ಚು ಮೀನು ಮರಿಗಳನ್ನು ಕೆರೆಗೆ ಬಿಡಲಾಗುವುದು’ ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಅಣ್ಣಪ್ಪಸ್ವಾಮಿ ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಬಿ.ಆರ್‌. ಪ್ರಾಜೆಕ್ಟ್‌ ಮೀನುಗಾರಿಕಾ ಉಪನಿರ್ದೇಶಕ ಪ್ರಸನ್ನಕುಮಾರ್‌, ತಾಲ್ಲೂಕು ಸಹಾಯಕ ನಿರ್ದೇಶಕಿ ದೀಪಶ್ರೀ, ಬೋಟಿಂಗ್‌ ವ್ಯವಸ್ಥಾಪಕ ಸೋಮಶೇಖರ್‌, ಮೀನುಗಾರರ ಸಂಘದ ಅಧ್ಯಕ್ಷೆ ಗೌರಮ್ಮ ಫಕೀರಪ್ಪ, ಉಪಾಧ್ಯಕ್ಷ ರಂಗಪ್ಪ, ಕಾರ್ಯದರ್ಶಿ ಪಿ.ಲಕ್ಷ್ಮಣ, ಸದಸ್ಯರಾದ ದಶರಥ, ನಾಗರಾಜ್‌ ಹಾಗೂ ಸುತ್ತಲಿನ ಗ್ರಾಮಗಳ ಮೀನುಗಾರರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.