ದಾವಣಗೆರೆ: ಹಕ್ಕಿಜ್ವರದ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿದ್ದಂತೆಯೇ ಕುಸಿದಿದ್ದ ಕೋಳಿ ಮಾಂಸ ಮತ್ತು ಮೊಟ್ಟೆ ಧಾರಣೆ ನಿಧಾನವಾಗಿ ಏರಿಕೆಯಾಗುತ್ತಿದೆ. ಒಂದೂವರೆ ತಿಂಗಳಿಂದ ನಷ್ಟಕ್ಕೆ ಸಿಲುಕಿದ್ದ ಕುಕ್ಕುಟೋದ್ಯಮ ಚೇತರಿಕೆ ಹಾದಿಗೆ ಮರಳಿದೆ.
ಬೇಸಿಗೆಯಲ್ಲಿ ಮಾಂಸದ ಕೋಳಿಗಳಿಗೆ ಸೃಷ್ಟಿಯಾಗುತ್ತಿದ್ದ ಬೇಡಿಕೆ ಪ್ರಸಕ್ತ ವರ್ಷ ಇಲ್ಲವಾದರೂ ಏಪ್ರಿಲ್ ತಿಂಗಳ ಧಾರಣೆ ಕುಕ್ಕುಟೋದ್ಯಮಿಗಳಲ್ಲಿ ಸಮಾಧಾನ ಮೂಡಿಸಿದೆ. ಬಿಸಿಲಿನ ತಾಪಮಾನಕ್ಕೆ ಮೊಟ್ಟೆ ಸೇವನೆ ಕಡಿಮೆಯಾದರೂ ಕೋಳಿ ಮೊಟ್ಟೆಯ ಉತ್ಪಾದನಾ ವೆಚ್ಚ ಲಭ್ಯವಾಗುತ್ತಿದ್ದು, ನಷ್ಟದ ಹೊರೆ ತಗ್ಗಿದೆ.
‘ಹಕ್ಕಿಜ್ವರದ ಭೀತಿ ಸೃಷ್ಟಿಯಾಗಿದ್ದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರತಿ ಮೊಟ್ಟೆಯ ಸಗಟು ದರ ₹ 3.25ಕ್ಕೆ ಕುಸಿದಿತ್ತು. ಕೆ.ಜಿ. ಕೋಳಿ ಮಾಂಸದ ಸಗಟು ದರ ₹ 58ಕ್ಕೆ ಇಳಿದಿತ್ತು. ರೋಗದ ಭೀತಿ ದೂರವಾಗುತ್ತಿದ್ದಂತೆಯೇ ಮೊಟ್ಟೆ ಹಾಗೂ ಮಾಂಸದ ಬೆಲೆ ನಿಧಾನವಾಗಿ ಏರಿಕೆಯ ಹಾದಿಗೆ ಬಂದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರತಿ ಕೆ.ಜಿ. ಕೋಳಿ ಮಾಂಸದ ಸಗಟು ದರ ₹ 100ರ ಗಡಿ ದಾಟಿತ್ತು. ಪ್ರತಿ ಮೊಟ್ಟೆಯ ಸಗಟು ದರ ₹ 4.25ಕ್ಕೆ ತಲುಪಿದೆ’ ಎಂದು ಕೋಳಿ ಫಾರಂ ಮಾಲೀಕರೊಬ್ಬರು ವಿವರಿಸಿದರು.
ಪ್ರತಿ ಮೊಟ್ಟೆಯ ಸರಾಸರಿ ಉತ್ಪಾದನಾ ವೆಚ್ಚ ₹ 4.25 ಇದೆ. ಪ್ರತಿ ಕೆ.ಜಿ ಕೋಳಿ ಮಾಂಸದ ಉತ್ಪಾದನಾ ವೆಚ್ಚ ₹ 85 ರಿಂದ ₹ 90 ಇದೆ. ಹಕ್ಕಿಜ್ವರದ ಭೀತಿಯಲ್ಲಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾಂಸ ಹಾಗೂ ಮೊಟ್ಟೆಯನ್ನು ಮಾರಾಟ ಮಾಡಲಾಗಿತ್ತು.
‘ಬೇಸಿಗೆ ಬಿಸಿಲಿನಲ್ಲಿ ಮಾಂಸದ ಕೋಳಿಯೊಂದು ಎರಡೂಕಾಲು ಕೆ.ಜಿ ಬೆಳವಣಿಗೆ ಹೊಂದಲು 47 ದಿನ ಬೇಕಾಗುತ್ತದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಒಂದು ವಾರ ಮೊದಲೇ ಈ ಗಾತ್ರ ಪಡೆಯುತ್ತವೆ. ಶಾಲಾ ರಜೆ, ಪ್ರವಾಸೋದ್ಯಮ, ಹಬ್ಬ, ಮದುವೆ, ಜಾತ್ರೆಯ ಕಾರಣಕ್ಕೆ ಮಾಂಸದ ಕೋಳಿಗೆ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚು. ಮಾರ್ಚ್‌ನಿಂದ ಜೂನ್‌ವರೆಗೆ ಉತ್ತಮ ವಹಿವಾಟು ನಡೆಯುತ್ತದೆ. ಆದರೆ, ಪ್ರಸಕ್ತ ಹಂಗಾಮು ತೃಪ್ತಿದಾಯಕವಾಗಿಲ್ಲ’ ಎಂದು ದಾವಣಗೆರೆ ತಾಲ್ಲೂಕಿನ ಹೆಬ್ಬಾಳದ ಪಶುವೈದ್ಯ ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಕ್ಕದ ಅಂಧ್ರಪ್ರದೇಶದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರದ ಸೋಂಕು ಫೆಬ್ರುವರಿಯಲ್ಲಿ ಕರ್ನಾಟಕಕ್ಕೂ ಕಾಲಿಟ್ಟಿತ್ತು. ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಹಕ್ಕಿಜ್ವರಕ್ಕೆ ಕೋಳಿಗಳು ಬಲಿಯಾಗಿದ್ದವು. ಇದರಿಂದ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ, ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಜನರು ಹಿಂದೇಟು ಹಾಕಿದ್ದರು. ಇದರಿಂದ ಕುಕ್ಕುಟೋದ್ಯಮ ತತ್ತರಗೊಂಡಿತ್ತು.
ಹಕ್ಕಿಜ್ವರದ ಸೋಂಕು ಜಿಲ್ಲೆಯಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಕುಕ್ಕುಟೋದ್ಯಮವನ್ನು ಬಾಧಿಸಿತು. ಸೋಂಕಿನ ಭೀತಿ ಈಗ ಎಲ್ಲೆಡೆ ತಗ್ಗಿದೆ. ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ.–ಎನ್.ಮಂಜುನಾಥ್, ಪಶುವೈದ್ಯ ಹೆಬ್ಬಾಳ ದಾವಣಗೆರೆ ತಾಲ್ಲೂಕು
3 ಚೆಕ್‌ಪೋಸ್ಟ್ ಸ್ಥಗಿತ
ಹಕ್ಕಿಜ್ವರದ ಸೋಂಕು ತಡೆಯಲು ಜಿಲ್ಲೆಯ ಗಡಿಭಾಗದಲ್ಲಿ ತೆರೆದಿದ್ದ 3 ಚೆಕ್‌ಪೋಸ್ಟ್‌ಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಒಂದು ತಿಂಗಳು ಕಾರ್ಯನಿರ್ವಹಿಸಿದ್ದ ಚೆಕ್‌ಪೋಸ್ಟ್‌ಗಳು ಸೋಂಕು ಹರಡದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು.
‘ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಹಾಗೂ ಹರಿಹರ ತಾಲ್ಲೂಕಿನ ವಿಜಯನಗರ ಜಿಲ್ಲಾ ಗಡಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿತ್ತು. ನಿತ್ಯ ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು. ಸರಕು ಸಾಗಣೆ ವಾಹನಗಳ ಮೇಲೆ ನಿಗಾ ಇಡಲಾಗಿತ್ತು. ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಸೋಂಕು ಕಡಿಮೆಯಾಗಿದೆ. ಹೀಗಾಗಿ ಚೆಕ್‌ಪೋಸ್ಟ್ ಸ್ಥಗಿತಗೊಳಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಚ್.ಎಂ.ಮಹೇಶ್ ತಿಳಿಸಿದರು.
ಕೋಳಿ ಗೊಬ್ಬರಕ್ಕೆ ತಟ್ಟದ ಬಿಸಿ
ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡಿದ್ದರಿಂದ ಕೋಳಿಗೊಬ್ಬರ ಬಳಕೆ ಮಾಡದಂತೆ ರೈತರಿಗೆ ಸಲಹೆ ನೀಡಲಾಗಿತ್ತು. ಕೋಳಿಗೊಬ್ಬರವನ್ನು ಫಾರಂಗಳಿಂದ ಹೊರ ತೆಗೆಯದಂತೆ ಕೋಳಿಫಾರಂ ಮಾಲೀಕರಿಗೆ ಪಶುವೈದ್ಯಕೀಯ ಸೇವಾ ಇಲಾಖೆ ಸೂಚಿಸಿತ್ತು. ಇದು ಕೋಳಿ ಗೊಬ್ಬರದ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
‘ಫಾರಂಗಳಿಗೆ ಹೊರಗಿನ ವಾಹನ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಬೇಸಿಗೆ ಸಂದರ್ಭದಲ್ಲಿ ಗೊಬ್ಬರ ಹೊರತೆಗೆದರೆ ನೊಣಗಳ ಸಂಖ್ಯೆ ಹೆಚ್ಚುತ್ತದೆ. ಹೀಗಾಗಿ ಅಕ್ಟೋಬರ್ ಬಳಿಕ ಗೊಬ್ಬರ ಮಾರಾಟಕ್ಕೆ ನಿರ್ಧರಿಸಿದ್ದೇವೆ. ಪ್ರತಿ ಟನ್ ಗೊಬ್ಬರಕ್ಕೆ ₹ 2500 ಬೆಲೆ ಇದೆ. ದರದಲ್ಲಿ ವ್ಯತ್ಯಾಸ ಉಂಟಾಗಿಲ್ಲ’ ಎಂದು ದಾವಣಗೆರೆಯ ಕೋಳಿ ಫಾರಂ ಮಾಲೀಕ ಮಲ್ಲಿಕಾರ್ಜುನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.