ADVERTISEMENT

‘ನೆರೆ ಸಂತ್ರಸ್ತರಿಗೆ 100 ಮನೆಗಳ ನಿರ್ಮಾಣ’

ಶ್ರೀಶೈಲ ಮಠದಿಂದ 634 ಗ್ರಾಂ ಚಿನ್ನ ದೇಣಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:32 IST
Last Updated 10 ಸೆಪ್ಟೆಂಬರ್ 2019, 20:32 IST
ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ದಾವಣಗೆರೆ: ನೆರೆ ಸಂತ್ರಸ್ತರಿಗೆ ಶ್ರೀಶೈಲ ಪೀಠದಿಂದ 634 ಗ್ರಾಂ ಚಿನ್ನವನ್ನು ಮಾರಾಟ ಮಾಡಿ 100 ಮನೆಗಳನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

‘ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಶ್ರೀಶೈಲ ಪೀಠ ಹಾಗೂ ಇತರೆ ಮಠಾಧೀಶರ ಹಾಗೂ ಸಮಾಜದ ಭಕ್ತರ ಸಹಯೋಗದೊಂದಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ಇದೆ. ಶ್ರೀಶೈಲ ಪೀಠದ ಪಂಡಿತಾರಾಧ್ಯರ ಉದ್ಭವಮೂರ್ತಿಗೆ ಕವಚ ನಿರ್ಮಿಸುವ ಉದ್ದೇಶದಿಂದ ಇಟ್ಟಿದ್ದ ಚಿನ್ನವನ್ನು ಮನೆಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ, ಕುರುಗೋಡದ ರಾಘವಾಂಕ ಸ್ವಾಮೀಜಿ, ಸೊಲ್ಲಾಪುರ ಹೊಟಗಿ ಬೃಹನ್ಮಠದ ಸ್ವಾಮೀಜಿ, ಬಸವನಬಾಗೇವಾಡಿಯ ಶಾಸಕ ಶಿವಾನಂದ ಪಾಟೀಲ್, ದೇವದುರ್ಗದ ಭೀಮನಗೌಡ ಪೊಲೀಸ್ ಪಾಟೀಲ್, ಕಾರಟಗಿಯ ಚನ್ನಬಸಯ್ಯ ಮುತ್ತಿನಪೆಂಡಿಮಠ ಅವರು ತಲಾ ಒಂದು ಮನೆಗಳನ್ನು ನಿರ್ಮಿಸಿಕೊಡಲು ವಾಗ್ದಾನ ಮಾಡಿದ್ದು, ಅನೇಕರು ತಮ್ಮ ಶಕ್ತ್ಯಾನುಸಾರ ಸಹಾಯ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಶಿಥಿಲಗೊಳ್ಳದಂತೆ ಗುಣಮಟ್ಟದ ಕಾಮಗಾರಿ ನಡೆಸಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ರಾಜ್ಯ ಸರ್ಕಾರದ ಜೊತೆ ಚರ್ಚಿಸಿ, ಅದರ ಸಲಹೆಯ ಮೇರೆಗೆ ಅನುಷ್ಠಾನಗೊಳಿಸಲಾಗುವುದು. ಒಂದು ಮನೆಗೆ ₹ 5 ಲಕ್ಷ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ‘ಎರಡು ಮನೆಗಳನ್ನು ನಿರ್ಮಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.