
ಜಗಳೂರು: ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಮಧ್ಯಭಾಗದಿಂದ ಎರಡೂ ಕಡೆ 69 ಅಡಿಯಷ್ಟು ಏಕರೂಪವಾಗಿ ವಿಸ್ತರಣೆ ಮಾಡದೇ ಇದ್ದಲ್ಲಿ ಬಿಜೆಪಿ ವತಿಯಿಂದ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಹಾಗೂ ಎಚ್.ಪಿ.ರಾಜೇಶ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಮುಖಂಡರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಪಟ್ಟಣದಲ್ಲಿ ರಸ್ತೆ ವಿಸ್ತರಣೆಯನ್ನು 35 ಅಡಿಗೆ ಸೀಮಿತಗೊಳಿಸಿ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. 69 ಅಡಿ ವಿಸ್ತರಣೆ ಮಾಡದಿದ್ದರೆ ಹೋರಾಟ ಅನಿವಾರ್ಯ’ ಎಂದು ಎಸ್.ವಿ.ರಾಮಚಂದ್ರ ಹೇಳಿದರು.
‘ರಸ್ತೆ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದೆ. 69 ಅಡಿ ವಿಸ್ತರಣೆ ಮಾಡದೇ ಅದನ್ನು 35 ಅಡಿಗೆ ಸೀಮಿತಗೊಳಿಸಿರುವ ಹಿಂದಿನ ಮರ್ಮವೇನು?’ ಎಂದು ಎಚ್.ಪಿ.ರಾಜೇಶ್ ಪ್ರಶ್ನಿಸಿದರು.
‘ತಾಲ್ಲೂಕು ಪಂಚಾಯಿತಿ ಮಳಿಗೆಗಳ ಮರುಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಅವ್ಯವಹಾರದ ಅನುಮಾನ ಮೂಡಿದೆ. ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷಿಸಿ ಹೊರಗಿನವರಿಗೆ ಕಾಮಗಾರಿಗಳನ್ನು ನೀಡುತ್ತಿದ್ದು, ಕಾಮಗಾರಿ ಕಳಪೆಯಾಗುತ್ತಿವೆ. ತಾಲ್ಲೂಕಿನಲ್ಲಿ ಅಧಿಕಾರಿಗಳು ಕೆಲಸಮಾಡಲು ಹಿಂದೇಟು ಹಾಕುತ್ತಿದ್ದು ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ’ ಎಂದು ಅವರು ಆರೋಪಿಸಿದರು.
‘ಬಿಜೆಪಿ ಮತ್ತು ಶಾಸಕ ಬಿ.ದೇವೇಂದ್ರಪ್ಪ ಮಧ್ಯೆ ಹೊಂದಾಣಿಕೆ ರಾಜಕಾರಣದ ಮಾತುಗಳು ಸತ್ಯಕ್ಕೆ ದೂರ. ನಾನು ಮಂಜೂರಾತಿ ನೀಡಿದ್ದ 4 ವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪನೆ ಕಾಮಗಾರಿ ವಿಳಂಬವಾಗಿದ್ದು, ಶಾಸಕರು ಗಮನಹರಿಸಬೇಕು. ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸಕಾಲದಲ್ಲಿ ತೆರೆದು ರೈತರಿಗೆ ಅನುಕೂಲ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡದಿರುವುದು ಬೇಸರ ತಂದಿದೆ. ಕೇಂದ್ರಕ್ಕೆ ಶೀಘ್ರವೇ ನಿಯೋಗ ತೆರಳಲಾಗುವುದು’ ಎಂದು ಎಸ್.ವಿ.ರಾಮಚಂದ್ರ ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ ಮರುಳಾರಾಧ್ಯ, ಮುಖಂಡರಾದ ಎಚ್.ಸಿ.ಮಹೇಶ್ , ಎಚ್. ನಾಗರಾಜ್, ಬಿಸ್ತುವಳ್ಳಿ ಬಾಬು, ಪೂಜಾರಿ ಸಿದ್ದಪ್ಪ, ರವಿಕುಮಾರ್, ಕೆಂಚನಗೌಡ, ಹನುಮಂತಪ್ಪ, ಧರ್ಮಾನಾಯ್ಕ, ರೇವಣ್ಣ, ಶಿವಕುಮಾರಸ್ವಾಮಿ, ಶಿವು, ಪಾಪಲಿಂಗಪ್ಪ, ಜೆ.ವಿ.ನಾಗರಾಜ್, ಪ್ರವೀಣ್, ಓಬಳೇಶ್ ಸೇರಿದಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.