ADVERTISEMENT

ಹರಿಹರ: ಗೊಂದಲದ ನಡುವೆ ಮೇರಿ ಜಾತ್ರೆಗೆ ತೆರೆ, ನಿಯಮ ಉಲ್ಲಂಘನೆ ಪ್ರಕರಣ

ಕೋವಿಡ್‌ ನಿಯಮ ಉಲ್ಲಂಘನೆ: ಸಾರ್ವಜನಿಕರ ಪ್ರವೇಶ ನಿಷೇಧಿಸಿದ ತಾಲ್ಲೂಕು ಆಡಳಿತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 11:24 IST
Last Updated 9 ಸೆಪ್ಟೆಂಬರ್ 2021, 11:24 IST
ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾ ಚರ್ಚ್‌ ಆವರಣದಲ್ಲಿ ಜಾತ್ರೆ ನಿಮಿತ್ತ ಬುಧವಾರ ದರ್ಶನಕ್ಕಾಗಿ ಸೇರಿದ್ದ ಜನಸ್ತೋಮ
ಹರಿಹರ ಆರೋಗ್ಯ ಮಾತೆಯ ಬೆಸಿಲಿಕಾ ಚರ್ಚ್‌ ಆವರಣದಲ್ಲಿ ಜಾತ್ರೆ ನಿಮಿತ್ತ ಬುಧವಾರ ದರ್ಶನಕ್ಕಾಗಿ ಸೇರಿದ್ದ ಜನಸ್ತೋಮ   

ಹರಿಹರ:ನಗರದ ಆರೋಗ್ಯ ಮಾತೆ ಬೆಸೆಲಿಕಾ ಚರ್ಚ್‌ನಲ್ಲಿ ಬುಧವಾರ ಆರೋಗ್ಯ ಮಾತೆ ಜಾತ್ರೆ ರದ್ದಾಗಿರುವ ಮಾಹಿತಿ ತಿಳಿಯದ ಕಾರಣ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದ ನೂರಾರು ಭಕ್ತರು ಪರದಾಡುವಂತಾಯಿತು.

ಪ್ರತಿ ವರ್ಷ ಸೆ.8ರಂದು ಆರೋಗ್ಯ ಮಾತೆ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತಿತ್ತು. ಈ ಬಾರಿ ಕೋವಿಡ್‍ ಕಾರಣ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮಾತೆಯ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈ ಮಾಹಿತಿ ತಿಳಿಯದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಲು ವಿವಿಧೆಡೆಯಿಂದ ಬಂದಿದ್ದರು.

ಚರ್ಚ್‌ ಆವರಣದಲ್ಲಿ ಬೆಳಿಗ್ಗೆಯಿಂದಲೇ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ಮತ್ತು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನೂರಾರು ಭಕ್ತರಲ್ಲಿ ಗೊಂದಲ ಮೂಡಿತ್ತು. ನಂತರ, ದೇವರ ದರ್ಶನಕ್ಕೆ ಅವಕಾಶವಿರುವ ಮಾಹಿತಿ ಪಡೆದು ಸಾಲಾಗಿ ನಿಂತು ದರ್ಶನ ಪಡೆದರು.

ADVERTISEMENT

ಕೆಲ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಕೇಶ ಮುಂಡನ ಹಾಗೂ ದೀಡ್ ನಮಸ್ಕಾರ ಹರಕೆ ತೀರಿಸಲು ಆರಂಭಿಸಿದರು. ಜನಸಂದಣಿ ಹೆಚ್ಚಾದ ಕಾರಣ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಧ್ಯಾಹ್ನದಿಂದ ಚರ್ಚ್‌ ಆವರಣಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿ, ಜನರನ್ನು ಚದುರಿಸಿದರು.

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ‘ಜಿಲ್ಲಾಡಳಿತ ಚರ್ಚ್‌ನ ಮುಖ್ಯಸ್ಥರ ಮನವಿ ಮೇರೆಗೆ 100ಜನಕ್ಕಿಂತ ಹೆಚ್ಚು ಜನ ಸೇರಿಸದಂತೆ ಹಾಗೂ ಕೋವಿಡ್‍ ನಿಯಮಗಳನ್ನು ಪಾಲಿಸುವ ಸೂಚನೆ ನೀಡಿ ಆದೇಶ ನೀಡಿತ್ತು. ಆದರೆ, ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಸಾವಿರಾರು ಜನ ಬಂದಿರುವುದು ಹಾಗೂ ಕೋವಿಡ್‍ ನಿಯಮಗಳನ್ನು ಪಾಲಿಸದಿರವುದು ಆತಂಕ ಮೂಡಿಸಿದೆ. ಸಂಘಟಕರು ಕೋವಿಡ್‍ ನಿಯಾಮವಳಿಗಳನ್ನು ಉಲ್ಲಂಘಿಸಿದ ಕಾರಣ ಮಧ್ಯಾಹ್ನದಿಂದ ಚರ್ಚ್‌ ಆವರಣದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಯಿತು. ಪ್ರಾರ್ಥನಾ ಮಂದಿರದೊಳಗಿನ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್‍ ಅಧಿಕಾರಿಗಳು ಚರ್ಚ್‌ನ ಸುತ್ತಲಿನ ಪ್ರದೇಶ ಹಾಗೂ ಪಿ.ಬಿ. ರಸ್ತೆಯಲ್ಲಿ ಅಂಗಡಿಗಳನ್ನು ಹಾಕದಂತೆ ಹಾಗೂ ಜನ ಸೇರದಂತೆ ಕ್ರಮ ಜರುಗಿಸಿದರು. ಕೋವಿಡ್‍ ನಿಯಮ ಉಲ್ಲಂಘಿಸಿ ನಡೆಸಿದ ಧಾರ್ಮಿಕ ಆಚರಣೆ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದು, ಜಿಲ್ಲಾಡಳಿತದ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲು:ಕೋವಿಡ್‌ ನಿಯಮ ಉಲ್ಲಂಘಿಸಿದ ಕಾರಣಆರೋಗ್ಯಮಾತೆ ಚರ್ಚ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾತ್ರೆಗೆ ಜಿಲ್ಲಾಡಳಿತ ಕೋವಿಡ್ ಮಾರ್ಗದರ್ಶಿ ಪಾಲನೆ ಮಾಡುವಂತೆ ಷರತ್ತುಬದ್ಧ ಪರವಾನಗಿ ನೀಡಿತ್ತು. ನಿಯಮಉಲ್ಲಂಘಿಸಿ‌ ಜಾತ್ರೆಗೆ 100ಕ್ಕೂ ಹೆಚ್ಚು ಸೇರಿದ್ದ ಕಾರಣಜಾತ್ರಾ ಸ್ಥಳಕ್ಕೆ ಭೇಟಿ ನೀಡಿದ್ಧ ನಗರಸಭೆ ಆಯುಕ್ತೆ ಎಸ್. ಲಕ್ಷ್ಮೀ ಅವರು ಚರ್ಚ್‌ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು.ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.