ADVERTISEMENT

ಧನವಂತರಿಗಿಂತ ಹೃದಯವಂತರಾಗಿ: ಸ್ವಾಮೀಜಿ

ಬಸವಕೇಂದ್ರದಲ್ಲಿ ಶರಣ ಸಂಗಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:46 IST
Last Updated 4 ಡಿಸೆಂಬರ್ 2021, 3:46 IST
ಶರಣ ಸಂಗಮದ ಅಂಗವಾಗಿ ದಾವಣಗೆರೆಯ ಬಸವಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಷಣ್ಮುಖಪ್ಪ ಸಾಲಿ ಉಪನ್ಯಾಸ ನೀಡಿದರು. ಬಿ.ವಾಮದೇವಪ್ಪ, ಬಸವಪ್ರಭು ಸ್ವಾಮೀಜಿ ಇದ್ದರು.
ಶರಣ ಸಂಗಮದ ಅಂಗವಾಗಿ ದಾವಣಗೆರೆಯ ಬಸವಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಷಣ್ಮುಖಪ್ಪ ಸಾಲಿ ಉಪನ್ಯಾಸ ನೀಡಿದರು. ಬಿ.ವಾಮದೇವಪ್ಪ, ಬಸವಪ್ರಭು ಸ್ವಾಮೀಜಿ ಇದ್ದರು.   

ದಾವಣಗೆರೆ: ಜಗತ್ತಿನಲ್ಲಿ ಧನವಂತರಾಗುವುದಕ್ಕಿಂತ ಹೃದಯವಂತರಾಗುವುದು ಮುಖ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಶರಣ ಸಂಗಮದ ಅಂಗವಾಗಿ ಇಲ್ಲಿನ ಬಸವಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ‘ಅಂತಃಕರಣ ಮತ್ತು ಅರಳುವಿಕೆ’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಇಂದು ಕೋಟಿ, ಕೋಟಿ ವ್ಯಕ್ತಿಗಳು ಸಿಗುತ್ತಾರೆ. ಆದರೆ ಹೃದಯವಂತರು ಸಿಗುವುದು ವಿರಳಾತಿವಿರಳ. ನೂರಾರು ಕೋಟಿ ಹಣ ಗಳಿಸಿ ಧನವಂತರಾಗುತ್ತೇವೆ. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿದಾಗ ಮಾತ್ರ ನಮ್ಮ ಶ್ರೀಮಂತಿಕೆಗೆ ಬೆಲೆ ಬರುತ್ತದೆ’ ಎಂದು ಹೇಳಿದರು.

ADVERTISEMENT

‘ಶ್ರೀಮಂತರಾಗಿ ಮೆರೆದವರು ಇತಿಹಾಸವಾಗಿಲ್ಲ. ಗುಣ, ಸದ್ಗುಣಗಳ ಶ್ರೀಮಂತಿಕೆ ಪಡೆದವರು ಇತಿಹಾಸವಾಗಿ
ದ್ದಾರೆ. ಬುದ್ಧ, ಬಸವಣ್ಣ, ಮಹಾವೀರ, ಏಸು, ಪೈಗಂಬರ್, ಗಾಂಧೀಜಿ ಮೊದಲಾದ ದಾರ್ಶನಿಕರು ಸದ್ಗುಣಗಳ ಸಾಗರವಾಗಿ ವಿಶ್ವಮಾನವರಾದರು’ ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ‘‌ರಾಜ್ಯದಲ್ಲಿ ಮಠ, ಮಂದಿರಗಳು ಇಲ್ಲದಿದ್ದರೆ ಸಂಸ್ಕೃತಿ, ಸಂಸ್ಕಾರಗಳು ಬೇರೆಯಾಗುತ್ತಿದ್ದವು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಠ–ಮಂದಿರಗಳು ನಮ್ಮ ರಾಜ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ. ಕಸಾಪ ಹಾಗೂ ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಕನ್ನಡ ಕಟ್ಟುವ ವಿಷಯದಲ್ಲಿ ಕನ್ನಡಿಗರು ಎಂದಿಗೂ ಅಭಿಮಾನ ಶೂನ್ಯರಾಗುವುದಿಲ್ಲ. ಭಾಷೆಗೆ, ನೆಲ, ಜಲಕ್ಕೆ ಕೆಡುಕಾದಾಗ ಸಿಡಿದೇಳುತ್ತಾರೆ’ ಎಂದರು.

ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಷಣ್ಮುಖಪ್ಪ ಸಾಲಿ ಉಪನ್ಯಾಸ ನೀಡಿದರು. ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಮಖಂಡಿ ಬಸವಕೇಂದ್ರದ ಶಂಕರಣ್ಣ ಕಲ್ಯಾಣಿ ಇದ್ದರು. ಬಸವಕಲಾ ಲೋಕದ ರುಕ್ಮಾಬಾಯಿ ವಚನ ಸಂಗೀತ ನಡೆಸಿಕೊಟ್ಟರು. ಎನ್.ಜೆ. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.