ADVERTISEMENT

ಕಾಶ್ಮೀರದ ವಿಶೇಷ ಸ್ಥಾನಮಾನ | ಸರ್ಕಾರದ ಪ್ರಸ್ತಾವಕ್ಕೆ ಬಿಜೆಪಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 14:52 IST
Last Updated 5 ಆಗಸ್ಟ್ 2019, 14:52 IST
ದಾವಣಗೆರೆ ಜಯದೇವ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಸಂಭ್ರಮಾಚರಣೆ ಮಾಡಿದರು
ದಾವಣಗೆರೆ ಜಯದೇವ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಸಂಭ್ರಮಾಚರಣೆ ಮಾಡಿದರು   

ದಾವಣಗೆರೆ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (370) ರದ್ದು ಮಾಡುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಇಲ್ಲಿನ ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಹಿ ಹಂಚಿ, ಕುಣಿದು ಸಂಭ್ರಮಿಸಲಾಯಿತು.

ದೇಶದ ಎಲ್ಲ ಜನರಿಗೆ ಒಂದೇ ಹಕ್ಕು, ಒಂದೇ ಕಾನೂನು ಎಂಬುದು ಇವತ್ತಿನಿಂದ ಜಾರಿಯಾಗಿದೆ. ಹಿಂದೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದಗಲೂ ಕೆಲವರು ಬ್ರಿಟಿಷರೇ ಇರಲಿ ಎಂದು ಹೇಳಿದ್ದರು. ಹಾಗೆ ಈಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು. ವಿರೋಧದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಈ ಸಂದರ್ಭದಲ್ಲಿ ಹೇಳಿದರು.

ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಕಾನೂನು ಇರಬಾರದು ಎಂಬುದು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಕನಸು ಮತ್ತು ಹೋರಾಟವಾಗಿತ್ತು. ಇವತ್ತು ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಭಾರತೀಯರೆಲ್ಲ ಸಂತೋಷ ಪಡುವ ದಿನ ಇದು. ಇದನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ಪಕ್ಷದ ಮುಖಂಡರಾದ ರಾಜಶೇಖರ್‌, ಧನಂಜಯ ಕಡ್ಲೇಬಾಳ್‌, ಶಿವಶಂಕರ್‌, ರಾಜನಹಳ್ಳಿ ಶಿವಕುಮಾರ್‌, ವೈ. ಮಲ್ಲೇಶ್‌, ಓಂಕಾರಪ್ಪ, ಆನಂದರಾಜ್‌, ಡಿ.ಕೆ. ಕುಮಾರ್‌, ಮುಕುಂದ್‌, ಮಂಜುನಾಥ, ಎಚ್‌.ಸಿ. ಭಾಗ್ಯ, ಮಂಜುಳಾ, ದೇವಿರಮ್ಮ, ದಾಕ್ಷಾಯಿಣಿ, ಗಾಯತ್ರಿ, ಶಾಂತಾ, ಶಿವನಗೌಡ ಪಾಟೀಲ್‌, ಶ್ರೀಕಾಂತ್‌, ಗೋಪಿನಾಥ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.