ADVERTISEMENT

ದಾವಣಗೆರೆ: ಸ್ಮಾರ್ಟ್‌ ರೈಲು ನಿಲ್ದಾಣಕ್ಕೆ ಶಂಕು ಸ್ಥಾಪನೆ

ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ: ಸಂಸದ ಸಿದ್ದೇಶ್ವರ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 12:02 IST
Last Updated 25 ಜನವರಿ 2019, 12:02 IST
ದಾವಣಗೆರೆಯಲ್ಲಿ ಶುಕ್ರವಾರ ರೈಲು ನಿಲ್ದಾಣದ ನೂತನ ಕಟ್ಟಡದ ನೀಲನಕ್ಷೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅನಾವರಣಗೊಳಿಸಿದರು
ದಾವಣಗೆರೆಯಲ್ಲಿ ಶುಕ್ರವಾರ ರೈಲು ನಿಲ್ದಾಣದ ನೂತನ ಕಟ್ಟಡದ ನೀಲನಕ್ಷೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅನಾವರಣಗೊಳಿಸಿದರು   

ದಾವಣಗೆರೆ: ಐದು ದಶಕಗಳ ನಂತರ ದಾವಣಗೆರೆಯ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಲು ಶುಕ್ರವಾರ ಸಂಸದ ಜಿ.ಎಂ. ಸಿದ್ದೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ‘ಮೈಸೂರು ವಿಭಾಗದ ಏಕೈಕ ಎನ್‌ಎಸ್‌ಜಿ-3 ವರ್ಗದ ರೈಲು ನಿಲ್ದಾಣ ದಾವಣಗೆರೆಯಾಗಿದೆ. 1965ರಲ್ಲಿ ನಿಲ್ದಾಣಗೊಂಡಿದ್ದ ರೈಲು ನಿಲ್ದಾಣ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಅಲ್ಲದೇ ರಸ್ತೆ ಹಾಗೂ ಪ್ಲಾಟ್‌ಫಾರಂಗಿಂತ ನಿಲ್ದಾಣ ಕಟ್ಟಡ ತಗ್ಗಿನಲ್ಲಿದೆ. ಹೀಗಾಗಿ, ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಸ್ಮಾರ್ಟ್‌ ನಿಲ್ದಾಣ ನಿರ್ಮಿಸುವಂತೆ ರೈಲ್ವೆ ಅಧಿಕಾರಿಗಳನ್ನು ಒತ್ತಾಯಿಸಿದ್ದೆ’ ಎಂದು ಹೇಳಿದರು.

‘ಆದರೆ, ಅಧಿಕಾರಿಗಳು ಇರುವ ಕಟ್ಟಡವನ್ನೇ ಅಭಿವೃದ್ಧಿಪಡಿಸಬಹುದು ಎಂದು ಹೇಳಿದ್ದರು. ಹೀಗಾಗಿ, ಸಚಿವ ಪಿಯುಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ, ನಿಲ್ದಾಣ ಕಟ್ಟುವಂತೆ ಆಗ್ರಹಿಸಿದ್ದೆ. ನಿಲ್ದಾಣ ಮಂಜೂರು ಮಾಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದೆ. ಫೆ. 11ಕ್ಕೆ ನಿಲ್ದಾಣದ ಟೆಂಡರ್‌ ತೆರೆಯಲಾಗುತ್ತದೆ. ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಮೇಯರ್‌ ಶೋಭಾ ಪಲ್ಲಾಗಟ್ಟೆ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ರೈಲ್ವೆ ಇಲಾಖೆ ಎಡಿಆರ್‌ಎಂ ಅಜಯ್‌ ಸಿನ್ಹಾ, ಎಂಜಿನಿಯರ್‌ ವರ್ಮ, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಜಯಪ್ರಕಾಶ್‌ ಕೊಂಡಜ್ಜಿ, ಮುಖಂಡರಾದ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಯಶವಂತರಾವ್‌ ಜಾಧವ್‌ ಅವರೂ ಇದ್ದರು.

* * *

ಮತ್ತೆ ಅಶೋಕ ರಸ್ತೆ ಮೇಲ್ಸೇತುವೆ ಚರ್ಚೆ

ನೂತನ ರೈಲು ನಿಲ್ದಾಣ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ನಗರದ ಜ್ವಲಂತ ಸಮಸ್ಯೆ ಅಶೋಕ ರಸ್ತೆ ಮೇಲ್ಸೇತುವೆ ವಿವಾದ ಪ್ರತಿಧ್ವನಿಸಿತು.

ಸಂಸದ ಸಿದ್ದೇಶ್ವರ ಅವರ ಭಾಷಣ ಮುಗಿಯುತ್ತಿದ್ದಂತೆ ‘ಅಶೋಕ ರಸ್ತೆ ಮೇಲ್ಸೇತುವೆ ಬಗ್ಗೆಯೂ ಮಾತನಾಡಿ’ ಎಂದು ಸಭಿಕರು ಒತ್ತಾಯಿಸಿದರು.

ಮತ್ತೆ ಮೈಕ್‌ ಹಿಡಿದ ಸಿದ್ದೇಶ್ವರ, ‘ದಕ್ಷಿಣ ಕ್ಷೇತ್ರದ ಶಾಸಕರು ಕಾರ್ಯಕ್ರಮಕ್ಕೆ ಬಂದಿದ್ದರೆ ನಾನೇ ಈ ವಿಚಾರ ಪ್ರಸ್ತಾಪಿಸುತ್ತಿದ್ದೆ’ ಎಂದು ಮಾತು ಆರಂಭಿಸಿದರು. ಮೇಲ್ಸೇತುವೆ ನಿರ್ಮಾಣಕ್ಕೆಂದು ₹ 35 ಕೋಟಿ ಮಂಜೂರು ಮಾಡಿಸಿ ನಾಲ್ಕು ವರ್ಷಗಳು ಕಳೆದಿವೆ. ಸೇತುವೆ ನಿರ್ಮಾಣವಾಗಬೇಕಿರುವ ಜಾಗ ಪಾಲಿಕೆಗೆ ಸೇರಿದೆ. ಯಾರ ಒತ್ತಡವೋ ಏನೋ? ಅದನ್ನು ಹಸ್ತಾಂತರಿಸಲು ಈ ಹಿಂದಿನ ಜಿಲ್ಲಾಧಿಕಾರಿ ಮನಸ್ಸು ಮಾಡಲಿಲ್ಲ. ಹೊಸ ಜಿಲ್ಲಾಧಿಕಾರಿ ಬಂದಿದ್ದಾರೆ. ಅವರು ಉತ್ಸಾಹಿ ಎಂಬುದನ್ನು ಅವರ ಕೆಲಸ ನೋಡಿ ತಿಳಿದುಕೊಂಡಿದ್ದೇನೆ. ಜಾಗ ನೀಡಿದರೆ ಒಂದು ತಿಂಗಳಿನಲ್ಲಿ ಕೆಲಸ ಆರಂಭಿಸಲು ನಾನು ಸಿದ್ಧ’ ಎಂದು ಘೋಷಿಸಿದರು.

‘ಮಾವ–ಅಳಿಯನ (ಶಾಮನೂರು, ಸಿದ್ದೇಶ್ವರ) ವ್ಯಾಜ್ಯದಿಂದ ಅಶೋಕ ರಸ್ತೆ ಕೆಲಸ ನಿಂತಿದೆ ಎಂದು ಮಾತನಾಡಿಕೊಳ್ಳುತ್ತಾರೆ. ನಮ್ಮ ನಡುವೆ ಯಾವ ವ್ಯಾಜ್ಯವೂ ಇಲ್ಲ. ಜಿಲ್ಲಾಡಳಿತದಿಂದ ಆಗಿರುವ ಸಮಸ್ಯೆಯನ್ನು ಸಚಿವ ವಾಸು ಅವರು ಬಗೆಹರಿಸಲಿ’ ಎಂದು ಆಗ್ರಹಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ‘ಚಿಕ್ಕಜಾಜೂರಿನಂಥ ಸಣ್ಣ ಊರಿನಲ್ಲೂ ಉತ್ತಮ ನಿಲ್ದಾಣ ಆಗಿದೆ. ಆದರೆ, ದಾವಣಗೆರೆಯಲ್ಲಿ ರೈಲು ನಿಲ್ದಾಣ ಆಗಿಲ್ಲ. ಬಹುಶಃ ಮಾವ, ಅಳಿಯನ ಕಾಟದಲ್ಲಿ ನಿಲ್ದಾಣ ನಿರ್ಮಾಣವಾಗಿಲ್ಲ ಎಂದು ನಮ್ಮ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಆಗಬಾರದು. ಹಣ ಬಂದು ಹಲವು ವರ್ಷಗಳಾದರೂ ಅಶೋಕ ರಸ್ತೆ ಮೇಲ್ಸೇತುವೆ ನಿರ್ಮಾಣವಾಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

ಸಚಿವ ಎಸ್‌.ಆರ್‌. ಶ್ರೀನಿವಾಸ, ‘ಮೂಲ ಸೌಕರ್ಯ ಒದಗಿಸಲು ನಿಷ್ಪಕ್ಷಪಾತವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಎಲ್ಲಾ ಪಕ್ಷಗಳ ಶಾಸಕರನ್ನೂ ಆಹ್ವಾನಿಸಿ, ಜಿಲ್ಲಾಡಳಿತದ ನೇತೃತ್ವದಲ್ಲಿ 15 ದಿನಗಳಲ್ಲಿ ಸಭೆ ನಡೆಸುತ್ತೇನೆ. ಮೇಲ್ಸೇತುವೆ ಸಮಸ್ಯೆ ಪರಿಹರಿಸುತ್ತೇನೆ’ ಎಂದು ಹೇಳಿದರು.

* * *

‘ದಕ್ಷಿಣ ಭಾರತದ ಸಸ್ಯಹಾರಿ ಊಟ ಕೊಡಿ’

ರೈಲ್ವೆ ಇಲಾಖೆಯಲ್ಲಿ ಕೇವಲ ಉತ್ತರ ಭಾರತದ ಶೈಲಿ ಆಹಾರ ಪೂರೈಕೆ ಮಾಡುವುದು ಸರಿಯಲ್ಲ. ದಕ್ಷಿಣ ಭಾರತೀಯ ಊಟವನ್ನೂ ಕೊಡಿ. ಬೆಳಗಿನ ವೇಳೆಯಾದರೂ ಸಸ್ಯಹಾರ ನೀಡಿ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

ಮುಂದಿನ 50 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೈಲು ನಿಲ್ದಾಣ ನಿರ್ಮಿಸಿ ಎಂದರು.

* * *

ಸೌಲಭ್ಯ ಒದಗಿಸುವ ಭರವಸೆ

‘ರೈಲು ನಿಲ್ದಾಣಕ್ಕೆ ಬೇಕಿರುವ ಸೌಲಭ್ಯಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನಾಗರಿಕರು ಕೇಳಿಕೊಂಡಿರುವ ಮನವಿಗಳನ್ನು ಗಮನಿಸಿದ್ದೇನೆ. ಎಸ್ಕಲೇಟರ್‌, ಬ್ಯಾಟರಿ ಚಾಲಿತ ವಾಹನ, ಪಾದಚಾರಿ ಮಾರ್ಗ, ಎರಡನೇ ದ್ವಾರದಲ್ಲಿ ಟಿಕೆಟ್‌ ಕೌಂಟರ್‌, ಪ್ಲಾಸ್ಟಿಕ್‌ ಕ್ರಷಿಂಗ್‌ ಮಷಿನ್‌ ಅಳವಡಿಸಲಾಗುವುದು. ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಿ ಮಾದರಿ ನಿಲ್ದಾಣ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ತೋಳಹುಣಸೆವರೆಗೆ ದ್ವಿಪಥ ಮಾರ್ಗ ಪೂರ್ಣಗೊಂಡಿದೆ. ಪಾಮೇನಹಳ್ಳಿ, ಕುರ್ಕಿ, ಹನುಮನಹಳ್ಳಿ, ಬಳಿಯ ರೈಲು ಗೇಟ್‌ ಸಮಸ್ಯೆ ಸರಿಪಡಿಸಲಾಗಿದೆ. ಡಿಸಿಎಂ ಟೌನ್‌ಷಿಪ್‌ ಬಳಿಯ ರೈಲ್ವೆ ಕೆಳ ಸೇತುವೆಯನ್ನು 61 ಮೀಟರ್‌ವರೆಗೆ ವಿಸ್ತರಿಸುವುದಕ್ಕಾಗಿ ₹ 10 ಕೋಟಿ ಮಂಜೂರಾಗಿದೆ. ಈ ಕಾಮಗಾರಿಯೂ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.