
ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ
ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ಬದಲಾವಣೆ ಮಾಡದೇ ಇದ್ದರೆ ಹೊಸ ಪಕ್ಷ ಕಟ್ಟುತ್ತೇವೆ. ಬಿಜೆಪಿಯ ನಿಷ್ಠಾವಂತರು ಹೊಸ ಪಕ್ಷಕ್ಕೆ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
‘ವಿಜಯೇಂದ್ರ ಬಿಜೆಪಿ ಚುಕ್ಕಾಣಿ ಹಿಡಿದ ಬಳಿಕ ಪಕ್ಷ ದುರ್ಬಲವಾಗಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದೆ. ಹೀಗಾಗಿ, ವಿಜಯೇಂದ್ರ ಬದಲಾವಣೆಗೆ ನಾಯಕರು ಪಟ್ಟು ಹಿಡಿದ್ದಾರೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ವಿಜಯೇಂದ್ರ ನಾಲ್ಕಾರು ಬೆಂಬಲಿಗರನ್ನು ಜೊತೆಯಲ್ಲಿಟ್ಟುಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಹಿಂಬಾಲಕರನ್ನು ಮಾತ್ರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಇಂತಹ ಕಾರ್ಯಗಳು ಪಕ್ಷನಿಷ್ಠರಲ್ಲಿ ಬೇಸರ ಮೂಡಿಸಿವೆ’ ಎಂದರು.
‘ಕಾರಿನ ಡಿಕ್ಕಿಯಲ್ಲಿ ಶಾಲು, ಹಾರ ಇಟ್ಟುಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಬೆಂಬಲಿಗರನ್ನು ಮುಂದೆಬಿಟ್ಟು ಜೈಕಾರ ಹಾಕಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಹಿಂದುತ್ವದ ಅಲೆ ಎದ್ದಿದೆ. ಬಿಜೆಪಿಗೆ ಪರ್ಯಾಯವಾಗಿ ಹೊಸ ಪಕ್ಷ ಕಟ್ಟಿದರೆ ನಿರೀಕ್ಷೆಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಬಂದು ಮುಖ್ಯಮಂತ್ರಿಯಾದರೆ ವಿಜಯೇಂದ್ರ ಉಪಮುಖ್ಯಮಂತ್ರಿ ಆಗುತ್ತಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೆ ಕರ್ನಾಟಕದ ನೈಸರ್ಗಿಕ ಸಂಪತ್ತು ಉಳಿಯುವುದಿಲ್ಲ. ಉಸಿರಾಡುವ ಗಾಳಿಗೂ ತೆರಿಗೆ ಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಆರೋಪಿಸಿದರು.
ಬಿಜೆಪಿಯ ಭಿನ್ನಮತೀಯ ಚಟುವಟಿಕೆಗೆಳಿಗೆ ನಾನು ಸೂತ್ರದಾರನಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ವಿಜಯೇಂದ್ರ ಮೋಸ ಮಾಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರು ಒಂದೆಡೆ ಸೇರಿ ಚರ್ಚಿಸಿದ್ದಾರೆಬಸನಗೌಡ ಪಾಟೀಲ ಯತ್ನಾಳ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.