ADVERTISEMENT

ಭರ್ತಿಯಾದ ಭದ್ರೆಯ ಒಡಲು.. ಸಂಭ್ರಮದ ಕಡಲು...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:15 IST
Last Updated 1 ಆಗಸ್ಟ್ 2024, 7:15 IST
<div class="paragraphs"><p>ಭದ್ರಾ ಜಲಾಶಯದಿಂದ ನೀರು ಬಿಡುತ್ತಿರುವ ವಿಹಂಗಮ ನೋಟ&nbsp; &nbsp; </p></div>

ಭದ್ರಾ ಜಲಾಶಯದಿಂದ ನೀರು ಬಿಡುತ್ತಿರುವ ವಿಹಂಗಮ ನೋಟ   

   

ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್‌ 

ಪ್ರಸಕ್ತ ಮುಂಗಾರಿನಲ್ಲಿ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಧ್ಯ ಕರ್ನಾಟಕದ ‘ಜೀವನಾಡಿ’, ‘ರೈತರ ಆಶಾಕಿರಣ’ ಭದ್ರಾ ಜಲಾಶಯ ಆಷಾಡ ಮಾಸದಲ್ಲೇ ಗರಿಷ್ಠ ಮಟ್ಟ ತಲುಪಿರುವುದು ಕಳೆದ ವರ್ಷ ಬರದ ಭೀಕರತೆಯನ್ನು ದಾಟಿಬಂದಿರುವ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ADVERTISEMENT

ಶಿವಮೊಗ್ಗ– ದಾವಣಗೆರೆ, ಚಿತ್ರಗುರ್ಗ ಜಿಲ್ಲೆಯ ಜನರ ಕುಡಿಯುವ ನೀರಿಗೆ ಆಸರೆಯಾಗಿರುವ ಪ್ರಮುಖ ಜಲಾಶಯ ಭದ್ರಾ. ಅಂತೆಯೇ ಪ್ರತಿನಿತ್ಯ ರೈತರು ಮಲೆನಾಡಿನ ಕಳಸ, ಹೊರನಾಡು, ಬಾಳೆಹೊನ್ನೂರು, ನರಸಿಂಹರಾಜಪುರ ಭಾಗದಲ್ಲಿ ಎಷ್ಟು  ಮಳೆ ಸುರಿಯಿತು? ಜಲಾಶಯಕ್ಕೆ ಎಷ್ಟು ಅಡಿ ನೀರು ಬಂತು? ಎಂಬ ವಿಷಯವನ್ನೇ ಪ್ರಧಾನವಾಗಿ ಹೋಟೆಲ್‌, ಅಂಗಡಿ ಮುಂಗಟ್ಟು, ಹರಟೆಕಟ್ಟೆ, ಸಭೆ– ಸಮಾರಂಭಗಳಲ್ಲಿ ಮಾತನಾಡಿಕೊಳ್ಳುವುದು ಸಾಮಾನ್ಯ.

ಬೆಳಗಾದರೆ ಇಲ್ಲಿನ ಜನರು ಪತ್ರಿಕೆಗಳಲ್ಲಿ ಭದ್ರಾ ಜಲಾಶಯದ ಒಳಹರಿವು, ಹೊರಹರಿವು ಎಷ್ಟು ಎಂಬುದರತ್ತ ಕಣ್ಣು ಹಾಯಿಸದೇ ಇರುವುದಿಲ್ಲ.

ಕಳೆದ ವರ್ಷ ಬರದಿಂದಾಗಿ ಭದ್ರಾ ನೀರಿನ ಕೊರತೆ ಎದುರಿಸುತ್ತಿತ್ತು. ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ಆಂತರಿಕ ಸರದಿ ರೂಪಿಸಿ ಹರಿಸಿದ್ದರ ಪರಿಣಾಮ ಬೇಸಿಗೆ ಭತ್ತದ ಬೆಳೆಗೆ ನೀರಿಲ್ಲದೆ ಭದ್ರಾ ಅಚ್ಚುಕಟ್ಟಿನಲ್ಲಿ ಗದ್ದೆಗಳು ಬೀಳು ಬಿದ್ದಿದ್ದವು. ಕೇವಲ ತೋಟಗಳಿಗೆ ನೀರು ಹರಿಸಲಾಗಿತ್ತು.

ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ನಾಲೆಯ ಕೊನೆಯ ಭಾಗಕ್ಕೆ ಸಮರ್ಪಕ ನೀರು ಸಿಗದೆ, ಕೆಲವು ತೆಂಗು, ಅಡಿಕೆ, ಬಾಳೆ ತೋಟಗಳು ಒಣಗಿ ಹೋದವು. ಬೆಳೆದು ನಿಂತ ಗಿಡಗಳಿಗೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿ ಕೆಲವು ಭಾಗದಲ್ಲಿ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೊರೆಹೋಗಿ ಹರಸಾಹಸಪಟ್ಟಿದ್ದರು.

ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿ, ನದಿಗೆ ನೀರು ಹರಿಸಿದ್ಗದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದಾಗ ಈ ಬಾರಿ ಭದ್ರಾ ಜಲಾಶಯವೂ ಬೇಗ ಭರ್ತಿಯಾಗಬಹುದು ಎಂಬ ವಿಶ್ವಾಸ ಜನರಲ್ಲಿ ಮೂಡಿತ್ತು. ಕೆಲವು ವರ್ಷಗಳಿಂದ ಸಕಾಲಕ್ಕೆ ಮಳೆ ಸುರಿಸದ ವರುಣ ಕಣ್ಣಾಮುಚ್ಚಾಲೆ ಆಡಿ ರೈತರ ನೆಮ್ಮದಿ ಹಾಳುಮಾಡಿದ್ದ.

ಈ ಬಾರಿ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಜಲಾನಯನ ಪ್ರದೇಶದಲ್ಲಿ ಸಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ಕೃಷಿ ವಲಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಭದ್ರಾ ತುಂಬಿರುವುದರಿಂದ ರಸಗೊಬ್ಬರ, ಕೀಟನಾಶಕಗಳ ವ್ಯಾಪಾರಿಗಳಿಗೂ ಶುಕ್ರದೆಸೆ.

ಈ ಭಾಗದ ಪ್ರಮುಖ ಬೆಳೆ ಭತ್ತ. ಅಂದಾಜು 65,000 ಹೆಕ್ಟರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಂತೆ ಮುಂಗಾರು ಮತ್ತು ಹಿಂಗಾರು ಎರಡು ಹಂಗಾಮಿನ ಭತ್ತದ ಬೆಳೆಗೆ ನೀರು ಸಿಗುವುದರಿಂದ ಕೃಷಿಕರು ಹರ್ಷ ವ್ಯಕ್ತಪಡಿಸುತ್ತಾರೆ.

ಮುಂಗಾರು ಹಂಗಾಮಿನಲ್ಲಿ 65,000 ಹೆಕ್ಟೇರ್‌, ಬೇಸಿಗೆ ವೇಳೆ 45,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 8.50 ಲಕ್ಷ ಕ್ವಿಂಟಲ್‌ ಭತ್ತ ಬೆಳೆಯುವುದರಿಂದ ಉಪ ಉತ್ಪನ್ನಗಳಾದ ರೈಸ್‌ ಬ್ರಾನ್‌, ದಪ್ಪ ನುಚ್ಚು, ಸಣ್ಣ ನುಚ್ಚು ಇಟ್ಟಿಗೆ ಭಟ್ಟಿ, ಹೋಟೆಲುಗಳಲ್ಲಿ ಬಳಸುವ ಗೊಳಲಿಗೂ ಬೇಡಿಕೆ ಇದೆ.

ಎರಡು ಹಂಗಾಮಿನಲ್ಲೂ ಭತ್ತ ಬೆಳೆದಲ್ಲಿ ಅಕ್ಕಿಯ ಬೆಲೆ ಸಹಜವಾಗಿಯೇ ಕೊಂಚ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಮುಂಗಾರು ಮತ್ತು ಹಿಂಗಾರು ಭತ್ತದ ಬೆಳೆಗೆ ನೀರು ಸಿಗುವುದರಿಂದ ಸಂಕಷ್ಟದಲ್ಲಿದ್ದ ಅಕ್ಕಿ ಗಿರಣಿ ಉದ್ಯಮಕ್ಕೂ ಅನುಕೂಲ ಆಗಲಿದೆ. ಒಟ್ಟಾರೆ ಭದ್ರಾ ಜಲಾಶಯದ ಒಡಲು ತುಂಬುವುದರಿಂದ ಜಿಲ್ಲೆಯಲ್ಲಿ ವಾರ್ಷಿಕ ಸಾವಿರಾರು ಕೋಟಿ ವ್ಯವಹಾರ ನಡೆದು, ಆರ್ಥಿಕ ಪ್ರಗತಿಗೆ ಪೂರಕವಾಗಲಿದೆ. ಈ ಬಾರಿ ಉತ್ತಮ ಭತ್ತದ ಬೆಳೆ ನಿರೀಕ್ಷೆ ಇದೆ. ಅಣೆಕಟ್ಟೆ ತುಂಬಿರುವುದು ರೈತರಿಗೆ ಮಾತ್ರವಲ್ಲ ನಮ್ಮೆಲ್ಲರಿಗೂ ಹರ್ಷದ ವಿಷಯ ಎನ್ನುತ್ತಾರೆ ಭತ್ತದ ವ್ಯಾಪಾರಿ ಚಿಟ್ಟಕ್ಕಿ ರಮೇಶ್‌, ರೈಸ್‌ ಮಿಲ್‌ ಮಾಲೀಕರಾದ ಎಕ್ಕನಹಳ್ಳಿ ಬಸವರಾಜಪ್ಪ, ಬೆನಕನಕೊಂಡಿ ಚಿದಾನಂದಪ್ಪ, ಮಲ್ಲೇಶ್‌. ಚನ್ನೇಶ್‌, ಬಿ.ಎಂ. ವಾಗೀಶ್ ಸ್ವಾಮಿ.

ರಾಜ್ಯದ ವಿವಿಧ ಭಾಗಗಳಿಗೆ ದಪ್ಪ ಭತ್ತದ ಮಂಡಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ದಪ್ಪ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆ ಇದೆ. ಎರಡೂ ಹಂಗಾಮಿನಲ್ಲಿ ಭತ್ತ ಬೆಳೆಯುವುದರಿಂದ ಮಂಡಕ್ಕಿ ಉದ್ಯಮಕ್ಕೂ ಅನುಕೂಲ. ದಪ್ಪ ಭತ್ತ ಕೊಳ್ಳಲು ರಾಜ್ಯದ ಇತರ ರೈತರನ್ನು, ವ್ಯಾಪಾರಿಗಳನ್ನು ಅರಸಿ ಹೋಗಬೇಕಾಗಿಲ್ಲ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ಮಂಡಕ್ಕಿಯ ಜೊತೆಗೆ ಭತ್ತದ ಇನ್ನೊಂದು ಉತ್ಪನ್ನ ಅವಲಕ್ಕಿ. ದಪ್ಪ, ತೆಳು, ಮೀಡಿಯಂ, ಡೀಲಕ್ಸ್‌ ಅವಲಕ್ಕಿ ತಯಾರಿಸಲು ಉತ್ತಮ ದರ್ಜೆ ದಪ್ಪ ಭತ್ತ ಅವಶ್ಯ. ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಭತ್ತ ಬೆಳೆಯುತ್ತಿದ್ದು ದಪ್ಪ ಭತ್ತ ಕೊಳ್ಳಲು ಬೇರೆಡೆ ಹೋಗಬೇಕಿತ್ತು. ಈ ಬಾರಿ ಸಮಸ್ಯೆ ಇರುವುದಿಲ್ಲ ಎಂಬ ವಿಶ್ವಾಸ ಅವಲಕ್ಕಿ ಉದ್ಯಮಿ ಬಿ. ಬಾಷುಸಾಬ್‌, ಮಂಜಣ್ಣ ಅವರದ್ದು.

ಇದರೊಟ್ಟಿಗೆ ರೈತರು ಮಾರಿದ ಭತ್ತ ಸಂಗ್ರಹಿಸಲು ಭತ್ತ ಸಂಗ್ರಹಿಸಲು ಗೋಣಿ ಚೀಲ ಅತ್ಯಗತ್ಯ. ಗೋಣಿ ಚೀಲ ಕೊಳ್ಳುವುದು, ಹಳೆಯದನ್ನು ತೇಪೆ ಹಾಕಿ ಸ್ವಚ್ಛಗೊಳಿಸಿ ತಯಾರಿ ಮಾಡುವ ಉದ್ಯಮದ ಕಾರ್ಮಿಕರಿಗೂ ಭರಪೂರ ಕೆಲಸ ದೊರೆತು, ನೆಮ್ಮದಿ ತರಲಿದೆ. ಅಕ್ಕಿ ಸಂಗ್ರಹಣೆಗೆ ಬಹುತೇಕ ಭಾಗದಲ್ಲಿ ಆಕರ್ಷಕ ಚೀಲ ಬಳಸಲಾಗುತ್ತಿದೆ. ಂತೆಯೇ ಚೀಲಗಳ ವಿನ್ಯಾಸ, ಬ್ರಾಂಡ್‌, ವಿಳಾಸ, ಉತ್ಪನ್ನದ ವಿವರದ ಮುದ್ರಣದ ಕೆಲಸ ಮಾಡುವವರಿಗೂ ಈ ಬಾರಿ ಅನುಕೂಲವಾಗಿದೆ.

ಕೃಷಿ ಕೆಲಸಕ್ಕೆ ಟ್ರಾಕ್ಟರ್‌, ಕಲ್ಟಿವೇಟರ್‌, ಗೋರಮಣೆ ಅತ್ಯವಶ್ಯ. ದುರಸ್ತಿ ಕಾರ್ಯ ಭರದಿಂದ ಸಾಗಿದೆ. ವಾಹನೋದ್ಯಮಕ್ಕೆ ಅನುಕೂಲಕರ.

ಭತ್ತದ ಬೆಳೆಯ ಕೊನೆ ಉಪ ಉತ್ಪನ್ನ ಒಣಹುಲ್ಲು. ಹಸು, ಎಮ್ಮೆಗಳಿಗೆ ಅತ್ಯವಶ್ಯ. ಕಳೆದ ಬಾರಿ ಮೇವಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಭತ್ತ ಬೆಳೆಯದ ಕಾರಣ ಸಮಸ್ಯೆ ಉಂಟಾಗಿತ್ತು. ಈ ಬಾರಿ ಮೇವಿನ ಕೊರತೆ ಆಗುವುದಿಲ್ಲ ಎಂಬ ಆಶಯ ಕೃಷಿಕ ನಂದಿತಾವರೆ ಗದ್ದಿಗೆಪ್ಪ ಪೂಜಾರ್ ಅವರದ್ದು.

ಕೃಷಿ ಕ್ರಾಂತಿ- ಬೆಳೆ ಪರಿವರ್ತನೆ:‌

1965ಕ್ಕೂ ಹಿಂದೆ ವಿಭಜನಾಪೂರ್ವ ಚಿತ್ರದುರ್ಗ ಜಿಲ್ಲೆ ಖುಷ್ಕಿ ಬೆಳೆ ಬೆಳೆಯುವ ಪ್ರದೇಶವಾಗಿತ್ತು. ಹತ್ತಿ, ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಹೆಸರು, ಉದ್ದು ಹಾಗೂ ಮಳೆ ಕಡಿಮೆಯಾದರೆ ಹುರುಳಿ, ಕಡಲೆ, ಎಳ್ಳುಕಾಳು ಬೆಳೆಯಲಾಗುತ್ತಿತ್ತು.

ಭದ್ರಾ ಜಲಾಶಯ ನಿರ್ಮಾಣವಾದ ನಂತರ ಇಲ್ಲಿನ ಕೃಷಿ ಚಿತ್ರಣವೇ ಬದಲಾಯಿತು. ನಾಲೆಗಳಲ್ಲಿ ನೀರು ಹರಿದು ಬರುತ್ತಿದ್ದಂತೆಯೇ, ‘ಹಸಿರು ಕ್ರಾಂತಿ’ಯೇ ನಡೆದು ಅಡಿಕೆ, ತೆಂಗು, ಬಾಳೆ ತೋಟಗಳಿಂದ ಭೂತಾಯಿ ಹಸಿರು ಹೊದಿಕೆ ಹೊತ್ತು ಕಂಗೊಳಿಸತೊಡಗಿದಳು.

ಕಾಲಕ್ರಮೇಣ ಅಕ್ಕಿ, ಮಂಡಕ್ಕಿ ಗಿರಣಿ, ಸಕ್ಕರೆ ಕಾರ್ಖಾನೆ, ಹೈನುಗಾರಿಕೆ, ಭತ್ತದ ವ್ಯಾಪಾರ– ವಹಿವಾಟು ಹೆಚ್ಚಾಯಿತು. ಖುಷ್ಕಿ ಬೆಳೆ ಜೋಳ, ರಾಗಿ ಬೆಳೆ ಹೊಲ ಹಂತಹಂತವಾಗಿ ಮರೆಯಾದವು. ಈಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಯಿತು. ಭದ್ರಾನಾಲೆ ನೀರಿನ ಕೊರತೆ ತಾಂಡವಾಡತೊಡಗಿತು. ಅಧಿಕೃತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸಾದ್ಯವಾಗದೇ ರೈತರ ಹೋರಾಟ, ಪ್ರತಿಭಟನೆಗಳು ಸಾಮಾನ್ಯವಾದವು.

ನಗರ ಪ್ರದೇಶಗಳ ಹೊರಭಾಗದಲ್ಲಿದ್ದ ಭತ್ತದ ಗದ್ದೆಗಳು ಪರಿವರ್ತನೆಗೊಂಡು ಬಡಾವಣೆಗಳಾದವು. ಭದ್ರಾ ನಾಲೆಗಳು ಈ ಭಾಗದ 100ಕ್ಕೂ ಹೆಚ್ಚು ಕೆರೆಗಳಿಗೆ ಜಲಮೂಲ. ತುಂಗಭದ್ರಾ ನದಿಯು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಅನೇಕ ನಗರ, ಪಟ್ಟಣ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಆಸರೆ.

ಆಷಾಢದ ನಂತರದ ಶ್ರಾವಣ ಕಳೆದು ಗಣೇಶೋತ್ಸವ, ನವರಾತ್ರಿ, ದಸರಾ, ದೀಪಾವಳಿಗೆ ನಂತರದ ಸಂಕ್ರಾಂತಿಗೆ ಜನರಲ್ಲಿ ಸಂಭ್ರಮ ಮನೆಮಾಡಲು, ಮುಖಗಳಲ್ಲಿ ಮಂದಹಾಸ ಕಂಗೊಳಿಸಲು ಭದ್ರೆಯ ಒಡಲು ಭರ್ತಿಯಾದಾಗಲೇ ಸಾಧ್ಯ.

ನಾಲೆ ದುರಸ್ತಿಯಾಗಿ ಕೊನೆಭಾಗಕ್ಕೆ ನೀರು ಬರಲಿ ಭದ್ರಾ ನಾಲೆ ಆಧುನೀಕರಣದ ನಂತರ ಒಮ್ಮೆಯೂ ದುರಸ್ತಿ ಆಗಿಲ್ಲ. ಡ್ರಾಪ್‌ ಬಿದ್ದಿವೆ. ಪೈಪ್‌ ಔಟ್ಲೆಟ್‌ ಲೈನಿಂಗ್‌ ಹೊಲಗಾಲುವೆ ಹೊಸದಾಗಿ ನಿರ್ಮಿಸಿ ಭದ್ರಾ ನಾಲಾ ವ್ಯಾಪ್ತಿಯ ಕೊನೆಭಾಗಕ್ಕೆ ಈ ಬಾರಿ ನೀರು ಹರಿಸಬೇಕು ಎನ್ನುತ್ತಾರೆ ಭಾನುವಳ್ಳಿ ರೈತ ಮುಖಂಡ ಕೊಟ್ರೇಶ್‌ ಹಾಲೂರು ನಾಗರಾಜ್‌ ಷಣ್ಮುಖಯ್ಯ ಫಾಲಾಕ್ಷಪ್ಪ. ದೇವರಬೆಳಕೆರೆ ಪಿಕಪ್‌ ನಾಲೆಯಲ್ಲಿ ಹೂಳು ತುಂಬಿರುವ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೂಳು ಎತ್ತುವುದಲ್ಲದೇ ಗೇಟ್‌ಗಳಿಗೆ ಅಡ್ಡಲಾಗಿರುವ ಜಲಸಸ್ಯ ತೆರವು ಕಾರ್ಯವೂ ನನೆಗುದಿಗೆ ಬಿದ್ದಿದೆ ಎಂಬುದು ಅವರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.