ದಾವಣಗೆರೆ: ಅಲಿಬಾಬ ಮತ್ತು 40 ಕಳ್ಳರ ತದ್ರೂಪವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಡೋಗಿ ಮಂತ್ರಿಗಳು. ಸರ್ಕಾರದ ಖಜಾನೆಯನ್ನು ಕೊಳ್ಳೆ ಹೊಡೆದ ಇವರು ಬೆಲೆ ಏರಿಕೆಯ ಹೆಸರಿನಲ್ಲಿ ಜನರ ಜೇಬಿಗೂ ಕೈಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಟೀಕಿಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 3ನೇ ಹಂತದ ಜನಾಕ್ರೋಶ ಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಪುರುಷರು ಬಾರುಕೋಲು ಹಾಗೂ ಮಹಿಳೆಯರು ಪೊರಕೆ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದ ಖಜಾನೆಯನ್ನು ಕಳ್ಳರೆಲ್ಲರೂ ಸೇರಿ ಲೂಟಿ ಮಾಡಿದ್ದಾರೆ. ಕೊಳ್ಳೆ ಹೊಡೆಯಲು ಮತ್ತೆ ಖಜಾನೆ ಭರ್ತಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಕರ್ನಾಟಕದ 300 ಕಿ.ಮೀ ಉದ್ದದ ಕರಾವಳಿಗೆ ಅಪ್ಪಳಿಸುವ ಸಮುದ್ರದ ತೆರೆ ಹಾಗೂ ಉಸಿರಾಡುವ ಗಾಳಿ ಹೊರತುಪಡಿಸಿ ಎಲ್ಲದಕ್ಕೂ ರಾಜ್ಯದಲ್ಲಿ ತೆರಿಗೆ ವಿಧಿಸಲಾಗಿದೆ’ ಎಂದು ಕುಟುಕಿದರು.
‘ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಹಾಲು, ಅಡುಗೆ ಎಣ್ಣೆ, ಇಂಧನ, ಕಂದಾಯ ಸೇರಿ 48 ರೀತಿಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯದ ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರಾಜ್ಯದಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಆದರೆ, ಪ್ರತಿ ಕಚೇರಿಯಲ್ಲಿ ಕಲೆಕ್ಷನ್ ಏಜೆಂಟ್‌ಗಳನ್ನು ನೇಮಕ ಮಾಡಲಾಗಿದೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕರೊಬ್ಬರು ಕೊಲೆಯಾಗಿದ್ದಾರೆ. ಜನರು ಮನೆಯಿಂದ ಹೊರಬರಲು ಭಯಪಡು ಸ್ಥಿತಿ ನಿರ್ಮಾಣವಾಗಿದೆ. ಹಾಡಹಗಲೇ ಬ್ಯಾಂಕ್‌ಗಳು ದರೋಡೆಯಾಗುತ್ತಿವೆ. ರಾಜಕೀಯ ವಿರೋಧಿಗಳನ್ನು ಆತ್ಮಹತ್ಯೆಗೆ ಪ್ರಚೋದಿಸುವ ಹುನ್ನಾರವೂ ನಡೆಯುತ್ತಿದೆ. ಕುಂಭಮೇಳದಲ್ಲಿ ಮುಳುಗೆದ್ದ ಮಾತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಪ, ಕಳಂಕ ನಿವಾರಣೆಯಾಗುವುದಿಲ್ಲ’ ಎಂದರು.
‘ಬೇಸಿಗೆ ಬಿಸಿಲಿನಂತೆ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರಿಗೆ ಇದು ಗೊತ್ತೇ ಆಗುತ್ತಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿರುವ ಅವರಿಗೆ ಜನರ ಸಮಸ್ಯೆ ಅರ್ಥ ಆಗುವುದಿಲ್ಲ. ಶೇ 60ರಷ್ಟು ಲಂಚ ಪಡೆಯುತ್ತಿರುವ ಆರೋಪ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕೇಳಿ ಬಂದಿದೆ. ಬಿಜೆಪಿ ಅಧಿಕಾರವಧಿಯಲ್ಲಿ ಎದುರಾದ ಆರೋಪವೂ ಸೇರಿದಂತೆ ಎಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸಲು ನೀವು ಸಿದ್ಧರಿದ್ದೀರಾ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷ, ವಿಧಾನಪರಿಷತ್ ಪರಿಷತ್ ಮಾಜಿ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಸಂಪಂಗಿ, ಎಚ್.ಪಿ. ರಾಜೇಶ್, ಬಸವರಾಜ ನಾಯ್ಕ ಹಾಜರಿದ್ದರು.
ಒಳಮೀಸಲಾತಿ ಸೇರಿ ಇತರ ವಿಚಾರಗಳ ಕುರಿತು ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಮುನ್ನೆಲೆಗೆ ತಂದಿದ್ದಾರೆ. ಒಳಮೀಸಲಾತಿ ನೀಡದೇ ಮೂಗಿಗೆ ತಪ್ಪು ಸವರುತ್ತಿದ್ದಾರೆಗೋವಿಂದ ಕಾರಜೋಳ ಸಂಸದ, ಚಿತ್ರದುರ್ಗ
‘ಬ್ರಾಹ್ಮಣರ ಜನಿವಾರವೂ ಸೇರಿದಂತೆ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ರಾಜ್ಯ ಸರ್ಕಾರ ಧಕ್ಕೆಯುಂಟು ಮಾಡಬಾರದು. ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
‘ದೇಶದಾದ್ಯಂತ ಚರ್ಚೆ ಆಗುತ್ತಿರುವ ಜನಿವಾರದ ವಿಚಾರವನ್ನು ಸಿದ್ದರಾಮಯ್ಯ ಹಗುರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಇದನ್ನು ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಬೇಡಿ. ಸಮುದಾಯದ ನಂಬಿಕೆಗಳನ್ನು ಗೌರವಿಸಿ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
‘ಗ್ಯಾರಂಟಿ ಭ್ರಮೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ವಾಸ್ತವ ಸ್ಥಿತಿ ಅರ್ಥವಾಗುತ್ತಿದೆ. ಬೆಂಗಳೂರಿಗೆ ಸೀಮಿತ ಆಗಿದ್ದ ಅವರು ಬಿಜೆಪಿ ಜನಾಕ್ರೋಶ ಯಾತ್ರೆಯಿಂದ ಎಚ್ಚೆತ್ತುಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ’ ಎಂದರು.
‘ರಾಜ್ಯದ ಹಿಂದುಳಿದ ವರ್ಗ ಹಾಗೂ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂಬುದು ಬಿಜೆಪಿ ನಿಲುವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದ್ದಾಗ ಜಾತಿ ಜನಗಣತಿ ವರದಿಯ ಚರ್ಚೆಯನ್ನು ಮುನ್ನೆಲೆಗೆ ತರುತ್ತಾರೆ. ಅವರಿಗೆ ವರದಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಇಲ್ಲ’ ಎಂದು ದೂರಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಹರಿಹರದ ಶಾಸಕ ಬಿ.ಪಿ.ಹರೀಶ್ ಜನಾಕ್ರೋಶ ಯಾತ್ರೆಗೆ ಗೈರಾಗಿದ್ದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೊಂದಿಗೆ ಗುರುತಿಸಿಕೊಂಡ ಬಿಜೆಪಿ ಮುಖಂಡರು ಮಾತ್ರವೇ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
‘ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗೂಡಿ ಪಕ್ಷ ಕಟ್ಟುವ ಕೆಲಸ ಮಾಡಬೇಕಿದೆ. ಜನಾಕ್ರೋಶ ಯಾತ್ರೆ ಮುಗಿದ ಬಳಿಕ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಚರ್ಚೆ ಮಾಡುತ್ತೇನೆ. ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುತ್ತೇನೆ’ ಎಂದು ಬಿ.ವೈ.ವಿಜಯೇಂದ್ರ ಬಹಿರಂಗ ಸಭೆಯಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.