ಜಗಳೂರು: ಕಟಾವಾಗಿದ್ದ ಎಲೆಕೋಸನ್ನು ಸತತ ಮಳೆಯ ಪರಿಣಾಮ ಜಮೀನಿನಿಂದ ಹೊರಗೆ ಸಾಗಣೆ ಮಾಡಲು ಸಾಧ್ಯವಾಗದೇ ಬೇಸತ್ತ ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ನೆಲಸಮಗೊಳಿಸಿದ್ದಾರೆ.
ರೈತ ಮಲ್ಲೇಶ್ ಅವರು ಒಂದು ಎಕರೆಯಲ್ಲಿ ₹80,000 ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಬೆಳೆ ಕಟಾವು ಹಂತಕ್ಕೆ ಬಂದ ಸಮಯದಲ್ಲಿ ಸತತ ಒಂದು ತಿಂಗಳಿಂದ ಬಿಡುವಿಲ್ಲದೇ ಮಳೆ ಸುರಿಯಿತು. ಹೀಗಾಗಿ ವ್ಯಾಪಾರಕ್ಕೆ ಯಾರೂ ಮುಂದಾಗಲಿಲ್ಲ. ಮಾರುಕಟ್ಟೆಯಲ್ಲಿಯೂ ಸೂಕ್ತ ಬೆಲೆಯಿಲ್ಲದ ಕಾರಣ ಅವರು ಫಸಲನ್ನು ತೆರವುಗೊಳಿಸಿದ್ದಾರೆ.
‘ತೋಟಗಾರಿಕಾ ಬೆಳೆ ಎಲೆಕೋಸು ಲಾಭ ತರಬಹುದು ಎಂಬ ನಿರೀಕ್ಷೆಯಲ್ಲಿ ನಾಟಿ ಮಾಡಿದ್ದೆ. ಆದರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹8 ದರ ಇತ್ತು. 20 ಟನ್‌ನಷ್ಟು ಎಲೆಕೋಸನ್ನು ಮಳೆ ಬಂದ ಕಾರಣ ವಾಹನಕ್ಕೆ ಲೋಡ್ ಮಾಡಲು ಸಾಧ್ಯವಗಲಿಲ್ಲ. ಈ ವೇಳೆಗೆ ಕಟಾವು ಅವಧಿಯೂ ಮೀರಿತ್ತು. ಯಾರೊಬ್ಬರೂ ಖರೀದಿಸಲು ಮುಂದಾಗಲಿಲ್ಲ. ಆದ್ದರಿಂದ ರೊಟವೇಟರ್ ಹೊಡೆಸಿ ಬೆಳೆಯನ್ನು ನೆಲದಲ್ಲೇ ಕೊಚ್ಚಬೇಕಾಯಿತು’ ಎಂದು ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು.
‘ರೈತರಿಗೆ ಬೆಳೆ ಹಾನಿಯಾಗಿದ್ದರೆ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು. ಎಲೆಕೋಸು ಬೆಳೆ ಅತಿವೃಷ್ಟಿಗೆ ತುತ್ತಾದರೆ ಇಳುವರಿ ಕಡಿಮೆಯಾಗುತ್ತದೆ. ರೈತರು ಆತಂಕಕ್ಕೊಳಗಾಗದೇ ಇಲಾಖೆಯ ಮಾರ್ಗದರ್ಶನ ಪಡೆದು ಹವಾಮಾನದ ಅನುಸಾರ ತೋಟಗಾರಿಕೆ ಬೆಳೆಗೆ ಮುಂದಾಗಬೇಕು’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.