ADVERTISEMENT

ಬೆಳ್ಳಕ್ಕಿ ಕಾಶಿ  ಕೊಮಾರನಹಳ್ಳಿ ಹೆಳವನಕಟ್ಟೆ ಕೆರೆ 

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 12:50 IST
Last Updated 23 ಫೆಬ್ರುವರಿ 2019, 12:50 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಕೆರೆ ಬಯಲಿನಲ್ಲಿ ಸಂಜೆ ವೇಳೆ ಹಾರಾಡುತ್ತಿರುವ ಬೆಳಕ್ಕಿ ಹಿಂಡು
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಕೆರೆ ಬಯಲಿನಲ್ಲಿ ಸಂಜೆ ವೇಳೆ ಹಾರಾಡುತ್ತಿರುವ ಬೆಳಕ್ಕಿ ಹಿಂಡು   

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಕೆರೆ ಕೊಕ್ಕರೆ (ಬೆಳ್ಳಕ್ಕಿ) ಹಿಂಡಿನಿಂದ ಅಕ್ಷರಶಃ ಪಕ್ಷಿಧಾಮವಾಗಿ ಪಕ್ಷಿಪ್ರಿಯರ ಮನಸೂರೆಗೊಳ್ಳುತ್ತಿದೆ.

ನಾಲ್ಕಾರು ವರ್ಷದಿಂದ ಮಳೆ ಕೊರತೆಯಿಂದಾಗಿ ಸಂಪೂರ್ಣವಾಗಿ ಬತ್ತಿ ನೀರಿಲ್ಲದೆ ಒಣಗಿಹೋಗಿತ್ತು. ಜಾಲಿಗಿಡ, ಲಂಟಾನ ಬೆಳೆದಿದ್ದವು.

ಹೆಳವ ಹಾಲಪ್ಪ ಕಟ್ಟಿಸಿದ 100 ಎಕರೆ ಕೆರೆ ಈಗ ಒತ್ತುವರಿಯಾಗಿ 80 ಎಕರೆ ಪ್ರದೇಶಕ್ಕೆ ಕಳೆದ ವರ್ಷ ಭದ್ರಾನಾಲೆಯಿಂದ ನೀರು ಹರಿಸಿದ ಕಾರಣ, ಅಲ್ಲಿ ಬೆಳೆದ ಜಾಲಿಮರ ಮೂರ್ನಾಲ್ಕು ಬಗೆಯ ಪಕ್ಷಿಗಳಿಗೆ ಆಶ್ರಯ ನೀಡಿವೆ.

ADVERTISEMENT

ಭತ್ತದ ನಾಟಿ ವೇಳೆ ಭತ್ತದ ಗದ್ದೆಗಳಲ್ಲಿ ಹುಳು ಹೆಕ್ಕುವ ಬೆಳ್ಳಕ್ಕಿ ಹಿಂಡು ಹಿಂಡಾಗಿ ಸಂಜೆಯಾಗುತ್ತಿದ್ದಂತೆ ಕೆರೆ ಬಯಲಿಗೆ ಸಾಲು ಸಾಲಾಗಿ ಕಿಚ ಕಿಚ, ಕೊರ ಕೊರ, ಕಾಚ್ ಎಂದು ಶಬ್ದ ಮಾಡುತ್ತಾ ಹಾರಿ ಬರುವ ಬರುವ ದೃಶ್ಯ ಸುಂದರ. ಬೆಳಗಿನ ವೇಳೆ ಸಾಲಾಗಿ ಹೋಗುವ ದೃಶ್ಯ ನಯನ ಮನೋಹರವಾಗಿದೆ.

ಹಕ್ಕಿಗಳ ಕಲರವ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕಾಣಸಿಗುತ್ತದೆ. ಉಳಿದಂತೆ ಹಗಲು ಒಂದೂ ಹಕ್ಕಿ ಕಾಣಸಿಗುವುದಿಲ್ಲ.

‘ಒಂದು ತಿಂಗಳಿಂದ ಸುತ್ತಮುತ್ತಲ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆ ಪಕ್ಷಿಗಳು ಇಲ್ಲಿಗೆ ಬರುತ್ತಿದ್ದು, ಜನರನ್ನು ಆಕರ್ಷಿಸುತ್ತಿವೆ’ ಎನ್ನುತ್ತಾರೆ ರಂಗನಾಥ ದೇವಾಲಯದ ಮುಜರಾಯಿ ಶಾನುಭೋಗ ಎಂ.ಡಿ. ಧರ್ಮರಾವ್.

‘ಸರ್ಕಾರ ಈಗಾಗಲೆ ಪುರಾಣ ಪ್ರಸಿದ್ಧ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇಬಾಲಯದಲ್ಲಿ ಪ್ರವಾಸಿಗಳಿಗಾಗಿ ಯಾತ್ರಿನಿವಾಸ, ಪ್ರವಾಸಿ ಬಂಗ್ಲೆ ಕಟ್ಟಡ ನಿರ್ಮಾಣ ಮಾಡಿದೆ. ಅದೇ ಮಾದರಿಯಲ್ಲಿ ಹೆಳವ ಕಟ್ಟಿಸಿದ ಕೆರೆ ಅಭಿವೃದ್ಧಿ ಮಾಡಿ ಭದ್ರಾನಾಲೆಯಿಂದ ನೀರು ಹರಿಸಿ ಕೆರೆ ಭರ್ತಿ ಮಾಡಬೇಕು. ವೀಕ್ಷಣಾಗೋಪುರ, ಪಕ್ಷಿಧಾಮ, ದೋಣಿ ವಿಹಾರ ಕೇಂದ್ರ ಮಾಡಬೇಕು’ ಎನ್ನುತ್ತಾರ ಇಲ್ಲಿನ ಪರಿಸರ ಪ್ರೇಮಿ ಜ್ಯೋತಿ ನಾಗಭೂಷಣ.

‘ಪರಿಸರ ರಕ್ಷಣೆ, ಸಂತಾನೋತ್ಪತ್ತಿ ಮಾಡುವ ಪಕ್ಷಿಗಳನ್ಮನ ಬೇಟೆಗಾರರಿಂದ ರಕ್ಷಿಸಲು ಸರ್ಕಾರ ಸೂಕ್ತ ಭದ್ರತೆ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಪರಿಸರ ಪ್ರೇಮಿ ಮಿಟ್ಲಕಟ್ಟೆ ವೀರಾಚಾರ್.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಬಿ.ಪಿ. ಹರೀಶ್ ಅವರು ನೀಡಿದ ಸಹಾಯಧನದಿಂದ ನಡುಗಡ್ಡೆ ನಿರ್ಮಾಣವಾಗಿದ್ದರೂ ಪಕ್ಷಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿತ್ತು. ಯಾವ ಸರ್ಕಾರಗಳು ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿಲ್ಲ.

ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸರ್ಕಾರ ಸೂಕ್ತ ಯೋಜನೆ ರೂಪಿಸಿ ಕ್ಷೇತ್ರಾಭಿವೃದ್ಧಿ ಮಾಡಿದರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮನ ಸುಕ್ಷೇತ್ರ ಪಕ್ಷಿಧಾಮ, ಪ್ರವಾಸಿ ತಾಣವಾಗಿ ಅಭಿವೃದ್ಧಿಹೊಂದಿ ಪ್ರವಾಸಿಗರ ಮನಸೆಳೆಯುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.