ADVERTISEMENT

ಹೊನ್ನಾಳಿಯ ತರಗನಹಳ್ಳಿಯಲ್ಲಿ ಬಿ.ವೈ. ವಿಜಯೇಂದ್ರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 22:58 IST
Last Updated 21 ಫೆಬ್ರುವರಿ 2026, 22:58 IST
ಹೊನ್ನಾಳಿಯ ತರಗನಹಳ್ಳಿಯಲ್ಲಿ ವಿಬಿ–ಜಿ ರಾಮ್ ಜಿ ಜನಜಾಗೃತಿ ಹಾಗೂ ಪಾದಯಾತ್ರೆ ಸಮಾರೋಪ ಸಮಾರಂಭವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು
ಹೊನ್ನಾಳಿಯ ತರಗನಹಳ್ಳಿಯಲ್ಲಿ ವಿಬಿ–ಜಿ ರಾಮ್ ಜಿ ಜನಜಾಗೃತಿ ಹಾಗೂ ಪಾದಯಾತ್ರೆ ಸಮಾರೋಪ ಸಮಾರಂಭವನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು   

ಹೊನ್ನಾಳಿ: ‘ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಆ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಒಂದು ಕಡೆ ಗ್ಯಾರಂಟಿ ಘೋಷಣೆ ಮಾಡಿದ ಸರ್ಕಾರ, ಆ ಹಣವನ್ನು ಹೆಂಡದ ಮಾರಾಟಕ್ಕೆ ಗುರಿ ನೀಡುವ ಮೂಲಕ ವಾಪಸ್ ಪಡೆದುಕೊಳ್ಳುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ತರಗನಹಳ್ಳಿಯಲ್ಲಿ ಕೇಂದ್ರ ಸರ್ಕಾರದ ವಿಬಿ–ಜಿ ರಾಮ್ ಜಿ ಯೋಜನೆ ಬಗ್ಗೆ ಜನಜಾಗೃತಿ ಹಾಗೂ ಘಂಟಾಪುರದಿಂದ ತರಗನಹಳ್ಳಿವರೆಗೆ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಬಡವರಿಗೆ ಅಗ್ಗದ ಬೆಲೆಯಲ್ಲಿ ಔಷಧಿ ಸಿಗಲಿ ಎಂಬ ಕಾರಣಕ್ಕೆ ಜನೌಷಧಿ ಕೇಂದ್ರಗಳನ್ನು ತೆರೆಯಿತು. ಆದರೆ ಈ ಕಾಂಗ್ರೆಸ್ ಸರ್ಕಾರ ಅದನ್ನೂ ಮುಚ್ಚಿಸಿತು. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳೇ ಸಿಗುತ್ತಿಲ್ಲ. 2.85 ಲಕ್ಷ ಖಾಲಿ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡಿಲ್ಲ. ಉದ್ಯೋಗ ಕೊಡಿ ಎಂದವರ ಮೇಲೆ ಲಾಠಿ ಪ್ರಹಾರ ಮಾಡಿಸುತ್ತಿದೆ’ ಎಂದು ದೂರಿದರು.

ADVERTISEMENT

‘ಸೂರಗೊಂಡನಕೊಪ್ಪದಲ್ಲಿ ನಡೆದ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಒಳಮೀಸಲಾತಿ ಅನ್ಯಾಯ ಖಂಡಿಸಿ ಪ್ರತಿಭಟನೆ ಮಾಡಿದ 25 ಬಂಜಾರ ಸಮುದಾಯದ ಯುವಕರ ವಿರುದ್ಧ ಡಿ.ಕೆ. ಶಿವಕುಮಾರ್ ದೂರು ದಾಖಲಿಸಿದ್ದಾರೆ. ಈ ಸರ್ಕಾರವನ್ನು ಕಿತ್ತೆಸೆಯುವ ದಿನಗಳು ದೂರವಿಲ್ಲ’ ಎಂದರು.

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲೆಸೆದ ದೇಶದ್ರೋಹಿಗಳನ್ನು ಬಂಧಿಸುವ ಬದಲು  ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆಯಲ್ಲಿ ತೊಡಗಿದೆ. ಸರ್ಕಾರ ಕ್ರಮ ಕೈಗೊಳ್ಳದೇ ಹೋದರೆ ಬಾಗಲಕೋಟೆಯ ಜನರೇ ಮಾಡುತ್ತಾರೆ ಎಂದು ಹೇಳಿದರು. 

ಅಶ್ವಮೇಧಯಾಗದ ಕುದುರೆ ಯಾನ ಆರಂಭ: ‘ರಾಜ್ಯ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಅವರು ತೊಡೆ ತಟ್ಟಿ ನಿಂತಿದ್ದಾರೆ. ಹೊನ್ನಾಳಿಯಿಂದ ಅಶ್ವಮೇಧ ಯಾಗದ ಕುದುರೆಯನ್ನು ಬಿಟ್ಟಿದ್ದಾರೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿಕಸಿತ ಗ್ರಾಮೀಣ ಉದ್ಯೋಗ ಯೋಜನೆ ಕುರಿತು ಪಾದಯಾತ್ರೆ ನಡೆಸಿದ್ದೇನೆ. ವಿಜಯೇಂದ್ರ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ’ ಎಂದರು.

ಮಾಜಿ ಸಚಿವ ಕರುಣಾಕರ್ ರೆಡ್ಡಿ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ರಾಮಚಂದ್ರರಾವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್, ಮುಖಂಡರಾದ ದತ್ತಾತ್ರಿ, ಮಾಡಾಳ್ ಮಲ್ಲಿಕಾರ್ಜುನ್, ಕಲ್ಲೇಶ್, ಕಡ್ಲೆಬಾಳು ಧನಂಜಯ, ಕೂಳೇನಹಳ್ಳಿ ಸತೀಶ್, ಅಜಯ್‍ಕುಮಾರ್, ಚಂದ್ರಶೇಖರ್ ಪೂಜಾರ್, ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೆಗೌಡ, ತರಗನಹಳ್ಳಿ ರಮೇಶ್‍ಗೌಡ, ನೆಲಹೊನ್ನೆ ಮಂಜುನಾಥ್, ಮಾರುತಿನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.