ADVERTISEMENT

ಕೆರಳಿದ ಮಾರಿಕೋಣ: ಸ್ಥಳಾಂತರಕ್ಕೆ ಸುರಹೊನ್ನೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 6:29 IST
Last Updated 8 ಏಪ್ರಿಲ್ 2022, 6:29 IST
ನ್ಯಾಮತಿ ಗ್ರಾಮದೇವತೆ ಮಾರಿಕಾಂಬಾ ದೇವಿಗೆ ಬಿಟ್ಟಿರುವ ಕೋಣ.
ನ್ಯಾಮತಿ ಗ್ರಾಮದೇವತೆ ಮಾರಿಕಾಂಬಾ ದೇವಿಗೆ ಬಿಟ್ಟಿರುವ ಕೋಣ.   

ಸುರಹೊನ್ನೆ (ನ್ಯಾಮತಿ): ನ್ಯಾಮತಿ ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಮಾರಮ್ಮ ದೇವಿಯ ಹೆಸರಿನಲ್ಲಿ ಬಿಟ್ಟಿರುವ ಕೋಣ ಸುರಹೊನ್ನೆ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ವಿಪರೀತ ಗಲಾಟೆ ಮಾಡುತ್ತಿದ್ದು, ಹೆಚ್ಚಿನ ಅನಾಹುತ ಮಾಡುವ ಮುನ್ನ ಗ್ರಾಮದಿಂದ ಸ್ಥಳಾಂತರ ಮಾಡುವಂತೆ ಸುರಹೊನ್ನೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಣವು ಸುರಹೊನ್ನೆ ಗ್ರಾಮದಲ್ಲಿ ಶಾಂತವಾಗಿ ಸಂಚರಿಸುತ್ತಿತ್ತು. ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ. ಆದರೆ, ಗ್ರಾಮದಲ್ಲಿ ಹಬ್ಬ ಘೋಷಣೆಯಾಗಿದ್ದು, ಹಬ್ಬಕ್ಕೆ ತಂದಿರುವ ಮರಿ ಕೋಣಗಳು ಮತ್ತು ಮನೆಯಲ್ಲಿ ಸಾಕಿರುವ ಕೋಣಗಳನ್ನು ಕಂಡರೆ ಅವುಗಳ ಮೇಲೆ ಹಲ್ಲೆ ಮಾಡುವುದು ಹಾಗೂ ಬಿಡಿಸಲು ಹೋದವರಿಗೆ ತಿವಿಯಲು ಬರುವ ಮೂಲಕ ಗ್ರಾಮದಲ್ಲಿ ಆತಂಕ ಉಂಟುಮಾಡಿದೆ ಎಂದು ಗ್ರಾಮಸ್ಥರು ನ್ಯಾಮತಿ ಮಾರಿಕಾಂಬ ದೇವಸ್ಥಾನ ಸಮಿತಿಯವರಿಗೆ ಮನವರಿಕೆ ಮಾಡಿದ್ದಾರೆ.

ಗ್ರಾಮದ ಕೆಲವರು ಈಗಾಗಲೇ ಕೋಣದಿಂದ ತಿವಿಸಿಕೊಂಡು ಗಾಯಗೊಂಡಿದ್ದಾರೆ. ನ್ಯಾಮತಿ-ಸುರಹೊನ್ನೆ ಅಕ್ಕಪಕ್ಕದ ಗ್ರಾಮಗಳಾಗಿದ್ದು, ನ್ಯಾಮತಿ ಮಾರಿಕಾಂಬ ದೇವಸ್ಥಾನ ಸಮಿತಿಯವರು ಕೋಣವನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಗ್ರಾಮದ ಹಿರಿಯರು ಮತ್ತು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.